Advertisement

ಗುರುವಿನ ಮಾರ್ಗದರ್ಶನ ಅವಶ್ಯ

01:22 PM Jun 29, 2019 | Suhan S |

ಗದಗ: ಗುರುವಿನ ಗುಲಾಮನಾಗಿ ಗುರು ಮಾರ್ಗದರ್ಶನದಲ್ಲಿ ನಡೆದರೆ ಮಾತ್ರ ಜೀವನದಲ್ಲಿ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಹಠಯೋಗಿ ಕೊಟ್ಟೂರೇಶ್ವರರು ಗುರುವಿನಿಂದಲೇ ಸಾಧಕರಾಗಿದ್ದರು ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಜ| ತೋಂಟದ ಸಿದ್ಧರಾಮ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ಕೊಟ್ಟೂರೇಶ್ವರ ಜಾತ್ರಾ ಮಹೋತ್ಸವದಲ್ಲಿ ಪುರಾಣ ಮಂಗಲ ಹಾಗೂ ಕೊಟ್ಟೂರೇಶ್ವರರ ಪುರಾಣ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವ್ಯಕ್ತಿಯ ಬದುಕಿಗೆ ಗುರುವೇ ನಿಜವಾದ ಆಸರೆ. ಗುರುವಿನ ಸೇವೆಯಿಂದ ಸಾರ್ಥಕ ಬದುಕು ಕಾಣಬಹುದು. ಸಾಮಾಜಿಕ ಸುಧಾರಣೆಗಾಗಿ ಹರ್ಲಾಪುರದ ಲಿಂ| ಕೊಟ್ಟೂರೇಶ್ವರರ ಹಾದಿಯಲ್ಲಿಯೇ ಶ್ರೀಮಠದ ಇಂದಿನ ಯುವ ಮಠಾಧಿಪತಿಗಳೂ ಸಮಾಜದಲ್ಲಿ ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಮುರಗೋಡ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಈ ಕ್ಷೇತ್ರ ಪುಣ್ಯ ಕ್ಷೇತ್ರವಾಗಿದ್ದು, ಭಕ್ತಿಯ ಭಾವನೆಯನ್ನು ಶ್ರೀಗಳು ಭಕ್ತರಲ್ಲಿ ತುಂಬುತ್ತಿದ್ದಾರೆ ಎಂದರು.

ಕನಕಗಿರಿಯ ಸುವರ್ಣಗಿರಿ ವಿರಕ್ತಮಠದ ಚನ್ನಮಲ್ಲ ಸ್ವಾಮಿಗಳು ಮಾತನಾಡಿ, ಇಂದು ಧರ್ಮದಿಂದ ನಡೆಯುವ ಜನ ಕ್ಷೀಣಿಸುತ್ತಿದೆ. ಧರ್ಮದ ಹಾದಿಯಲ್ಲಿ ನಡೆಯಲು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದು ಅವಶ್ಯವಾಗಿದೆ ಎಂದರು.

ಕೊಟ್ಟೂರೇಶ್ವರರ ಪುರಾಣ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಬೆಂಗಳೂರು ಮಿರಾಂಡ ಶಿಕ್ಷಣ ಸಂಸ್ಥೆಯ ಎಸ್‌.ಎನ್‌. ಕಾತರಕಿ, ಗುರು ಪರಂಪರೆಯಿಂದ ಬೆಳೆದು ಬಂದ ಶ್ರೀಮಠ, ಸಮಾಜಕ್ಕೆ ಉತ್ತಮ ಸಂಸ್ಕಾರವನ್ನು ನೀಡುತ್ತಿದೆ. ಈ ದಿಸೆಯಲ್ಲಿ ಇಂದಿನ ಶ್ರೀಗಳು ಈ ಭಾಗದಲ್ಲಿ ಯುವ ಸಮುದಾಯವನ್ನು ಸರಿ ಮಾರ್ಗದಲ್ಲಿ ಮುನ್ನಡೆಸಬೇಕು ಎಂದು ಮನವಿ ಮಾಡಿದರು.

Advertisement

ಇದೇ ವೇಳೆ ಕೊಟ್ಟೂರೇಶ್ವರರ ಪುರಾಣ ಗ್ರಂಥವನ್ನು ರಚಿಸಿದ ಬೆಟಗೇರಿಯ ರಾಮಣ್ಣ ಬ್ಯಾಟಿ ಗ್ರಂಥ ದಾನಿಗಳಾದ ಕೊಟ್ರಪ್ಪ ವೀರಭದ್ರಪ್ಪ ಯಾಳವಾಡ ದಂಪತಿ ಹಾಗೂ ಗ್ರಂಥ ರಚನೆಗೆ ಸಹಕರಿಸಿದ ಶಂಭು ನೀರಲಗಿ ಅವರನ್ನು ಸನ್ಮಾನಿಸಲಾಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ಕಳೆದ 26 ದಿನಗಳಿಂದ ನಡೆದ ಕಲಬುರ್ಗಿ ಶರಣ ಬಸವೇಶ್ವರ ಪ್ರವಚನವನ್ನು ಸದಾನಂದ ಶಾಸ್ತ್ರೀಗಳು ಮಂಗಲಗೊಳಿಸಿದರು.

ಕೊಟ್ಟೂರೇಶ್ವರ ಸ್ವಾಮೀಜಿ, ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಸದಾಶಿವಯ್ಯ ಮದರಿಮಠ, ಮಲ್ಲೇಶ ಹುಲಕೋಟಿ, ಚಂದ್ರಶೇಖರ ದೇವರು, ಮಹೇಶ ದೇವರು, ಗುರುಲಿಂಗ ದೇವರು, ಕೊಟ್ಟೂರೇಶ್ವರ ಶ್ರೀಗಳು, ರಾಜು ಕುರಡಗಿ, ನಿಂಗಪ್ಪ ಹಿರೇಹಾಳ ವೇದಿಕೆಯಲ್ಲಿದ್ದರು.

ಡಾ| ಎಸ್‌.ಸಿ. ಸರ್ವಿ ಸ್ವಾಗತಿಸಿದರು. ಕೆ.ಬಿ. ಕೊಣ್ಣೂರ ನಿರೂಪಿಸಿದರು. ಕೆ.ಆರ್‌. ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಣ್ಣ ಬೆಳಧಡಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next