Advertisement
ತಾಲೂಕಿನ ಬ್ಯಾಡರಹಳ್ಳಿ ಗ್ರಾಮದಲ್ಲಿ ಮಾರುತಿ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೆ. ಅದನ್ನೇ ಬಿಜೆಪಿಯವರು ಮಂಡ್ಯ ಬಜೆಟ್ ಎಂದು ಬಿಂಬಿಸಿದರು. ಆದರೂ ನಾನೂ ಜಿಲ್ಲೆಗೆ 9 ಸಾವಿರ ಕೋಟಿ ರೂ. ನೀಡಿ ಅಭಿವೃದ್ಧಿಗೆ ಚಾಲನೆ ನೀಡಿದೆ. ಆದರೆ ಚುನಾವಣೆಯಲ್ಲಿ ಸೋಲಿಸಿದಿರಿ. ಬೇಡ ಎಂದರೂ ಎಲ್ಲರೂ ನಿಖಿಲ್ ನಿಲ್ಲಿಸುವಂತೆ ಒತ್ತಾಯಿಸಿದಿರಿ. ನಿಲ್ಲಿಸಿದಾಗ ಸೋಲಿಸಿದಿರಿ ಎಂದು ಬೇಸರ ವ್ಯಕ್ತಪಡಿಸಿದರು.
Related Articles
Advertisement
25 ಸಾವಿರ ಕೋಟಿ ರೂ. ಸಾಲಮನ್ನ
ರಾಜ್ಯದ ರೈತರ ಹಿತದೃಷ್ಟಿಯಿಂದ 25 ಸಾವಿರ ಕೋಟಿ ರೂ. ಸಾಲಮನ್ನ ಘೋಷಣೆ ಮಾಡಿದೆ. ಯಾವ ಮುಖ್ಯಮಂತ್ರಿಯೂ ಮಾಡದ ಕೆಲಸವನ್ನು ಮಾಡಿದ್ದೆ. ಜಿಲ್ಲೆಯ ರೈತರ 550 ಕೋಟಿ ರೂ. ಸಾಲಮನ್ನಾ ಮಾಡಿದೆ. ರೈತರು ಆತ್ಮಹತ್ಯೆ ಮಾಡಿಕೊಂಡಾಗ ಜಿಲ್ಲೆಗೆ ಆಗಮಿಸಿ ಮೃತ ರೈತ ಕುಟುಂಬಗಳಿಗೆ ಸಾಂತ್ವಾನ ಹೇಳುವ ಮೂಲಕ 200 ಕುಟುಂಬಗಳಿಗೆ ಆರ್ಥಿಕ ನೆರವು ನೀಡಿ ಆತ್ಮಸ್ಥೆರ್ಯ ತುಂಬಿದ್ದೇನೆ. ಇದಕ್ಕೆ ನೀವು ಜಿಲ್ಲೆಯಲ್ಲಿ 7 ಶಾಸಕರನ್ನು ನೀಡುವ ಮೂಲಕ ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಕೈ ನಾಯಕರ ಬಲವಂತಕ್ಕೆ ಸಿಎಂ ಆದೆ
ನಾನು ಅಧಿಕಾರಕ್ಕಾಗಿ ಎಂದೂ ಮುಖ್ಯಮಂತ್ರಿಯಾದವನಲ್ಲ. ದೆಹಲಿಯ ಕಾಂಗ್ರೆಸ್ ನಾಯಕರು ಬಲವಂತ ಮಾಡಿದ್ದರಿಂದ ಅನಿವಾರ್ಯವಾಗಿ ಮುಖ್ಯಮಂತ್ರಿಯಾಗಬೇಕಾಯಿತು. ಆದರೆ ಇಲ್ಲಿನ ರಾಜ್ಯ ನಾಯಕರು ನನಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಬಿಡಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ತೊಡಕು ಮಾಡುತ್ತಾ, ನನ್ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕುತಂತ್ರ ಮಾಡಿದರು. ಆದರೂ 14 ತಿಂಗಳು ಸಂಕಷ್ಟದಲ್ಲಿಯೇ ನಿಮ್ಮ ಸೇವೆ ಮಾಡಿದ್ದೇನೆ. ಗ್ರಾಮೀಣ ಮಕ್ಕಳ ಶೈಕ್ಷಣಿಕ ಗುಣಮಟ್ಟಕ್ಕೆ ರಾಜ್ಯಾದ್ಯಂತ ಒಂದು ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದಿದ್ದೇನೆ. ಆದರೆ ಅದನ್ನು ಈಗಿನ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೈಷುಗರ್ ಖಾಸಗೀಕರಣಕ್ಕೆ ವಿರೋಧ
ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಸರ್ಕಾರ ವಹಿಸುತ್ತಿರುವುದು ಸರಿಯಲ್ಲ. ಅದನ್ನು ವಿರೋಧ ಮಾಡುತ್ತೇನೆ. ಸರ್ಕಾರವೇ ನಡೆಸಬೇಕು. ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಹೊಸ ಮಿಲ್ ಅಳವಡಿಸಲು ಎಲ್ಲ ರೀತಿಯ ಯೋಜನೆ ರೂಪಿಸಿದ್ದೆ ಎಂದು ಹೇಳಿದರು.
ರಾಜಕೀಯ ನಿವೃತ್ತಿ ಪಡೆಯಲ್ಲ
ಚುನಾವಣೆಗಳಿಂದ ಬೇಸತ್ತು ರಾಜಕೀಯ ನಿವೃತ್ತಿ ಪಡೆಯಲು ನಿರ್ಧರಿಸಿದ್ದೆ. ಆದರೆ ನಿಮ್ಮ ಪ್ರೀತಿ, ವಿಶ್ವಾಸ ಕಂಡು ಆ ನಿರ್ಧಾರದಿಂದ ಹಿಂದೆ ಸರಿದಿದ್ದು, ಮುಂದುವರೆಯಲು ತೀರ್ಮಾನಿಸಿದ್ದೇನೆ. ಮುಂದಿನ ದಿನಗಳಲ್ಲಿ ನನಗೆ ರಾಜಕೀಯ ಶಕ್ತಿ ತುಂಬಲು ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ದೇವೇಗೌಡರ ಕುಟುಂಬ ಸದಾ ಜಿಲ್ಲೆಯ ಜನತೆಯ ಪರವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು.
ಶಾಸಕರಾದ ಡಿ.ಸಿ.ತಮ್ಮಣ್ಣ, ಎನ್.ಅಪ್ಪಾಜಿಗೌಡ, ಮಾಜಿ ಶಾಸಕಿ ಕಲ್ಪನಾಸಿದ್ದರಾಜು, ರಾಜಣ್ಣ, ಕುಮಾರ್, ಯೋಗೇಶ್, ರಾಮಕೃಷ್ಣ ಸೇರಿದಂತೆ ಮತ್ತಿತರರಿದ್ದರು.