Advertisement

ಖಾತೆಗೆ ಭಾರೀ ಲಾಬಿ; ಸೋನಿಯಾ-ದೇವೇಗೌಡರ ಸಮ್ಮುಖದಲ್ಲೇ ಇತ್ಯರ್ಥ

06:00 AM May 22, 2018 | Team Udayavani |

ಬೆಂಗಳೂರು: ಸರ್ಕಾರ ರಚನೆಗೆ ಮುನ್ನವೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದಲ್ಲಿ ಸಂಪುಟ ರಚನೆ ವಿಚಾರ ಇನ್ನೂ ಪೂರ್ಣಗೊಂಡಿಲ್ಲ. ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಇದೆ. ಜೆಡಿಎಸ್‌ ನೇತೃತ್ವದ ಸರ್ಕಾರಕ್ಕೆ ಬೇಷರತ್‌ ಬೆಂಬಲ ಘೋಷಿಸಿದ ಕಾಂಗ್ರೆಸ್‌, ಇದೀಗ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಮುಖ ಖಾತೆಗಳಿಗಾಗಿ ಬೇಡಿಕೆ ಇಟ್ಟಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.

Advertisement

ಬಹುತೇಕ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕವೇ ಈ ಬಗ್ಗೆ ಸ್ಪಷ್ಟತೆ ಸಿಗಲಿದ್ದು, ಎಚ್‌.ಡಿ.ದೇವೇಗೌಡ ಹಾಗೂ ಸೋನಿಯಗಾಂಧಿ ಸಮ್ಮುಖದಲ್ಲಿ ಎರಡೂ ಪಕ್ಷಗಳ ವರಿಷ್ಠರ ನೇತೃತ್ವದಲ್ಲಿ ಪ್ರಮುಖರ ಸಭೆ ನಡೆಸಿ ಉಪಮುಖ್ಯಮಂತ್ರಿ, ಖಾತೆ ಹಂಚಿಕೆ ಮತ್ತು ಯಾವ ಪಕ್ಷಕ್ಕೆ ಎಷ್ಟು ಸಚಿವ ಸ್ಥಾನ ನೀಡಬೇಕು ಎಂಬುದು ಅಂತಿಮಗೊಳ್ಳಲಿದೆ ಎನ್ನಲಾಗಿದೆ.

ಬುಧವಾರ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವುದು ಖಚಿತವಾಗಿದ್ದು, ಎರಡೂ ಪಕ್ಷಗಳು ಒಗ್ಗಟ್ಟಾಗಿರುವುದರಿಂದ ಬಹುಮತ ಸಾಬೀತು ಕೂಡ ಸಮಸ್ಯೆಯಾಗುವುದಿಲ್ಲ.

ಇತ್ತ ಸೋಮವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷ ಸಭೆ ನಡೆದರೂ ಸಂಪುಟ ರಚನೆ ವಿಚಾರದಲ್ಲಿ ರಾಜ್ಯ ನಾಯಕರು ಸಹಮತಕ್ಕೆ ಬರಲು ಸಾಧ್ಯವಾಗಿಲ್ಲ. ಮಂಗಳವಾರ ಮತ್ತೂಮ್ಮೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸೋಮವಾರ ಇಡೀ ದಿನ ಸಂಪುಟ ರಚನೆ ಬಗ್ಗೆಯೇ ಎಲ್ಲಾ ಶಾಸಕರ ಗಮನ ಕೇಂದ್ರೀಕೃತವಾಗಿತ್ತು.

ಕೈ ನಾಯಕರ ಬೇಡಿಕೆ ಏನು?:
ಸೋಮವಾರ ಮಧ್ಯಾಹ್ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂಪುಟ ರಚನೆ ಕುರಿತಂತೆ ಕಾಂಗ್ರೆಸ್‌ ಶಾಸಕರೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ಶಾಸಕರು, ಮುಖ್ಯಮಂತ್ರಿ ಸ್ಥಾನ ಜೆಡಿಎಸ್‌ಗೆ ಹೋಗಿರುವುದರಿಂದ ಪ್ರಮುಖ ಖಾತೆಗಳನ್ನು ಕಾಂಗ್ರೆಸ್‌ನವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

Advertisement

ಈ ಮಧ್ಯೆ ದೊಡ್ಡಬಳ್ಳಾಪುರ ಬಳಿ ರೆಸಾರ್ಟ್‌ನಲ್ಲಿ ತಂಗಿರುವ ಜೆಡಿಎಸ್‌ ಶಾಸಕರು ಕೂಡ ಅಲ್ಲಿ ಸಭೆ ನಡೆಸಿ, ಉಪಮುಖ್ಯಮಂತ್ರಿ ಸ್ಥಾನ ಹಾಗೂ ಪ್ರಮುಖ ಖಾತೆಗಳ ಬಗ್ಗೆ ಬೇಡಿಕೆ ಇಟ್ಟಿರುವ ಕಾಂಗ್ರೆಸ್‌ನ ವರಸೆ ಬಗ್ಗೆ ಆಕ್ಷೇಪಿಸಿದ್ದಾರೆ. ಅಲ್ಲದೆ, ಎರಡು ಉಪಮುಖ್ಯಮಂತ್ರಿ ಹುದ್ದೆ ಬೇಡ ಎಂಬ ವಾದ ಮಂಡಿಸಿದ್ದಾರೆ.
ಈಗಲೇ ಸಚಿವ ಸ್ಥಾನದ ಬಗ್ಗೆ ಚರ್ಚಿಸಿದರೆ ಹೆಸರುಗಳೂ ಪ್ರಸ್ತಾಪವಾಗುತ್ತದೆ. ಇದು ಆಕಾಂಕ್ಷಿಗಳ ಅಸಮಾಧಾನಕ್ಕೂ ಕಾರಣ ಆಗಬಹುದು. ಹೀಗಾಗಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರದ ಬಳಿಕವೇ ಸಚಿವ ಸ್ಥಾನದ ಬಗ್ಗೆ ಮಾತುಕತೆ ನಡೆಸಲು ಉಭಯ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಇದೇ ರೀತಿಯ ಸೂಚನೆ ಕಾಂಗ್ರೆಸ್‌ ವರಿಷ್ಠರಿಂದಲೂ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಎರಡು ವಿಚಾರಗಳಿಗೆ ಆಕ್ಷೇಪ:
ಸಮ್ಮಿಶ್ರ ಸರ್ಕಾರ ಸುಗಮವಾಗಿ ಮುಂದುವರಿಯಲು ಸಮನ್ವಯ ಸಮಿತಿ ರಚಿಸುವಾಗ ಅದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಬೇಡ ಮತ್ತು ಅಲ್ಪಸಂಖ್ಯಾತ ಕೋಟಾದಲ್ಲಿ ಚಾಮರಾಜಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಅವರ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಸಚಿವ ಸ್ಥಾನ ನೀಡಬಾರದು ಎಂಬ  ಒತ್ತಾಯ ಜೆಡಿಎಸ್‌ ಶಾಸಕರ ಕಡೆಯಿಂದ ಕೇಳಿಬಂದಿದೆ. ಆದರೆ, ಯಾರನ್ನು ಸಚಿವರನ್ನಾಗಿ ಮಾಡಬೇಕು, ಸಮನ್ವಯ ಸಮಿತಿ ರಚನೆ ಹೇಗಿರಬೇಕು ಎಂಬುದು ಇನ್ನೂ ತೀರ್ಮಾನವಾಗದ ಕಾರಣ ಈ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ ಎಂದು ಕುಮಾರಸ್ವಾಮಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಜೆಡಿಎಸ್‌ ಶಾಸಕರಿಗೆ ವಿಶ್ರಾಂತಿ:
ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರವಿಡೀ ಅನ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರಿಂದ ದೊಡ್ಡಬಳ್ಳಾಪುರದ ರೆಸಾರ್ಟ್‌ನಲ್ಲಿರುವ ಜೆಡಿಎಸ್‌ ಶಾಸಕರು ಇಡೀ ದಿನ ಕುಟುಂಬ ಸದಸ್ಯರ ಭೇಟಿ ಮತ್ತು ವಿಶ್ರಾಂತಿಗೆ ಮೀಸಲಿಟ್ಟಿದ್ದರು. ಈ ಮಧ್ಯೆ ಶಿರಾ ಶಾಸಕ ಸತ್ಯನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿ ಭೀಕರ ಅಪಘಾತ ನಡೆದ ಹಿನ್ನೆಲೆಯಲ್ಲಿ ಮೃತ ಕುಟುಂಬದವರು ಮತ್ತು ಗಾಯಾಳುಗಳಿಗೆ ಸಾಂತ್ವನ ಹೇಳಲು ಕ್ಷೇತ್ರಕ್ಕೆ ಹೋಗಿ ಬಂದಿದ್ದಾರೆ. ಉಳಿದವರು ರೆಸಾರ್ಟ್‌ನಲ್ಲೇ ಉಳಿದುಕೊಂಡಿದ್ದಾರೆ. ಆದರೆ, ನಗರದ ಖಾಸಗಿ ಹೋಟೆಲ್‌ನಲ್ಲಿರುವ ಕಾಂಗ್ರೆಸ್‌ನಲ್ಲಿ ಸೋಮವಾರವೂ ಸಭೆಗಳು ಮುಂದುವರಿದಿದೆ.

ಸೋನಿಯಾ, ರಾಹುಲ್‌ ಭೇಟಿಯಾದ ಕುಮಾರಸ್ವಾಮಿ
ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸೋಮವಾರ ರಾತ್ರಿ ದೆಹಲಿಯಲ್ಲಿ ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಸರ್ಕಾರ ರಚಿಸಲು ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕಾಗಿ ಇಬ್ಬರಿಗೂ ಅಭಿನಂದನೆ ಸಲ್ಲಿಸಿದರಲ್ಲದೆ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.

ಸಚಿವ ಸಂಪುಟ ಮತ್ತು ಸಮನ್ವಯ ಸಮಿತಿ ರಚನೆ, ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮುಂತಾದ ವಿಚಾರಗಳ ಬಗ್ಗೆಯೂ ಈ ವೇಳೆ ಪ್ರಾಥಮಿಕ ಮಾತುಕತೆಗಳು ನಡೆದಿವೆ. ಆದರೆ, ಪ್ರಮಾಣವಚನ ಸ್ವೀಕಾರದ ಬಳಿಕವೇ ಈ ವಿಚಾರದಲ್ಲಿ ಮುಂದುವರಿಯುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಸೋನಿಯಾ ಮತ್ತು ರಾಹುಲ್‌ ಗಾಂಧಿ ಜತೆ ಸುಮಾರು 20 ನಿಮಿಷಗಳ ಮಾತುಕತೆ ನಡೆದಿದೆ.

ಎರಡೂ ಪಕ್ಷಗಳ ನಡುವೆ ಯಾವುದೇ ಚೌಕಾಶಿ ಇಲ್ಲ. ಎಲ್ಲವನ್ನೂ ಸೌಹಾರ್ದಯುತವಾಗಿ ತೀರ್ಮಾನಿಸುತ್ತೇವೆ. ನಾವು ಸುಭದ್ರ ಸರ್ಕಾರ ನೀಡುತ್ತೇವೆ. ಸಚಿವ ಸಂಪುಟ ವಿಸ್ತರಣೆ ಸೇರಿ ಯಾವುದೇ ವಿಚಾರಗಳ ಬಗ್ಗೆ ಚರ್ಚೆಯಾಗಿಲ್ಲ. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದು, ಬರಲು ಒಪ್ಪಿಕೊಂಡಿದ್ದಾರೆ.
– ಎಚ್‌.ಡಿ.ಕುಮಾರಸ್ವಾಮಿ

ಮಾಯಾವತಿ ಭೇಟಿ:
ದೇಹಲಿ ಭೇಟಿ ವೇಳೆ ಕುಮಾರಸ್ವಾಮಿ ಅವರು ಬಿಎಸ್‌ಪಿ ನಾಯಕಿ ಮಾಯಾವತಿ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಜೆಡಿಎಸ್‌ ಜತೆ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು, ಸರ್ಕಾರ ರಚನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾತುಕತೆ ನಡೆದಿದೆ. ತಮ್ಮ ಪ್ರಮಾಣವಚನ ಸ್ವೀಕಾರಕ್ಕೆ ಮಾಯಾವತಿ ಅವರನ್ನು ಕುಮಾರಸ್ವಾಮಿ ಆಹ್ವಾನಿಸಿದ್ದಾರೆ. ಅಲ್ಲದೆ, ಮುಂದಿನ ಚುನಾವಣೆಗಳಲ್ಲಿ ಅದರಲ್ಲೂ ಮುಖ್ಯವಾಗಿ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ಹೋರಾಟ ಮಾಡುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಗಿದೆ.

ಬುಧವಾರ ಸಂಜೆ ಪ್ರಮಾಣ ವಚನ
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಬುಧವಾರ ಸಂಜೆ 4.30ಕ್ಕೆ ಎಚ್‌.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯಪಾಲ ವಜೂಬಾಯ್‌ ವಾಲ ಪ್ರಮಾಣ ವಚನ ಬೋಧಿಸುವರು. ಈ ಹಿಂದೆ ಮಧ್ಯಾಹ್ನ ಪ್ರಮಾಣವಚನ ಸ್ವೀಕರಿಸುವುದಾಗಿ ಹೇಳಲಾಗಿತ್ತು. ಪ್ರಮಾಣವಚನ ಸ್ವೀಕಾರಕ್ಕಾಗಿ ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಬೃಹತ್‌ ವೇದಿಕೆ ಸಿದ್ಧವಾಗುತ್ತಿದೆ. ಸೋಮವಾರ ಬೆಳಗ್ಗೆ ಪೂಜೆ ಸಲ್ಲಿಸುವ ಮೂಲಕ ವೇದಿಕೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next