Advertisement

ಅನಿತಾ ವಿಚಾರ ಎಳೆದು ತರೋದು ಬೇಡ: ಭವಾನಿಗೆ ಎಚ್‌ಡಿಕೆ ಪರೋಕ್ಷ ಕುಟುಕು

09:52 PM Apr 04, 2023 | Team Udayavani |

ಬೆಂಗಳೂರು: ಅನಿತಾ ಕುಮಾರಸ್ವಾಮಿಯವರು ಇನ್ನೆಂದೂ ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ. ಅವರನ್ನು ಎಳೆದು ತರುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಅನಿತಾ ಕುಮಾರಸ್ವಾಮಿಯವರು ಈ ಹಿಂದೆ ಅನಿವಾರ್ಯ ಹಾಗೂ ಪಕ್ಷ ಉಳಿಸಲು ಚುನಾವಣೆಗೆ ಸ್ಪರ್ಧಿಸಿದ್ದರು. ಅವರು ಗೌಡರ ಕುಟುಂಬದ ಹೆಸರು ಹಾಳು ಮಾಡಲಿಲ್ಲ ಎಂದು ತಿಳಿಸಿದರು.

ಹಾಸನ ಅಭ್ಯರ್ಥಿ ಆಯ್ಕೆಗೂ ಹಿಂದೆ ಅನಿತಾ ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸಿದ್ದಕ್ಕೂ ಹೋಲಿಸಿ ಚರ್ಚಿಸುವುದು ಬೇಡ ಎಂದು ಪರೋಕ್ಷವಾಗಿ ಭವಾನಿ ರೇವಣ್ಣ ಅವರ ಹೆಸರು ಪ್ರಸ್ತಾಪಿಸದೆ ಆಕ್ರೋಶ ಹೊರಹಾಕಿದರು.

ಹಾಸನದ ರಾಜಕೀಯವೇ ಬೇರೆ, ಮಂಡ್ಯದ ರಾಜಕೀಯವೇ ಬೇರೆ, ಇವೆರಡನ್ನೂ ಒಟ್ಟಿಗೆ ಮಾಡಿ ನೋಡುವುದು ಬೇಡ. ನಮ್ಮ ಕುಟುಂಬದಲ್ಲಿ ಟಿಕೆಟ್‌ಗಾಗಿ ಸೊಸೆಯಂದಿರ ಹೊಡೆದಾಟ ಏನೂ ಇಲ್ಲ, ಇವೆಲ್ಲಾ ಷಡ್ಯಂತ್ರ ಎಂದು ಹೇಳಿದರು.

ಅನಿತಾ ಕುಮಾರಸ್ವಾಮಿಗೆ ರಾಜಕೀಯ ಮಾಡಿ ಸಾಧಿಸೋದು ಏನೂ ಇಲ್ಲ. ಅವರನ್ನು ಹಿಂದೆ ಶಾಸಕ ಸ್ಥಾನಕ್ಕೆ ನಿಲ್ಲಿಸಿದ್ದು ಪಕ್ಷ ಉಳಿಸಲು. ನಮ್ಮ ಅಭ್ಯರ್ಥಿಗಳು ಕೈ ಕೊಟ್ಟು ಹೋದಾಗ ಪಕ್ಷ ಉಳಿಸಿಕೊಳ್ಳಲು ಅವರನ್ನು ಆಯ್ಕೆ ಮಾಡಿದ್ದೆವು. ಈ ಬಾರಿ ಚುನಾವಣೆ ಮೇಲೆ ಅವರಿಗೆ ಯಾವುದೇ ಆಸಕ್ತಿ ಇಲ್ಲ. ಅವರ ಜಾಗವನ್ನು ಮಗ ನಿಖೀಲ್‌ ಕುಮಾರಸ್ವಾಮಿಗೆ ಕೊಟ್ಟು ಸುಮ್ಮನಾಗಿದ್ದಾರೆ ಎಂದು ಹೇಳಿದರು.

Advertisement

ನಾನು ಚುನಾವಣೆಗೆ ಸ್ಪರ್ಧಿಸಲ್ಲ: ಈ ಮಧ್ಯೆ, ಅನಿತಾ ಕುಮಾರಸ್ವಾಮಿ ನಾನು ಚುನಾವಣೆಗೆ ಸ್ಪರ್ಧಿಸಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪಕ್ಷ, ವರಿಷ್ಠರು ಹೇಳಿದಾಗ ಸ್ಪರ್ಧಿಸಿದ್ದೇನೆ. ಪಕ್ಷ ಮತ್ತು ಕುಟುಂಬಕ್ಕೆ ಚ್ಯುತಿ ತರುವ ಕೆಲಸ ಮಾಡಿಲ್ಲ ಎಂದು ತಿಳಿಸಿದ್ದಾರೆ.

2008ರಲ್ಲಿ ಆಪರೇಷನ್‌ ಕಮಲದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ, ಮಾಜಿ ಪ್ರಧಾನಿ ದೇವೇಗೌಡರ ಆದೇಶ ಗೌರವಿಸಿ ಸ್ಪರ್ಧಿಸಿದ್ದೆ. ಆ ನಂತರದ ಚುನಾವಣೆಯಲ್ಲಿ ವೀರಭದ್ರಯ್ಯ ಅವರಿಗೆ ಮಧುಗಿರಿ ಕ್ಷೇತ್ರವನ್ನು ಸಂತೋಷದಿಂದ ಬಿಟ್ಟುಕೊಟ್ಟು ಪಕ್ಷದ ಕೆಲಸ, ಮನೆಗಷ್ಟೇ ಸೀಮಿತವಾದೆ. ಕಾರ್ಯಕರ್ತರ ಒತ್ತಡಕ್ಕೆ ತಲೆಕೊಟ್ಟು ಚನ್ನಪಟ್ಟಣದಲ್ಲಿ ಸ್ಪರ್ಧಿಸಬೇಕಾಯಿತು. ಆಗಲೂ ನಾನು ಪಕ್ಷ ಹಾಗೂ ವರಿಷ್ಠರ ಆದೇಶವನ್ನಷ್ಟೇ ಪಾಲಿಸಿದೆ ಎಂದು ಹೇಳಿದ್ದಾರೆ.

ದೇವೇಗೌಡರ ಕುಟುಂಬ ಒಡೆಯಲು ಸಾಧ್ಯವಿಲ್ಲ: ರೇವಣ್ಣ
ಬೇಲೂರು: ಮಾಧ್ಯಮಗಳಲ್ಲಿ ಎಷ್ಟೇ ಸುದ್ದಿ ಮಾಡಿದರೂ ದೇವೇಗೌಡರ ಕುಟುಂಬವನ್ನು ಯಾರೂ ಒಡೆಯಲಿಕ್ಕೆ ಸಾಧ್ಯವಿಲ್ಲ. ನಾನು ಹಾಗೂ ಕುಮಾರಸ್ವಾಮಿ ಹೊಡೆದಾಡಿಕೊಳ್ಳುತ್ತಾರೆ ಎಂದುಕೊಂಡರೆ ಅದು ಮೂರ್ಖತನ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರಿಂದ ನಮಗೆ ದುಡ್ಡಿಲ್ಲದೆ ಅಡ್ವಟೈìಸೆ¾ಂಟ್‌ ಸಿಗುತ್ತಿದೆ ಅದಕ್ಕೆ ಧನ್ಯವಾದಗಳು ಎಂದು ಕೈಮುಗಿದ ರೇವಣ್ಣ, ದೇವೇಗೌಡರ ಕುಟುಂಬ ಬಿಟ್ಟರೆ ರಾಜ್ಯದಲ್ಲಿ ಯಾರೂ ಇಲ್ವಾ? ದೇವೇಗೌಡರ ಕುಟುಂಬದ ಮೇಲೆ ಅಷ್ಟು ಪ್ರೀತಿನಾ? ನಿಮ್ಮ ಆಶೀರ್ವಾದದಿಂದ ನಮಗೆ 123 ಸೀಟು ಬರಲಿ. ಮಾಧ್ಯಮದವರಿಗೆ ಚನ್ನಕೇಶವ ಸ್ವಾಮಿ ಒಳ್ಳೆಯದು ಮಾಡಲಿ ಎಂದು ಹೇಳಿದರು.

ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವ ಮಾತಿಲ್ಲ. ಚುನಾವಣಾ ಕಣದಿಂದ ಹಿಂದೆ ಸರಿದು ಪಕ್ಷದ ಶ್ರಯೋಭಿವೃದ್ಧಿ ಹಾಗೂ ನನ್ನ ಕ್ಷೇತ್ರದ ಜನರ ಒಳಿತಿಗಾಗಿಯಷ್ಟೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಯಾರೂ ಇಂಥ ವದಂತಿಗಳನ್ನು ನಂಬಬಾರದು.
– ಅನಿತಾ ಕುಮಾರಸ್ವಾಮಿ

 

Advertisement

Udayavani is now on Telegram. Click here to join our channel and stay updated with the latest news.

Next