Advertisement

ಉದ್ಯಾನ ಜಾಗದಲ್ಲಿ ಅಕ್ರಮ ಕಟ್ಟಡ

12:19 PM Nov 14, 2019 | Naveen |

„ಚೆನ್ನಕೇಶವುಲು ಗೌಡ
ಗುರುಮಠಕಲ್‌:
ಬಡಾವಣೆಗಳ ನಿರ್ಮಾಣ, ಪರವಾನಗಿಗೆ ಸಂಬಂಧಿಸಿದಂತೆ ಪ್ರತಿ ಬಡಾವಣೆಯಲ್ಲಿಯೂ ಸಾರ್ವಜನಿಕ ಬಳಕೆಗೆ ಇಂತಿಷ್ಟು ವಿಸ್ತೀರ್ಣದ ನಿವೇಶನ ಮೀಸಲಾಗಿ ಕಾಯ್ದಿರಿಸಬೇಕು ಎಂಬ ನಿಯಮವಿದೆ. ನಿಯಮ ಪಾಲನೆ ಕಾರ್ಯಗತಗೊಳಿಸಬೇಕಿದ್ದವರೇ ಅದನ್ನು ಗಾಳಿಗೆ ತೂರಿ ಸಾರ್ವಜನಿಕ ಬಳಕೆ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದರೆ ಸಾರ್ವಜನಿಕರು ಯಾರನ್ನು ಕೇಳಬೇಕು?

Advertisement

ಇದು ತಾಲೂಕು ಕೇಂದ್ರ ಗುರುಮಠಕಲ್‌ ಪಟ್ಟಣದ ಲಕ್ಷ್ಮೀ ನಗರ ಬಡಾವಣೆ ನಿವಾಸಿಗಳ ವ್ಯಥೆ. ಸ.ನಂ. 90ರ ಲಕ್ಷ್ಮೀ ನಗರ ಬಡಾವಣೆ ವ್ಯಾಪ್ತಿಯ ಸಾರ್ವಜನಿಕ ಉದ್ಯಾನಕ್ಕೆ ಮೀಸಲಿಟ್ಟಿದ್ದ ನಿವೇಶನವನ್ನು ಕೆಲವು ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಶಾಮೀಲಾಗಿ ದಾಖಲೆ ಸೃಷ್ಟಿಸಿಕೊಂಡು ಅಕ್ರಮ ಮಾರಾಟಕ್ಕೆ ಮುಂದಾಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಮೂಡಿಸುತ್ತಿದೆ. ಪುರಸಭೆ ಮಾಜಿ ಸದಸ್ಯರು, ಪುರಸಭೆ ಕೆಲವು ಅಧಿಕಾರಿಗಳು ಒಂದಾಗಿ ನಮ್ಮ ಕಾಲೊನಿಯಲ್ಲಿನ ಗಾರ್ಡನ್‌ ಜಾಗ ಮನೆ ಕಟ್ಟಿಕೊಳ್ಳಲು ಮಾರಾಟ ಮಾಡಿದ್ದಾರೆ.

ಇದನ್ನು ಪ್ರಶ್ನಿಸಿದ್ದಕ್ಕೆ ಮನೆ ಮೇಲೆ ಗೂಂಡಾಗಳಂತೆ ನುಗ್ಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ. ನಿಮ್ಮ ಮನೆ ಮಾರುತ್ತಿಲ್ಲ. ಸರ್ಕಾರಿ ಭೂಮಿ ಮಾರಿದರೆ ನಿಮಗ್ಯಾಕೆ ನೋವು ಎಂದು ಅವಾಚ್ಯವಾಗಿ ಬಯ್ಯುತ್ತಾರೆ ಎನ್ನುವುದು ಲಕ್ಷ್ಮೀ ನಗರ ಬಡಾವಣೆ ನಿವಾಸಿಗಳಾದ ರವಿ, ತಿಮ್ಮಪ್ಪ ಆರೋಪ.

2015ರಲ್ಲಿಯೂ ಇಂತಹ ಪ್ರಕರಣವೊಂದು ನಡೆದಿತ್ತು. ಇಡೀ ಜಿಲ್ಲೆಯಲ್ಲಿಯೇ ಇದರ ಚರ್ಚೆ ತೀವ್ರವಾಗಿತ್ತು. ನಂತರ ಅಕ್ರಮ ನಿವೇಶನಗಳು, ಬೈ ನಂಬರ್‌ ನಿವೇಶನಗಳಲ್ಲಿ ಪುರಸಭೆ ಆಸ್ತಿ ಎನ್ನುವ ಫಲಕ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಇದೀಗ ಮತ್ತೆ ಅಕ್ರಮ ಕಟ್ಟಡಗಳ ಕಾರ್ಯ ಮುಂದುವರಿಯುತ್ತಿದೆ ಎನ್ನುವುದು ಬಡಾವಣೆ ಜನರನ್ನು ಚಿಂತೆಗೀಡು ಮಾಡಿದೆ.

ಉದ್ಯಾನ ಸ್ಥಳ ಅಕ್ರಮ ಮಾರಾಟವಾಗಿದೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ಈ ಮೊದಲು ಪುರಸಭೆ ಮುಖ್ಯಾಧಿಕಾರಿಯಾಗಿದ್ದವರು ತಮ್ಮ ಅವಧಿಯಲ್ಲಿ ಸ.ನಂ.90ರಲ್ಲಿ ಒಂದೇ ಒಂದು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಈಗ ಕಟ್ಟಡ ನಿರ್ಮಾಣದ ಕೆಲಸ ವೇಗ ಪಡೆಯುತ್ತಿದೆ.

Advertisement

ಪುರಸಭೆಗೆ ಹೋದಾಗ ಅಲ್ಲಿನ ಸಿಬ್ಬಂದಿ ಬಂದು ಕೆಲಸ ನಿಲ್ಲಿಸುತ್ತಾರೆ. ಆದರೆ, ಸಿಬ್ಬಂದಿ ಅತ್ತ ಹೋದ ಕೂಡಲೇ ಇತ್ತ ಕೆಲಸಗಳು ಆರಂಭಗೊಳ್ಳುತ್ತವೆ ಎಂದು ತಮ್ಮ ಅಸಹಾಯಕತೆ ತೋಡಿಕೊಳ್ಳುತ್ತಾರೆ ಇಲ್ಲಿನ ಹಣಮಂತು ಅಂಜಪ್ಪ ಹಾಗೂ ಕೃಷ್ಣ.

Advertisement

Udayavani is now on Telegram. Click here to join our channel and stay updated with the latest news.

Next