Advertisement

“ದೇವೇಗೌಡ್ರಿಗೆ ಪ್ರಧಾನಿ ಪಟ್ಟ ಒಲಿಯಬಹುದು’

12:43 PM May 04, 2019 | Vishnu Das |

ಮುಂಬಯಿ: ನರೇಂದ್ರ ಮೋದಿ ಅಥವಾ ರಾಹುಲ್‌ ಗಾಂಧಿ ಇವರಲ್ಲಿ ಯಾರೂ ದೇಶದ ಮುಂದಿನ ಪ್ರಧಾನಿಯಾಗುವುದಿಲ್ಲ, ಆದರೆ ತೃತೀಯರಂಗ ಈ ಪ್ರತಿಷ್ಠಿತ ಹುದ್ದೆಯನ್ನು ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ ಎಂದು ದಲಿತ ನಾಯಕ ಪ್ರಕಾಶ್‌ ಅಂಬೇಡ್ಕರ್‌ ಪ್ರತಿಪಾದಿಸಿದ್ದಾರೆ.

Advertisement

ಈ ಹುದ್ದೆಗೆ ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡ ಅವರು “ಡಾರ್ಕ್‌ ಹಾರ್ಸ್‌’ (ಕಪ್ಪು ಕುದುರೆ) ಆಗಿ ಹೊರಹೊಮ್ಮಬಹುದು ಎಂದು ವಂಚಿತ ಬಹುಜನ ಆಘಾಡಿ (ವಿಬಿಎ) ಸಂಚಾಲಕ ಅಂಬೇಡ್ಕರ್‌ ಅಭಿಪ್ರಾಯಪಟ್ಟಿದ್ದಾರೆ. ಅಂಬೇಡ್ಕರ್‌ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಜಂಟಿಯಾಗಿ ರೂಪಿಸಿರುವ ವಿಬಿಎ ಪಕ್ಷವು ಮಹಾರಾಷ್ಟ್ರದ ಎಲ್ಲ 48 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಗುರುವಾರ ಇಲ್ಲಿನ ಮುಂಬಯಿ ಪ್ರಸ್‌ ಕ್ಲಬ್‌ನಲ್ಲಿ ಮಾಧ್ಯಮ ಸಿಬಂದಿಗಳೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಚುನಾವಣೆಯಲ್ಲಿ ವಿಬಿಎ ಉತ್ತಮ ಪ್ರದರ್ಶನ ನೀಡಲಿದೆ ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಲೆಕ್ಕಾಚಾರದ ಪ್ರಕಾರ, ಯಾವ ಪಕ್ಷಕ್ಕೂ ಸ್ಪಷ್ಟವಾದ ಬಹುಮತ ಸಿಗುವುದಿಲ್ಲ. ಆದ್ದರಿಂದ, ನರೇಂದ್ರ ಮೋದಿಯಾಗಲಿ, ರಾಹುಲ್‌ ಗಾಂಧಿಯಾಗಲಿ ಇವರಲ್ಲಿ ಯಾರಿಗೂ ಪ್ರಧಾನಿ ಹುದ್ದೆ ಒಲಿಯುವುದಿಲ್ಲ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಈ ಪ್ರತಿಷ್ಠಿತ ಹುದ್ದೆಗೆ ತೃತೀಯ ರಂಗದಿಂದ ಯಾರಾದರೊಬ್ಬರು ಅಚ್ಚರಿಯ ಅಭ್ಯರ್ಥಿಯಾಗಿ ಹೊರ ಹೊಮ್ಮಬಹುದು. ಪ್ರಧಾನಿ ಯಾರಾಗ ಬಹುದೆಂದು ಈಗಲೇ ಊಹಿಸುವುದು ಕಷ್ಟ, ಆದರೆ, ನನ್ನ ಪ್ರಕಾರ ದೇವೇಗೌಡ ಅವರಿಗೆ ಪ್ರಧಾನಿ ಭಾಗ್ಯ ಒಲಿದುಬರಹುದು ಎಂದು ಅಂಬೇಡ್ಕರ್‌ ನುಡಿದಿದ್ದಾರೆ. ಕರ್ನಾಟಕದ ಜೆಡಿಎಸ್‌ ಮುಖಂಡರಾಗಿರುವ ದೇವೇಗೌಡ ಅವರು ಬಿಜೆಪಿಯೇತರ ಮತ್ತು ಕಾಂಗ್ರೆಸ್‌ಯೇತರ ಪಕ್ಷಗಳು ಒಪ್ಪುವ ಪಿಎಂ ಅಭ್ಯರ್ಥಿಯಾಗಲಿದ್ದಾರೆ ಎಂದವರು ತಿಳಿಸಿದ್ದಾರೆ.

ಬಿಜೆಪಿಯು ಬಹುಮತವನ್ನು ಪಡೆಯುವುದಿಲ್ಲ ಮತ್ತು ಇಂತಹ ಸಂದರ್ಭದಲ್ಲಿ ಮೋದಿ ಅವರು ಪ್ರಧಾನಿಯಾಗುವುದು ದೂರದ ಮಾತಾಗಿದೆ. ಮತ್ತೂಂದೆಡೆ, ಕಾಂಗ್ರೆಸ್‌ ಪ್ರತಿಯೊಂದು ರಾಜ್ಯದಲ್ಲೂ ಪ್ರತಿಸ್ಪರ್ಧಿಗಳನ್ನು ಹೊಂದಿದೆ ಮತ್ತು ಆ ರಾಜ್ಯಗಳಲ್ಲಿನ ಪ್ರಾದೇಶಿಕ ಪಕ್ಷಗಳ ಮುಖ್ಯಸ್ಥರು ಕಾಂಗ್ರೆಸ್‌ ಪಕ್ಷದ ವ್ಯಕ್ತಿಯು ಪ್ರಧಾನಿಯಾಗುವುದನ್ನು ಒಪ್ಪುವುದಿಲ್ಲ ಎಂದು ಮಾಜಿ ಸಂಸದ ಅಂಬೇಡ್ಕರ್‌ ಪ್ರತಿಪಾದಿಸಿದ್ದಾರೆ.

ಬಿಜೆಪಿಯು 148 ರಿಂದ 200 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಳ್ಳಲಿದೆ. ಅದೇ, ಕಾಂಗ್ರೆಸ್‌ ಸುಮಾರು 100 ಸ್ಥಾನಗಳನ್ನು ಗೆದ್ದುಕೊಳ್ಳಬಹುದು. ಉಳಿದ ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಮತ್ತು ವಿಬಿಎನಂತಹ ಪಕ್ಷಗಳು ಹಂಚಿಕೊಳ್ಳಲಿವೆ ಎಂದವರು ನುಡಿದಿದ್ದಾರೆ.

Advertisement

ತಮ್ಮ ಸ್ವಂತ ಸಂಘಟನೆಯ ಪ್ರದರ್ಶನದ ಬಗ್ಗೆ ಮಾತನಾಡಿದ ಅವರು, ವಿಬಿಎ ಹೊಸ ಪೀಳಿಗೆಯ ಮುಸ್ಲಿಂ ಮತದಾರರ ಬೆಂಬಲವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ ಮತ್ತು ಇದು ಸಾಕಷ್ಟು ಪ್ರೋತ್ಸಾಹದಾಯಕವಾಗಿದೆ ಎಂದರು.

ನಾವು ಒಂದು ದಲಿತ-ಮುಸ್ಲಿಂ ಆಘಾಡಿ (ಮುಂದೆ)ಯನ್ನು ರಚಿಸಬಹುದಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶವು ಈ ವರ್ಷದ ಅನಂತರ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮೇಲೆ ಪರಿಣಾಮವನ್ನು ಬೀರಲಿದೆ ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next