Advertisement

ಗುರು ರಾಯರ ರಥೋತ್ಸವ

11:48 AM Aug 20, 2019 | Lakshmi GovindaRaj |

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ನಿಮಿತ್ತ ಭಾನುವಾರ ಪ್ರಹ್ಲಾದರಾಜರ ರಥೋತ್ಸವ ಅಸಂಖ್ಯ ಭಕ್ತರ ಮಧ್ಯೆ ವೈಭವದಿಂದ ನೆರವೇರಿತು. ಬೆಳಗ್ಗೆ ರಾಯರ ಮೂಲ ವೃಂದಾವನಕ್ಕೆ ವಿಶೇಷ ಪೂಜೆ, ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿ ಷೇಕ, ಹೂವುಗಳಿಂದ ವಿಶೇಷ ಅಲಂಕಾರ ಸೇವೆ ಜರುಗಿತು.

Advertisement

ಶ್ರೀಗುರುಸಾರ್ವಭೌಮ ವಿದ್ಯಾಪೀಠದಲ್ಲಿ ಪ್ರಹ್ಲಾದ ರಾಜರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪುರಬೀದಿಯಲ್ಲಿ ವಿವಿಧ ವ್ಯಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಮಠದಲ್ಲಿ ಪ್ರಹ್ಲಾದರಾಜರಿಗೆ ಶ್ರೀ ಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರು ಚಾಮರ ಸೇವೆ, ಪೂಜೆ ನೆರವೇರಿಸಿದರು.

ಈ ವೇಳೆ ಶ್ರೀಗಳು ಗುಲಾಲ್‌ ಎರಚುವ ಮೂಲಕ ವಸಂತೋತ್ಸವಕ್ಕೆ ಚಾಲನೆ ನೀಡಿದರು. ಮಠದ ಸಿಬ್ಬಂದಿ ಪರಸ್ಪರ ಬಣ್ಣ ಎರಚುವ ಮೂಲಕ ಸಂಭ್ರಮದಿಂದ ವಸಂತ್ಸೋತ್ಸವ ನೆರವೇರಿಸಿದರು. ಅಲ್ಲಿಂದ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನು ಮಠದ ಪ್ರಾಕಾರದಲ್ಲಿ ಮೆರವಣಿಗೆ ನಡೆಸಲಾಯಿತು.

ಬಳಿಕ ಹೂಗಳಿಂದ ಸಿಂಗರಿಸಿದ್ದ ರಥದ ಸುತ್ತಲೂ ಐದು ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಕೂಡಿಸಲಾಯಿತು. ಈ ವೇಳೆ ನೆರೆದಿದ್ದ ಅಸಂಖ್ಯ ಭಕ್ತರನ್ನುದ್ದುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ಬಳಿಕ ರಥೋತ್ಸವಕ್ಕೆ ಚಾಲನೆ ನೀಡಿದರು.

ವಿವಿಧ ವಾದ್ಯ ಮೇಳಗಳು, ಕಲಾ ತಂಡಗಳ ವರ್ಣ ರಂಜಿತ ಪ್ರದರ್ಶನಗಳ ಮಧ್ಯೆ ರಥಬೀದಿಯಲ್ಲಿ ಅಸಂಖ್ಯ ಭಕ್ತರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆ ಯಿಂದ ನೆರವೇರಿತು. ಈ ವೇಳೆ ಶ್ರೀ ಸುಬುಧೇಂದ್ರ ತೀರ್ಥರು ಹೆಲಿಕಾಪ್ಟರ್‌ ಮೂಲಕ ಆಗಮಿಸಿ ರಥಕ್ಕೆ ಹಾಗೂ ಮಠದ ಶಿಖರಗಳಿಗೆ ಪುಷ್ಪವೃಷ್ಟಿಗೈದರು. ಬಳಿಕ ಮೂಲರಾಮದೇವರ ಪೂಜೆ ನೆರವೇರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next