Advertisement

ಜೋಪಡಿಯಲ್ಲಿ ಅರಳಿದ ಶಾಲೆಗೆ ಬೇಕಿದೆ ಆದ್ಯತೆ

10:25 PM Sep 25, 2021 | Team Udayavani |

ಬೆಳ್ತಂಗಡಿ: ಹತ್ತೂರಿನ ನಾಗರಿಕರ ಶಿಕ್ಷಣ ದಾಹ ತಣಿಸಲು 1905ರಲ್ಲಿ ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಗುರುವಾಯನಕೆರೆ ಕೋಂಟುಪಲ್ಕೆಯ ಜೋಪಡಿಯಲ್ಲಿ ಆರಂಭವಾದ ಶಾಲೆ ಹೆಂಚಿನ ಕಟ್ಟಡಕ್ಕೆ ಪರಿವರ್ತನೆಗೊಂಡಿರುವುದು ಬಿಟ್ಟರೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಯಾದರೂ ಶತಮಾನ ಕಂಡ ವಿದ್ಯಾದೇಗುಲ ಒಂದಷ್ಟು ಬೇಡಿಕೆಯ ನಿರೀಕ್ಷೆ ಯಲ್ಲಿದೆ.

Advertisement

ಹುಲ್ಲಿನ ಛಾವಣಿಯಲ್ಲಿ ಆರಂಭವಾದ ಶಾಲೆ 1927ರಲ್ಲಿ ಹೆಂಚಿನ ಕಟ್ಟಡಕ್ಕೆ ಸ್ಥಳಾಂತರ ಗೊಂಡಿತು. 1969- 90ರವರೆಗೆ ಬೋರ್ಡ್‌ ಶಾಲೆಯಾಗಿ ಪರಿಗಣಿಸ ಲ್ಪಟ್ಟಿದ್ದು, ಅನಂತರ ಸರಕಾರಿ ಶಾಲೆಯಾಗಿ ಪರಿವರ್ತನೆಗೊಂಡಿತ್ತು. 1968-69ರಲ್ಲಿ ಹಿ.ಪ್ರಾ. ಶಾಲೆಯಾಗಿ ಮೇಲ್ದರ್ಜೆಗೇರಿಸಿದ ಬಳಿಕ ಪ್ರಸಕ್ತ ಶಿಕ್ಷಕರ ಕೊರತೆ ಸೇರಿದಂತೆ ಕೆಲವು ಸಮಸ್ಯೆ ಕಾಡುತ್ತಿದೆ.

1ರಿಂದ 7ನೇ ತರಗತಿಯಲ್ಲಿ 2020-21ನೇ ಸಾಲಿನಲ್ಲಿ 106 ಮಕ್ಕಳಿದ್ದು, 2021-22ನೇ ಸಾಲಿನಲ್ಲಿ 135 ಮಕ್ಕಳಿದ್ದಾರೆ. ಹೆಚ್ಚುವರಿಯಾಗಿ 43 ಮಕ್ಕಳು ದಾಖಲಾಗಿದ್ದಾರೆ. ಒಟ್ಟು ಮೂವರು ಶಿಕ್ಷಕರಿದ್ದು, ಹೆಚ್ಚುವರಿ ಶಿಕ್ಷಕರ ನೇಮಿಸಿದಲ್ಲಿ ಶಿಕ್ಷಣ ಗುಣ ಮಟ್ಟ ಹೆಚ್ಚಾಗಲಿದೆ. ಶತಮಾನ ಕಂಡ ಶಾಲೆ ಹಳೇ ಕಟ್ಟಡದಲ್ಲೇ ಇದ್ದು, ಹೊಸ ಕಟ್ಟಡದ ಬೇಡಿಕೆ ಈಡೇರಿದಲ್ಲಿ 100ಕ್ಕೂ ಅಧಿಕ ಮಕ್ಕಳು ಸೇರ್ಪಡೆ ಗೊಳ್ಳುವ ನಿರೀಕ್ಷೆ ಇಲ್ಲಿನದು.

ಅನುದಾನ ದೊರೆಯುತ್ತಿಲ್ಲ
ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಸರಕಾರದ ನಿರೀಕ್ಷಿತ ಅನುದಾನ ದಕ್ಕುತ್ತಿಲ್ಲ. ಹೀಗಾಗಿ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಪ್ರಾಥಮಿಕ ಶಾಲೆಗಳು ಸೊರಗಿವೆ. ಶಾಲಾಭಿವೃದ್ಧಿ ಸಮಿತಿ, ದಾನಿಗಳು, ಹಳೇ ವಿದ್ಯಾರ್ಥಿಗಳ ಅನುದಾನದಿಂದಲೇ ಶಾಲೆಗಳು ಇಂದು ಸ್ವಲ್ಪಮಟ್ಟಿಗಾದರು ಉಳಿದುಕೊಂಡಿದೆ. ಗುರುವಾಯನಕೆರೆ ಶಾಲೆಯದ್ದೂ ಇದೇ ಪರಿಸ್ಥಿತಿ. ಇರುವ ಪೀಠೊಪಕರಣ, ಬೆಂಚ್‌, ಡೆಸ್ಕ್ಗಳು ಹಳೆಯದಾಗಿವೆ. ಮಕ್ಕಳನ್ನು ಆಕರ್ಷಿಸಲು ಸುಧಾರಿತ ಪೀಠೊಪಕರಣ ಶಾಲೆ ಸೇರುತ್ತಿಲ್ಲ. ಮುಖ್ಯಶಿಕ್ಷರಿಗೆ ಕೊಠಡಿ ಇಲ್ಲ. 1,000ಕ್ಕೂ ಅಧಿಕ ಪುಸ್ತಕಗಳಿವೆ. ಗ್ರಂಥಾಲಯ ನಿರ್ಮಿಸಿ, ಪುಸ್ತಕಗಳನ್ನು ಜೋಪಾನವಾಗಿಡಲು ಕಪಾಟುಗಳೇ ಇಲ್ಲ. ಶಾಲೆಯ ಸುತ್ತ 1.11 ಎಕ್ರೆ ಜಾಗವಿದೆ. ಆದರೆ 150 ಮೀಟರ್‌ ತಡೆಗೋಡೆ ನಿರ್ಮಾಣದ ಅಗತ್ಯವಿದೆ. ಸ್ಮಾರ್ಟ್‌ ಕ್ಲಾಸ್‌ ಆರಂಭದ ಯೋಜನೆಗಳು ಉದ್ಘಾಟನೆಗಷ್ಟೇ ಸೀಮಿತ. ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಪ್ರೊಜೆಕ್ಟರ್‌, ಜೆರಾಕ್ಸ್‌ ಯಂತ್ರ ಆವಶ್ಯಕತೆ ಇಲ್ಲಿನದಾಗಿದೆ.

ಇದನ್ನೂ ಓದಿ:ಚಾರ್ಮಾಡಿ ಘಾಟ್ ನಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ:ಪೆಟ್ರೋಲ್ ಸೋರಿಕೆ

Advertisement

ಕಾಯಕಲ್ಪ ಎಂದು?
ಶಿಥಿಲಾವಸ್ಥೆಯಲ್ಲಿರುವ, 115 ವರ್ಷಗಳ ಹಿಂದಿನ ಈ ಶಾಲೆಯ ಕಟ್ಟಡಕ್ಕೆ ಕಾಯಕಲ್ಪ ನೀಡಲು ಇನ್ನೆಷ್ಟು ವರ್ಷಗಳು ಬೇಕೋ? ಸರಕಾರಗಳು ಮೂಲಸೌಕರ್ಯ ಒದಗಿಸಿದಲ್ಲಿ ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯಲಿದೆ. ಸರಕಾರ ಮಕ್ಕಳ ಸಂಖ್ಯೆ ಏರಿಕೆಯ ಒತ್ತಡ ಹೇರುತ್ತಿದೆ. ಮೂಲಸೌಕರ್ಯ ಒದಗಿಸಿದಲ್ಲಿ ಸರಕಾರಿ ಶಾಲೆಗಳಲ್ಲೂ ಮಕ್ಕಳ ಕಲರವ ಹೆಚ್ಚಬಹುದು.

ಅಭಿವೃದ್ಧಿಗೆ ಯತ್ನ
ಶಾಲಾ ಮೇಲುಸ್ತುವಾರಿ ಸಮಿತಿ ಹಿರಿಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ಊರವರು, ಶಾಸಕರು, ಎಂ.ಎಲ್‌.ಸಿ., ಗ್ರಾ.ಪಂ., ಜಿ.ಪಂ., ತಾ.ಪಂ. ನೆರವಿನಿಂದ ಹಾಗೂ ಶಿಕ್ಷಣ ಇಲಾಖೆಯ ಮಾರ್ಗದರ್ಶನದಿಂದ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಆದರೂ ಇನ್ನೂ ಹೆಚ್ಚಿನ ಅವಶ್ಯಕತೆಗಳು ನಮ್ಮ ಶಾಲೆಗಿದೆ.
-ಸಿಸಿಲಿಯಾ ಪಾಯ್ಸ್,
ಪ್ರಭಾರ ಮುಖ್ಯ ಶಿಕ್ಷಕಿ

-ಚೈತ್ರೇಶ್‌ ಇಳಂತಿಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next