ಗುತ್ತಲ: ರಾಜ್ಯದಲ್ಲಿ ಸಾವಿರಾರು ಊರುಗಳಲ್ಲಿ ನೆಲೆಸಿರುವ ಗ್ರಾಮದೇವತೆ ದ್ಯಾಮವ್ವದೇವಿಯು ವರ್ಷವಿಡೀ ದರ್ಶನ ನೀಡಿದರೆ, ಈ ಊರಿನಲ್ಲಿ ನೆಲೆಸಿರುವ ಗ್ರಾಮದೇವತೆ ದ್ಯಾಮವ್ವದೇವಿ ಮಾತ್ರ ವರ್ಷಕ್ಕೆ ಒಂದೇ ಒಂದು ದಿನ ಮಾತ್ರ ದರ್ಶನ ನೀಡುತ್ತಾಳೆ.
ಹೌದು. ಹಾವನೂರ ಗ್ರಾಮದ ಗ್ರಾಮದೇವತೆ ದ್ಯಾಮವ್ವದೇವಿ ಭಕ್ತರಿಗೆ ವರ್ಷಕ್ಕೆ ಒಂದೇ ದಿನ ದರ್ಶನ ನೀಡುತ್ತಿದ್ದು, ಈ ಪದ್ಧತಿ, ಆಚರಣೆ, ಸಂಪ್ರದಾಯ ಹಿಂದೆ ಒಂದು ಇತಿಹಾಸವೇ ಇದೆ.
ಇತಿಹಾಸ: ಪೇಶ್ವೆ ಆಳ್ವಿಕೆಯಲ್ಲಿ ಧಾರವಾಡ ಪ್ರಾಂತ್ಯವನ್ನು ಹಾವನೂರ ಹನುಮಂತಗೌಡ ದೇಸಾಯಿ ಪಾಳೆಗಾರನಾಗಿ ಆಳ್ವಿಕೆ ಮಾಡುತ್ತಿದ್ದ. ಈತನಿಗೆ ಕನಸಿನಲ್ಲಿ ದೇವಿ ಪ್ರತ್ಯಕ್ಷಳಾಗಿ ನಾನು ಗಜಗೌರಿ ತುಂಗಭದ್ರೆ ನದಿಯಲ್ಲಿ ಕಟ್ಟಿಗೆ ಪೆಟ್ಟಿಗೆಯಲ್ಲಿ ನನ್ನ ಸಹೋದರಿಯೊಂದಿಗೆ ಬರುತ್ತಿದ್ದು, ನಿನ್ನೂರಿನಲ್ಲಿ ನನಗೆ ನೆಲೆಸುವ ಆಸೆಯಾಗಿದೆ. ಅದಕ್ಕಾಗಿ ನೀನು ವ್ಯವಸ್ಥೆ ಮಾಡು ಎಂದು ಅದೃಶ್ಯಳಾದಳು. ಇದರಿಂದ ಹನುಮಂತಗೌಡರು ತನ್ನ ಗುರು ನೆಗಳೂರಿನ ಸಂಸ್ಥಾನ ಹಿರೇಮಠದ ತಪಸ್ವಿಗಳಾದ ಲಿಂ| ಗುರುಶಾಂತ ಶಿವಯೋಗಿಗಳಲ್ಲಿ ತನ್ನ ಕನಸಿನಲ್ಲಿ ನಡೆದ ಸಂಗತಿ ತಿಳಿಸಿದರು. ವಿಷಯ ತಿಳಿದ ಗುರುಗಳು ಸಂತಸಪಟ್ಟರು. ಆಗ ಗುರುಗಳನ್ನು ಕರೆದುಕೊಂಡು ಹೋಗಿ ನದಿಯಲ್ಲಿ ತೇಲುತ್ತಿರುವ ಪೆಟ್ಟಿಗೆಯನ್ನು ತಡೆದು ನಿಲ್ಲಿಸಿದರು. ಆಗ ಹನುಮಂತಗೌಡರು ಲಘುಬಗೆಯಿಂದ ದೇವಿಯ ದರ್ಶನ ಮಾಡಬೇಕೆಂದು ಪೆಟ್ಟಿಗೆ ತೆಗೆಯಲು ಮುಂದಾದರು. ಆಗ ಅವರಿಗೆ ಬೃಹದಾಕಾರದ ಘಟಸರ್ಪವೊಂದು ಕಾಣಿಸಿತು. ಆಗ ಗೌಡರು ಗುರುಗಳೇ ಸರ್ಪ ಸರ್ಪವೆಂದು ಗುರುಶಾಂತ ಶಿವಯೋಗಿಗಳ ಹತ್ತಿರ ಓಡೋಡಿ ಬಂದರು. ಆಗ ಗುರುಗಳು ಪೆಟ್ಟಿಗೆ ಸಮೀಪ ಬಂದು ‘ಓ ಜಗನ್ಮಾತೆ ನೀನು ಈ ಪ್ರಾಂತ್ಯದ ಆರಾಧ್ಯ ದೇವತೆಯಾಗಿ ನೆಲೆಸುವಳು, ನೀನು ಶಾಂತಸ್ವರೂಪದಲ್ಲಿ ನೆಲೆಸಿ ಈ ಪ್ರಾಂತ್ಯದ ಸದ್ಭಕ್ತರಿಗೆ ಹರಿಸುವಂತವಳಾಗಬೇಕು’ ಎಂದು ಹೇಳಿ ತಮ್ಮ ಅಮೃತ ಹಸ್ತದಿಂದ ಮಂತ್ರಾಕ್ಷತೆ ಹಾಕಿ ಪೆಟ್ಟಿಗೆ ತೆಗೆಯಲಾಗಿ ದೇವಿ ಗಜಗೌರಿ ಸ್ವರೂಪಳಾಗಿ ಕಂಡಳು. ಆಗ ದೇವಿಯು ನಾನು ಗುಪ್ತಳಾಗಿಯೇ ನೆಲಸಬೇಕೆಂದಿರುವೆ. ನನಗೆ ಗುಪ್ತಪೂಜೆಯಾಗಬೇಕು. ಪ್ರತಿ ವರ್ಷ ಮಾಘ ಮಾಸದ ಅವರಾತ್ರಿ ಅಮಾವಾಸ್ಯೆ ನಂತರ ಬರುವ ಶುಕ್ರವಾರ ನನ್ನ ಗಡಿ ಜಾತ್ರೆ ನಡೆಯಲಿ. ಆಗ ನನಗೆ ಸಿಹಿ ಅಡುಗೆ ಎಡೆಯಾಗಲಿ. ನಂತರ ಬರುವ ಶುದ್ಧ ರಥ ಸಪ್ತಮಿ ತಿಥಿಯಂದು ನನ್ನ ಉತ್ಸವ ಜರುಗಲಿ. ಆಗ ಮಾತ್ರ ನಾನು ಭಕ್ತರಿಗೆ ದರ್ಶನ ನೀಡುವೆ. ಸೂರ್ಯ ಚಂದ್ರ ಇರುವವರೆಗೂ ಈ ಗ್ರಾಮಕ್ಕೆ ಸುತ್ತಮುತ್ತಲಿನ ಪ್ರದೇಶಗಳಿಗೆ ಬರಗಾಲ ಛಾಯೆ ಬರದಂತೆ ನಾನು ಆಶೀರ್ವದಿಸುವೆ. ನಾನು ಇಲ್ಲಿ ದ್ಯಾಮವ್ವದೇವಿಯಾಗಿ, ನನ್ನ ಸಹೋದರಿ ಹಾಂವಶಿ ಗ್ರಾಮದಲ್ಲಿ ನೆಲಸಲಿ. ನಿಮಗೆಲ್ಲ ಮಂಗಲವಾಗಲಿ ಎಂದು ಹರಿಸದಳಂತೆ ಎಂಬುದು ನೆಗಳೂರ ಹಿರೇಮಠದ ದಾಖಲೆಗಳಲ್ಲಿ ಉಲ್ಲೇಖೀಸಲಾಗಿದೆ. ಅಂದಿನಿಂದ ಇಂದಿನವರೆಗೂ ಅದೇ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ ಎನ್ನುತ್ತಾರೆ ದೇವಸ್ಥಾನ ಕಮೀಟಿ ಅಧ್ಯಕ್ಷ ಶಿವಾನಂದಯ್ಯ ಕರಸ್ಥಳಮಠ.
13ರವರೆಗೆ ನಡೆಯಲಿದೆ ಜಾತ್ರೆ
ಹಾವನೂರ ಗ್ರಾಮದೇವತೆ ದ್ಯಾಮವ್ವ ದೇವಿ ಜಾತ್ರೆ ಫೆ.8 ರಿಂದ ಪ್ರಾರಂಭವಾಗಿದ್ದು, 13ರವರೆಗೆ ನಡೆಯಲಿದ್ದು, ಗ್ರಾಮದಲ್ಲೀಗ ಹಬ್ಬದ ವಾತಾವರಣ ಕಳೆಗಟ್ಟಿದೆ. ಫೆ.12ರಂದು ರಾತ್ರಿ 12ಕ್ಕೆ ದೇವಿಯನ್ನು ಪೆಟ್ಟಿಗೆಯಿಂದ ಹೊರ ತೆಗೆಯಲಾಗುತ್ತಿದ್ದು, ನಂತರ ದೇವಿ ಮೂರ್ತಿಗೆ ಬಣ್ಣ ಹಚ್ಚಿ ಶೃಂಗರಿಸಿ ಜೋಡಿಸಲಾಗುವುದು. 13ರಂದು ಬೆಳಗಿನ ಜಾವ 4ಕ್ಕೆ ದೇವಿಯನ್ನು ದೇವಸ್ಥಾನದಿಂದ ಹೊರ ತಂದು ಬಂಡಿಯಲ್ಲಿ ಕುಳ್ಳಿರಿಸಿ ಚೌತಕಟ್ಟೆಯವರೆಗೆ ಮೆರವಣಿಗೆ ಮಾಡಲಾಗುವುದು. 6 ಗಂಟೆಗೆ ಚೌತ ಮನೆ ಕಟ್ಟೆ ಮೇಲೆ ಕುಳ್ಳಿರಿಸಲಾಗುವುದು. 13ರಂದು ಭಕ್ತರಿಗೆ ದೇವಿ ದರ್ಶನವಾಗುತ್ತದೆ. ಅಂದು ಸಂಜೆ 4 ಗಂಟೆಗೆ ದೇವಿಯನ್ನು ಗುಡಿಗೆ ಕಳಿಸಲಾಗುವುದು. ಅಲ್ಲಿಯೇ ದೇವಿ ಮೂರ್ತಿ ಬಿಚ್ಚಿ ದೇವಸ್ಥಾನದಲ್ಲಿರುವ ಪೆಟ್ಟಿಗೆಗೆ ಹಾಕಿಡಲಾಗುವುದು. ಮುಂದಿನ ಜಾತ್ರೆಯವರೆಗೆ ವರ್ಷವಿಡೀ ಪೆಟ್ಟಿಗೆಯನ್ನು ಮಾತ್ರ ಪೂಜಿಸಲಾಗುವುದು.
ರಾಜ್ಯದ ಅನೇಕ ಊರುಗಳಲ್ಲಿರುವ ಗ್ರಾಮದೇವತೆಯರು ಬಹುತೇಕ ಸಿಂಹ ಅಥವಾ ಹುಲಿಯ ಮೇಲೆ ಆಸೀನರಾಗಿರುವುದು ಕಂಡು ಬಂದರೆ ಹಾವನೂರ ಗ್ರಾಮದೇವತೆ ದ್ಯಾಮವ್ವದೇವಿ ಮಾತ್ರ ಆನೆಯ ಮೇಲೆ ಆಸೀನರಾಗಿರುವ ಕಾರಣ ಈ ದೇವಿಗೆ ‘ಗಜಗೌರಿ’ ಎಂತಲೂ ಕರೆಯುವುದುಂಟು.
ಶಂಭುಲಿಂಗಯ್ಯ ಶಿ ಮಠದ