Advertisement

26ರಂದು ಪಂಚರತ್ನ ಸಮಾರೋಪ ಸಮಾವೇಶ: ಎಚ್.ಡಿ.ಕುಮಾರಸ್ವಾಮಿ

01:05 PM Mar 21, 2023 | Team Udayavani |

ಮೈಸೂರು: ‘ಪಂಚರತ್ನ ಯಾತ್ರೆಗೆ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದೆ‌. ಇದೇ 26ರಂದು ಭಾನುವಾರ ನಗರದ ಚಾಮುಂಡಿ ಬೆಟ್ಟದ ತಪ್ಪಲಿನ ಉತ್ತನಹಳ್ಳಿ ರಿಂಗ್ ರಸ್ತೆ ಮೈದಾನದಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು‌.

Advertisement

ರಿಂಗ್ ರಸ್ತೆಯ ಉತ್ತನಹಳ್ಳಿ ಮೈದಾನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮುಂಡೇಶ್ವರಿ ಸನ್ನಿಧಿಯಲ್ಲಿಯೇ ಸಮಾರೋಪ ಆಯೋಜಿಸಲು ಮೂರು ತಿಂಗಳ ಹಿಂದೆಯೇ ನಿಶ್ಚಯಿಸಲಾಗಿತ್ತು. 100 ಎಕರೆ ವಿಸ್ತಾರದ ಮೈದಾನದಲ್ಲಿ 10 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು, ಕಾರ್ಯಕರ್ತರು ಸೇರಲಿದ್ದಾರೆ’ ಎಂದರು.

‘ಏಪ್ರಿಲ್ ಮೊದಲ ವಾರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಲಿದೆ. ಸಮಾರೋಪದ ಮೂಲಕವೇ ಜೆಡಿಎಸ್ ಚುನಾವಣಾ ಪ್ರಚಾರವನ್ನು ಆರಂಭಿಸುತ್ತಿದ್ದೇವೆ’ ಎಂದು ತಿಳಿಸಿದರು.

‘ಪಂಚರತ್ನ’ ಕಾರ್ಯಕ್ರಮಗಳು ಎಚ್.ಡಿ.ದೇವೇಗೌಡರ ಕನಸು‌. ಆರು ದಶಕದ ಸುದೀರ್ಘ ರಾಜಕಾರಣದಲ್ಲಿ ಅವರಿಗೆ ಅಧಿಕಾರ ಸಿಕ್ಕಿದ್ದು ಎರಡೂವರೆ ವರ್ಷಗಳು ಮಾತ್ರ. ಪಂಚರತ್ನ ಕಾರ್ಯಕ್ರಮಗಳ ಜಾರಿಗೆ ₹ 2.5 ಲಕ್ಷ ಕೋಟಿ ಸಂಗ್ರಹಿಸಲಾಗುವುದು. ಬಂಡವಾಳ ವೆಚ್ಚವಾಗಿ ಕಾರ್ಯಕ್ರಮಗಳಿಗೆ ಸದ್ವಿನಿಯೋಗ ಮಾಡಲಾಗುವುದು. ಅದರಿಂದ ನಾಡಿನ ಎಲ್ಲ ಸಮುದಾಯಗಳ ಅಭಿವೃದ್ಧಿ ಆಗಲಿದೆ.  ಸುವರ್ಣ ರಾಮರಾಜ್ಯ ಸ್ಥಾಪನೆಯಾಗಲಿದೆ. ಅಮೃತ ಕಾಲಕ್ಕೆ 2047 ಆಗಬೇಕಿಲ್ಲ. ಐದು ವರ್ಷ ಸಾಕು’ ಎಂದು ತಿಳಿಸಿದರು.

‘2009-10ರಲ್ಲಿಯೇ ಎಲ್ಲ ಬಡವರಿಗೆ ಮನೆ ನೀಡಲಾಗಿದೆಯೆಂದು ಯುಪಿಎ ಸರ್ಕಾರ ಹೇಳಿತ್ತು. ಆದರೆ, ಅದು ಕಾಗದದಲ್ಲಷ್ಟೇ ಇದೆ.  ಬಹಿರ್ದೆಸೆ ಮುಕ್ತ ರಾಜ್ಯವೆಂದು ಘೋಷಣೆಯಾಗಿದ್ದರೂ ಉತ್ತರ ಕರ್ನಾಟಕ‌ ಜಿಲ್ಲೆಗಳಲ್ಲಿ ಶೌಚಾಲಯಗಳಿಲ್ಲ. ಮಹಿಳೆಯರು, ಹೆಣ್ಣು ಮಕ್ಕಳು ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸುಸಜ್ಜಿತ ಆಸ್ಪತ್ರೆ, ಶಾಲೆ, ಬಡವರಿಗೆ ನಿವೇಶನ, ಮನೆ, ಯುವಕರಿಗೆ ಉದ್ಯೋಗ, ರೈತರ ಸಮಸ್ಯೆಗಳಿಗೆ ಪರಿಹಾರ ಪಂಚರತ್ನ ಕಾರ್ಯಕ್ರಮಗಳಲ್ಲಿದೆ’ ಎಂದು ಪ್ರತಿಪಾದಿಸಿದರು.

Advertisement

ಕಾಂಗ್ರೆಸ್‌ನದು ಡ್ಯೂಪ್ಲಿಕೇಟ್ ಕಾರ್ಡ್: ‘ಕಾಂಗ್ರೆಸ್ ಜನರಿಗೆ ನೀಡುತ್ತಿರುವ ಗ್ಯಾರೆಂಟಿ ಕಾರ್ಡ್‌ಗಳು ನಕಲಿ. ಸುಳ್ಳಿನ ಭರವಸೆಯಾಗಿದ್ದು, ರಾಜ್ಯದ ಈಗಿನ ಆರ್ಥಿಕ ಪರಿಸ್ಥಿತಿಯಲ್ಲಿ ಕೊಡುವುದು ಕಷ್ಟ. ಅದು ಸಿದ್ದರಾಮಯ್ಯ ಅವರಿಗೂ ಗೊತ್ತಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.

‘ಕಾಂಗ್ರೆಸ್ ಅಧಿಕಾರದಲ್ಲಿರುವ ಛತ್ತೀಸಗಡ, ರಾಜಸ್ಥಾನದಲ್ಲಿ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತಲ್ಲವೇ? ಬಿಜೆಪಿಯ ಯೋಜನೆಗಳೂ ಕೂಡ ಜಾಹೀರಾತುಗಳಲ್ಲಿ ಕಾಣುತ್ತವೆ. ಅವು ಜನರಿಗೆ ತಲುಪಿವೆಯೇ’ ಎಂದು ಪ್ರಶ್ನಿಸಿದರು.

‘ವಿಜಯಸಂಕಲ್ಪ ಯಾತ್ರೆಯಲ್ಲಿ ಅಧಿಕಾರಿಗಳಿಂದ ಜನರನ್ನು ಕರೆಸುತ್ತಿದ್ದಾರೆ. ನಿಜವಾದ ಫಲಾನುಭವಿಗಳನ್ನು ಕರೆತರುತ್ತಿಲ್ಲ. ಹಣ ಕೊಟ್ಟು ಜನ ಸೇರಿಸುತ್ತಿದ್ದಾರೆ. ಕಂದಾಯ ಸಚಿವ ಆರ್.ಅಶೋಕ ಅವರು ಬಸವರಾಜ ಬೊಮ್ಮಾಯಿ ಅಂಥ ಮುಖ್ಯಮಂತ್ರಿ ನೋಡಿಲ್ಲ ಎಂದು ಹೇಳಿದ್ದಾರೆ. ಇದು ವ್ಯಂಗ್ಯವೋ? ಇನ್ನಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ’ ಎಂದು ಟೀಕಿಸಿದರು.

ಇದನ್ನೂ ಓದಿ:ಸಿದ್ದರಾಮಯ್ಯಗೆ ಆಳಂದ ಕ್ಷೇತ್ರ ಬಿಟ್ಟು ಕೊಡುವೆ: ಬಿ.ಆರ್.ಪಾಟೀಲ್

‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿ, ಎರಡು ಬಾರಿ ಉಪ ಮುಖ್ಯಮಂತ್ರಿ, ಹದಿಮೂರು ಬಾರಿ ಬಜೆಟ್ ಮಂಡಿಸಿರುವ ಮಹಾನ್ ನಾಯಕ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು ಕ್ಷೇತ್ರ ಹುಡುಕಾಡುವುದನ್ನು ನೋಡಿದರೆ ಅನುಕಂಪ ಬರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಭ್ರಷ್ಟಾಚಾರಚಾರ ಮುಕ್ತ ಆಡಳಿತ ನೀಡುತ್ತೇವೆಂದು ಹೇಳುವ ಕಾಂಗ್ರೆಸ್ಸಿಗರಿಗೆ ಅರ್ಕಾವತಿ ಪ್ರಕರಣ ನೆನಪಿಲ್ಲವೇ? ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಆಂತರಿಕ ಹೊಂದಾಣಿಕೆ ಮಾಡಿಕೊಂಡಿವೆ. ಮುಖ್ಯಮಂತ್ರಿಗಳೇ ಅರ್ಕಾವತಿ ಹಗರಣ ₹ 8 ಸಾವಿರ ಕೋಟಿ‌ ಎಂದು ಹೇಳುತ್ತಾರೆ. ಆದರೆ, ಮೂರುವರೆ ವರ್ಷ ಅಧಿಕಾರದಲ್ಲಿದ್ದರೂ ಯಾವುದೇ ಕ್ರಮವಹಿಸಿಲ್ಲ’ ಎಂದು ಹೇಳಿದರು.

‘ಚುನಾವಣೆಗೂ ಮುನ್ನ ಒಕ್ಕಲಿಗರಿಗೆ ಎಷ್ಟು ಮೀಸಲಾತಿ ಕೊಡುತ್ತೀರೆಂದು ಘೋಷಣೆ ಮಾಡಿ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ ಒಕ್ಕಲಿಗರಷ್ಟೇ ಅಲ್ಲದೆ ಎಲ್ಲ ಸಮಾಜಗಳಿಗೂ ನಿಯಮಾವಳಿ ಹಾಗೂ ಕಾನೂನು ಬದ್ಧವಾಗಿ ಮೀಸಲಾತಿ ನೀಡಲಾಗುವುದು. ಅನ್ಯಾಯ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.

‘ಉರಿಗೌಡ, ದೊಡ್ಡ ನಂಜೇಗೌಡ ಹೆಸರಿನಲ್ಲಿ ಹುಡುಗಾಟಿಕೆ ಆಡುತ್ತಿದ್ದ ಬಿಜೆಪಿಗರಿಗೆ ಚುಂಚಶ್ರೀಗಳು ಎಚ್ಚರಿಕೆ ಕೊಟ್ಟಿರುವುದಲ್ಲದೇ ವಿವಾದಕ್ಕೆ ಇತಿಶ್ರೀ ಹಾಡಿದ್ದಾರೆ. ಅವರನ್ನು ಅಭಿನಂದಿಸುವೆ’ ಎಂದರು.

‘ಕಾಂಗ್ರೆಸ್, ಬಿಜೆಪಿ ಬಿ ಟೀಂ ಜೆಡಿಎಸ್ ಅಲ್ಲ. ನಾವು ಕನ್ನಡಿಗರ ಬಿ ಟೀಂ. ನಾನು ಜನರ ಕಷ್ಟಕ್ಕೆ ಕಣ್ಣೀರು ಹಾಕುವುದನ್ನೇ ಕೆಲವರು ಬಲಹೀನತೆ ಎನ್ನುತ್ತಾರೆ. ಹೃದಯ, ಮಾನವೀಯತೆ ಇದ್ದವರಿಗೆ ಬಡವರ ಕಷ್ಟ ಕೇಳಿ ಕಣ್ಣೀರು ಬರುತ್ತದೆ. ಟೀಕೆ ಮಾಡುವವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವೇಗೌಡ ರೋಡ್ ಶೋ: ‘ಸಮಾರೋಪದ ದಿನದಂದೇ ಎಚ್.ಡಿ.ದೇವೇಗೌಡ ಅವರು ಮೈಸೂರಿನ ಶ್ರೀರಾಂಪುರದಿಂದ ಸಮಾವೇಶದ ಸ್ಥಳದವರೆಗೆ 3 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು.

ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವ್, ಮುಖಂಡರಾದ ಕೆ.ವಿ.ಮಲ್ಲೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ನಗರ ಘಟಕದ ಅಧ್ಯಕ್ಷ ಚಲುವೇಗೌಡ, ಮುಖಂಡರಾದ ಪ್ರೇಮಾ ಶಂಕರೇಗೌಡ, ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಎಸ್ ಬಿಎಂ ಮಂಜು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next