ನಾನಾಗ ಬಹುಶಃ 2ನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮದು ಸರ್ಕಾರಿ ಅನುದಾನಿತ ಶಾಲೆಯಾದ್ದರಿಂದ ಈಗಿನ ಮಕ್ಕಳಂತೆ ಸ್ಟೈಲಿಶ್ ಆಗಿ ರೆಡಿ ಆಗಿ ಹೋಗುವುದು ನಮಗೆ ತಿಳಿದಿರಲಿಲ್ಲ. ಕೈಯಲ್ಲಿ ಒಂದು ಸ್ಲೇಟ್, ಒಂದು ಬಳಪ. ಆಗ ಅದೇ ನಮಗೆ ಎಲ್ಲವೂ ಆಗಿತ್ತು. ನನ್ನ ಅಕ್ಕ ಮತ್ತು ನಾನು ಒಂದೇ ಶಾಲೆಯಲ್ಲಿ ಓದುತ್ತಿದ್ದುದರಿಂದ ಅಕ್ಕ ಯಾವಾಗಲೂ ನನ್ನ ಜೊತೆಯೇ ಇರುತ್ತಿದ್ದರು.
ಒಂದು ದಿನ ನಾನು ಅಕ್ಕನಿಗೆ ತಿಳಿಯದಂತೆ ಮಧ್ಯಾಹ್ನದ ಊಟದ ನಂತರ ಹೇಳದೇ ಕೇಳದೆ ಶಾಲೆಗೆ ಬಂಕ್ ಹೊಡೆದು ಮನೆಗೆ ಹೋಗಿದ್ದೆ. ಅಮ್ಮ ಮಧ್ಯಾಹ್ನ ಮನೆಗೆ ಬಂದವರೇ, “ಶಾಲೆಯಿಂದ ಯಾಕೆ ಮನೆಗೆ ಬಂದಿದ್ದೀಯ?’ ಎಂದು ಪ್ರಶ್ನಿಸಿದರು. ಮೊದಲು ಹೊಟ್ಟೆನೋವು ಅಂದೆ. ನಂತರ ಮೇಷ್ಟ್ರೇ ಕಳಿಸಿಬಿಟ್ಟರು ಎಂದೆ. ನಾನು ಏನೇ ಹೇಳಿದರೂ ಅಮ್ಮ ನಂಬಲಿಲ್ಲ. ನನಗೆ ಎರಡೇಟು ಕೊಟ್ಟು ಮತ್ತೆ ಶಾಲೆಗೆ ಓಡಿಸಿದರು.
ಆಗ ನಮ್ಮ ಕ್ಲಾಸ್ ಟೀಚರ್ ಆಗಿದ್ದವರು ಶಿವಲಿಂಗಪ್ಪ ಸರ್. ಅವರನ್ನು ಕಂಡರೆ ಇಡೀ ಸ್ಕೂಲ್‌ಗೇ ಭಯ. ನಾನು, ಏನಪ್ಪಾ ಮಾಡೋದು? ಈಗ ಹೋದರೆ ಸರ್ ಹೊಡೆಯೋದಂತೂ ಗ್ಯಾರಂಟಿ. ಅಲ್ಲಿಗೆ ಹೋಗಿ ಏಟು ತಿನ್ನುವ ಬದಲು ಹೋಗದೇ ಸುಮ್ಮನಿರುವುದೇ ಲೇಸು ಅಂದುಕೊಂಡು ನಮ್ಮ ಸ್ಕೂಲ್ ಮುಂದೆಯೇ ಇದ್ದ ಬಸವಣ್ಣನ ದೇವಸ್ಥಾನದ ಹಿಂದೆ ಅವಿತು ಕುಳಿತೆ. ಸ್ಕೂಲ್ ಬಿಟ್ಟ ಮೇಲೆ ಅಕ್ಕನ ಜೊತೆ ಮನೆಗೆ ಹೋದರಾಯಿತು ಅಂತ ನನ್ನ ಐಡಿಯಾ. ಆದರೆ ಅಂದು ನನ್ನ ಗ್ರಹಚಾರ ಕೆಟ್ಟಿತ್ತು ಅಂತ ಕಾಣುತ್ತೆ, ಅದು ಹೇಗೋ ನನ್ನನ್ನು ನೋಡಿದ ನಮ್ಮ ಸರ್ ಬಂದು ನನ್ನನ್ನು ಹಿಡಿದು ಚೆನ್ನಾಗಿ ಬಾರಿಸಿಯೇ ಬಿಟ್ಟರು.
ಅಂದು ತಿಂದ ಒದೆ ನನಗೆ ಇನ್ನೂ ಚೆನ್ನಾಗಿಯೇ ನೆನಪಿದೆ. ಅವರಿಂದ ಚೆನ್ನಾಗಿ ಪೆಟ್ಟು ತಿಂದ ನಂತರವೇ ನನಗೆ, ನನ್ನಂಥ ಹಲವರಿಗೆ ಬುದ್ಧಿ ಬಂತು ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಬೇಸರದ ಸಂಗತಿ ಎಂದರೆ ನಮ್ಮ ಮೆಚ್ಚಿನ ಶಿವಲಿಂಗಪ್ಪ ಸರ್ ಅವರು ತೀರಾ ಇತ್ತೀಚೆಗಷ್ಟೇ ನಿಧನರಾದರು. ಕೆಲಸದ ಒತ್ತಡದಿಂದಾಗಿ ಕೊನೆಯ ಬಾರಿಗೆ ಅವರ ಮುಖವನ್ನೂ ನನಗೆ ನೋಡಲಾಗಲಿಲ್ಲ. ಅವರನ್ನು ನೆನೆದಾಗಲೆಲ್ಲಾ ಕಣ್ಣಂಚಲ್ಲಿ ನೀರು ಜಿನುಗುತ್ತದೆ. ಅವರಿಲ್ಲದ ಶಾಲೆಯನ್ನು ನೋಡಿದಾಗಲೆಲ್ಲಾ ಹೃದಯ ಭಾರವೆನಿಸುತ್ತದೆ.
ಪುರುಷೋತ್ತಮ ವೆಂಕಿ