Advertisement

ಗುರುಪುರ ಹೋಬಳಿಯಲ್ಲಿ26 ಗ್ರಾಮಗಳಿಗೆ ಕೇವಲ ಆರು ಗ್ರಾಮಕರಣಿಕರು

02:23 PM Aug 04, 2022 | Team Udayavani |

ಕೈಕಂಬ: ಗುರುಪುರ ಹೋಬಳಿ ವ್ಯಾಪ್ತಿಯಲ್ಲಿ 26 ಗ್ರಾಮಗಳಿದ್ದು, ಪ್ರಸ್ತುತ 6 ಗ್ರಾಮಗಳಲ್ಲಿ ಮಾತ್ರ ಗ್ರಾಮ ಕರಣಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮಸ್ಥರಿಗೆ ತಮ್ಮ ಗ್ರಾಮದ ಗ್ರಾಮ ಕರಣಿಕರು ಕಾಣಸಿಗದೆ ಅಲೆದಾಡುವಂತಾಗಿದೆ. ಸರಕಾರಿ ಯೋಜನೆಗಳು ಜನರಿಗೆ ಮುಟ್ಟದ ಪರಿಸ್ಥಿತಿಗೆ ನಿರ್ಮಾಣವಾಗಿದೆ.

Advertisement

ಮಂಗಳೂರು ಮಹಾನಗರ ಪಾಲಿಕೆಯ ಕುಡುಪು, ಪಚ್ಚನಾಡಿ, ತಿರುವೈಲು ಮತ್ತು ಇದರ ಜತೆ 23 ಗ್ರಾಮಗಳಾದ ಅಡ್ಯಾರು, ಅರ್ಕುಳ, ನೀರುಮಾರ್ಗ, ಅಡೂxರು, ಮೂಳೂರು, ಬೊಂಡಂತಿಲ, ಮಲ್ಲೂರು, ಉಳಾಯಿಬೆಟ್ಟು, ಬಡಗ ಎಡಪದವು, ಮೂಡುಪೆರಾರ,ಪಡುಪೆರಾರ, ತೆಂಕುಳಿಪಾಡಿ, ಬಡಗುಳಿಪಾಡಿ, ಮೊಗರು, ಅದ್ಯಪಾಡಿ, ಕೊಳಂಬೆ, ಕಂದಾವರ, ಕೊಂಪದವು, ಮುಚ್ಚಾರು, ತೆಂಕ ಎಡಪದವು, ಕಿಲೆಂಜಾರು, ಕೊಳವೂರು, ಮುತ್ತೂರು ಗುರುಪುರ ಹೋಬಳಿ ವ್ಯಾಪ್ತಿಗೆ ಬರುತ್ತವೆ.

ಒಂದು ಗ್ರಾಮಕರಣಿಕರಿಗೆ 3ರಿಂದ 5 ಗ್ರಾಮಗಳು ಇಲ್ಲಿ ಒಬ್ಬ ಗ್ರಾಮಕರಣಿಕರಿಗೆ ತಲಾ 3 ರಿಂದ 5 ಗ್ರಾಮಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಎರಡು ದಿನಕ್ಕೆ ಒಂದು ಗ್ರಾಮಗಳಿಗೆ ಹೋದರೂ ಎಲ್ಲ ಗ್ರಾಮಗಳಲ್ಲಿ ಕಾರ್ಯನಿರ್ವಹಿಸಲು ಕಷ್ಟ ಪಡುವಂತಾಗಿದೆ. ಜಾತಿ, ಆದಾಯ, ಪಿಂಚಣಿ, ಪ್ರಕೃತಿ ವಿಕೋಪ, ರೇಶನ್‌ ಕಾರ್ಡ್‌ ಸ್ಥಳ ಪರಿಶೀಲನೆ, ನೋಟಿಸ್‌ ಜಾರಿ, ತಾಲೂಕು ಕಚೇರಿಯಲ್ಲಿ ಸಭೆಗಳು ಹೀಗೆ ಎಲ್ಲದಕ್ಕೂ ಗ್ರಾಮಕರಣಿಕರ ಸಹಿ ಅಗತ್ಯವಾಗಿದೆ. ಆದರೆ ಅವರಿಗಾಗಿ ಹುಡುಕಾಟ ಮಾಡಬೇಕಾದ ಪರಿಸ್ಥಿತಿ ಗ್ರಾಮಸ್ಥರದ್ದು.

ಜನರಿಗೆ ತಲುಪದ ಯೋಜನೆಗಳು

ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅದರೆ ಅದಕ್ಕೆ ಗ್ರಾಮ ಕರಣಿಕರು ಹಾಗೂ ಕಂದಾಯ ಇಲಾಖೆ ಶಿಫಾರಸು ಅಗತ್ಯ. ಸರಕಾರದ ಯೋಜನೆಗಳು ಜನರಿಗೆ ತಲುಪಲು ಗ್ರಾಮ ಕರಣಿಕರ ಕೊರತೆಯಿಂದ ಸಾಧ್ಯವಾಗುತ್ತಿಲ್ಲ. ಸರಕಾರ ಹಲವಾರು ಯೋಜನೆಗಳು ತರುವ ಜತೆಗೆ ಗ್ರಾಮಕರಣಿಕರನ್ನು ಪ್ರತೀ ಗ್ರಾಮಗಳಲ್ಲಿ ನೇಮಿಸುವುದು ಅಗತ್ಯ.

Advertisement

ಹಲವಾರು ಗ್ರಾಮ ಸಭೆಗಳಲ್ಲಿ ಖಾಯಂ ಗ್ರಾಮಕರಣಿಕರ ನೇಮಕಾತಿಯ ಬಗ್ಗೆ ಒತ್ತಾಯಗಳು ಬಂದಿದೆ. ನಿರ್ಣಯಗಳು ಕೂಡ ಆಗಿದೆ. ಎಲ್ಲದಕ್ಕೂ ಗ್ರಾಮ ಕರಣಿಕರೇ ಅಗತ್ಯ ವಾಗಿರುವುದರಿಂದ ಗ್ರಾಮ ಗ್ರಾಮಗಳಿಗೆ ಗ್ರಾಮಕರಣಿಕರ ನೇಮಕಾತಿಯಾಗಬೇಕು.

ಯೋಜನೆಗಳು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿರಬಾರದು. ಅವುಗಳನ್ನು ಅನುಷ್ಟಾನಕ್ಕೆ ತರುವಲ್ಲಿ ಗ್ರಾಮಕ ರಣಿಕರು ಗ್ರಾಮಸ್ಥರಿಗೆ ಸುಲಭವಾಗಿ ಸಿಗಬೇಕು. ಈಗಿನ ಪರಿಸ್ಥಿತಿಯಲ್ಲಿ ಗ್ರಾಮ ಕರಣಿಕರನ್ನು ಹುಡುಕಿ ಅಥವಾ ಪೋನ್‌ ಮಾಡಿ ಕೇಳಿ ಬೇರೆ ಗ್ರಾಮಗಳಿಗೆ ಹೋಗಿ ಅಲ್ಲಿ ಅವರ ಸಹಿ ಹಾಕಿಸಿಕೊಳ್ಳಬೇಕಾಗಿದೆ.

ಸಚಿವರಿಗೆ ಮನವಿ: ಪ್ರತಿಯೊಂದು ಗ್ರಾಮ ಪಂಚಾಯತ್‌ಗೆ ಗ್ರಾಮ ಕರಣಿಕರ ನೇಮಿಸಬೇಕೆಂದು ಕಂದಾಯ ಸಚಿವ ಅಶೋಕ್‌ ಅವರಿಗೆ ಈಗಾಗಲೇ ಮನವಿ ಮಾಡಿದ್ದೇನೆ. ಜಿಲ್ಲೆಯಲ್ಲಿಯೇ ಇರುವಗ್ರಾಮ ಕರಣಿಕರ ಕೊರತೆಯ ಬಗ್ಗೆಯೂ ಅವರ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಅಧಿಕಾರ ಕೊಟ್ಟು ಗ್ರಾಮಕರಣಿಕರನ್ನು ನೇಮಿಸಬೇಕೆಂದು ಮನವಿಯನ್ನು ಮಾಡಿದ್ದೇನೆ.ಗುರುಪುರ ನಾಡಕಚೇರಿಯಲ್ಲಿ ಡಾಟಾ ಆಪರೇಟರ್‌ ಸಿಬಂದಿ ಕೊರತೆಯ ಬಗ್ಗೆ ಹಾಗೂ ನೇಮಕಕ್ಕೂ ಮನವಿ ಮಾಡಲಾಗಿದೆ. – ಡಾ| ಭರತ್‌ ಶೆಟ್ಟಿ ವೈ., ಶಾಸಕ

ಗುರುಪುರ ನಾಡಕಚೇರಿ: ಏಕೈಕ ಡಾಟಾ ಆಪರೇಟರ್‌

ನಾಡಕಚೇರಿಯಲ್ಲಿಯೂ ಇಂತಹದ್ದೇ ಸನ್ನಿವೇಶ. ಉಪತಹಶೀಲ್ದಾರ್‌, ಕಂದಾಯ ನಿರೀಕ್ಷಕರು, ಒಬ್ಬರು ಡಾಟಾ ಆಪರೇಟರ್‌, ದಿನಕೂಲಿ ನೌಕರ ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಗಳ ಮಾತೃ ಇಲಾಖೆಯಾದ ಕಂದಾಯ ಇಲಾಖೆ ಮಹತ್ವದ್ದಾಗಿದ್ದು, ಇಲ್ಲಿ ಯಾವುದೇ ಕೊರತೆ ಕಂಡು ಬಂದಲ್ಲಿ ಸಮಸ್ಯೆ ಎದುರಿಸುವುದು ಜನರು. ಈ ಬಗ್ಗೆ ಗಮನ ನೀಡಬೇಕಾಗಿದೆ. ಗುರುಪುರ ನಾಡ ಕಚೇರಿಯಲ್ಲಿ ಈಗ ಒಬ್ಬರೇ ಡಾಟಾ ಆಪರೇಟರ್‌ ಕಾರ್ಯನಿರ್ವಹಿಸುತ್ತಿದ್ದಾರೆ. ದಿನೇ ದಿನೆ ಜನರ ಉದ್ದದ ಸಾಲು ಇಲ್ಲಿ ಕಾಣಸಿಗುತ್ತದೆ. ಇನ್ನೊಬ್ಬರು ದಿನಗೂಲಿ ನೌಕರ ಕಾರ್ಯನಿರ್ವಹಿಸುತ್ತಿದ್ದು ಇಲ್ಲಿಯೂ ಇನ್ನೊಬ್ಬರ ಅಗತ್ಯವಿದೆ. ದ್ವಿತೀಯ ಸಹಾಯಕ ಹುದ್ದೆ ನೇಮಕಾತಿಯಾಗದೇ ಹಲವಾರು ವರ್ಷಗಳಾಗಿವೆ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next