Advertisement

ಬೆಳಕು ನೀಡದ ಸೋಲಾರ್‌ ದೀಪಗಳು

02:57 PM Dec 02, 2019 | Naveen |

ಚೆನ್ನಕೇಶವುಲು ಗೌಡ
ಗುರುಮಠಕಲ್‌:
ಪಟ್ಟಣದ ಅನೇಕ ವಾರ್ಡ್‌ಗಳಲ್ಲಿ ಸೋಲಾರ್‌ ದೀಪಗಳು ಬೆಳಗುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಕತ್ತಲೆಯಲ್ಲಿ ತಿರುಗಾಡುವಂತಾಗಿದೆ. ಪಟ್ಟಣದ 2009-10ನೇ ಸಾಲಿನಲ್ಲಿ ಮುಖ್ಯಮಂತ್ರಿ ಅನುದಾನದಲ್ಲಿ 14 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸುಮಾರು 240ಕ್ಕೂ ಹೆಚ್ಚಿನ ಸೋಲಾರ್‌ ದೀಪ ಅಳವಡಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆಯಿಂದ ದಿನದಿಂದ ದಿನಕ್ಕೆ ದೀಪಗಳು ಹಾಳಾಗುತ್ತಿವೆ. ಕಳ್ಳತನವಾಗುತ್ತಿವೆ. ಅಲ್ಲದೇ ಕಿಡಿಗೇಡಿಗಳು ಕಲ್ಲು ಹೊಡೆಯುವುದರಿಂದ ದೀಪಗಳು ಬೆಳಗುತ್ತಿಲ್ಲ.

Advertisement

ಸರಕಾರಿ ಆಸ್ಪತ್ರೆ ರಸ್ತೆಯಲ್ಲಿ ಉರಿಯದ ಬೀದಿ ದೀಪಗಳದ್ದೇ ಬಲುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಕಳೆದ ಕೆಲ ಸಮಯದಿಂದ ಇಲ್ಲಿ ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ಪುರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೆಲ ವಾರ್ಡ್‌ಗಳು ಪಟ್ಟಣದಿಂದ ದೂರ ಇದೆ. ಬೀದಿ ದೀಪಗಳು ಇಲ್ಲ. ರಾತ್ರಿ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳು ತಿರುಗಾಡಲು ಸಾಧ್ಯವಾಗುತ್ತಿಲ್ಲ.ಈ ಬಗ್ಗೆ ಅನೇಕ ಅಧಿಕಾರಿಗಳಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಲಕ್ಷ್ಮೀನಗರ, ಕಟ್ಟೆಲಗೇರಿ, ಇಂದ್ರನಗರ, ಗಡಿಮೊಹಲಾ, ನರಾಯಣಪುರ, ಮೋಮಿನಪುರ, ಪಂಚತ ಮೊಹಲಾ, ಕಂದೂರಹೊಣಿ, ಹರಿಜನವಾಡ ಸೇರಿದಂತೆ ಹಲವೆಡೆ ಸೋಲಾರ್‌ ದೀಪಗಳು ಕೆಟ್ಟು ನಿಂತಿವೆ. ಕೆಲವೊಂದು ಕಡೆ ಬ್ಯಾಟರಿಗಳಿಲ್ಲ, ಕೆಲ ಕಡೆ ಡಿಸ್ಟಲರಿ ವಾಟರ್‌ ಪೂರೈಕೆಯಾಗದ ಕಾರಣ ದೀಪಗಳು ಕೆಟ್ಟು
ನಿಂತಿವೆ. ಅಧಿಕಾರಿಗಳು ದುರಸ್ತಿ ಮಾಡಿಸಿ ಅನುಕೂಲ ಒದಗಿಸಬೇಕು ಎಂದು ಹರಿಜನವಾಡದ ರಾಮುಲು ಮನವಿ ಮಾಡಿದ್ದಾರೆ.

ಸೋಲಾರ್‌ ಬ್ಯಾಟರಿಗಳು ಹೆಚ್ಚು ಬೆಲೆ ಬಾಳುವುದರಿಂದ ಕಳ್ಳತನ ಮಾಡುತ್ತಿದ್ದಾರೆ. ಇದರ ನಿರ್ವಹಣೆಯೇ ದುಬಾರಿಯಾಗುತ್ತಿದೆ. ಆದ್ದರಿಂದ ಇವುಗಳ ಬದಲಾಗಿ ಎಲ್‌ಇಡಿ ಬಲ್ಟ್‌ಗಳನ್ನೇ ಅಳವಡಿಸಲಾಗುವುದು. ಆಯಾ ಬಡಾವಣೆಯವರು ಒಗ್ಗಟ್ಟಾಗಿ ಇದರ ಬಗ್ಗೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಳ್ಳತನ ಹೆಚ್ಚಾಗುತ್ತಲೇ ಇದ್ದರೆ ನಿರ್ವಹಣೆ ತೊಂದರೆಯಾಗುತ್ತದೆ ಎಂದು ಪುರಸಭೆ ಕಾರ್ಯ ನಿರ್ವಹಣಾಧಿಕಾರಿಗಳು ಸಾರ್ವಜನಿಕರಿಗೆ ತಿಳಿಸಿದರು.

ನಿರ್ವಹಣೆ ಸಮಸ್ಯೆಯಿಂದಾಗಿ ಸೋಲಾರ್‌ ದೀಪಗಳ ಬಲ್ಬ್ಗಳು ಕೆಲ ಕಡೆ ಹಾಳಾಗಿವೆ. ಇನ್ನೊಂದು ಕಡೆ ಬ್ಯಾಟರಿ ಹಾಳಾಗಿದೆ. ಬ್ಯಾಟರಿಗಳನ್ನು ಬದಲಾವಣೆ ಮಾಡಬೇಕು. ಹಾಳಾದ ದೀಪಗಳನ್ನು ಹೊಸದಾಗಿ ಹಾಕಬೇಕು ಮತ್ತು ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next