ವಿಜಯಪುರ: ಭಕ್ತರಿಂದ ನಡೆದಾಡುವ ದೇವರೆಂದೇ ಕರೆಸಿಕೊಂಡಿದ್ದ ವಿಜಯಪುರದ ಸಿದ್ಧೇಶ್ವರ ಶ್ರೀಗಳ ಜ್ಞಾನಯೋಗಾಶ್ರಮದಲ್ಲಿ ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಗುರುಗಳ ಸ್ಮರಣಾ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಭಾನುವಾರ ಗುರುಪೂರ್ಣಿಮೆ ಹಿನ್ನೆಲೆಯಲ್ಲಿ ನಗರದ ಜ್ಞಾನಯೋಗಾಶ್ರಮಕ್ಕೆ ಹರಿಸುದ ಬಂದ ಲಕ್ಷಾಂತರ ಭಕ್ತರ ದಂಡು, ಜ್ಞಾನಯೋಗಾಶ್ರಮದ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಗದ್ದುಗೆ ಹಾಗೂ ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ಗೌರವದ ಭಕ್ತಿ ಸಮರ್ಪಿಸಿದರು.
ಸಿದ್ಧೇಶ್ವರ ಶ್ರೀಗಳು ಇದ್ದಾಗ ಅವರ ಆಶಯದಂತೆ ಪ್ರತಿ ಗುರು ಪೂರ್ಣಿಮೆ ದಿನದಂದು ಸಿದ್ದೇಶ್ವರ ಶ್ರೀಗಳ ಗುರುಗಳಾಗಿದ್ದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಸ್ಮರಣೆಯ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಸಿದ್ದೇಶ್ವರ ಶ್ರೀಗಳಿಲ್ಲದ ಎರಡನೇ ವರ್ಷದ ಈ ಗುರು ಪೂರ್ಣಿಮೆಯಂದು ಆಶ್ರಮದಲ್ಲಿ ಶತಮಾನದ ಸಂತಶ್ರೇಷ್ಠ ಸಿದ್ಧೇಶ್ವರ ಶ್ರೀಗಳು ಹಾಗೂ ಅವರ ಗುರುಗಳಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಸ್ಮರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು ಶ್ರೀಗಳ ಗುಣಗಾನ ಮಾಡಿದರು.
ಗುರು ಸ್ಮರಣೆಯ ಮೂಲಕ ಭಕ್ತಿ ಸಮರ್ಪಿಸಲು ಸೂರ್ಯೋದಯಕ್ಕೆ ಮುನ್ನವೇ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ್ದ ಹತ್ತಾರು ಸಾವಿರ ಭಕ್ತರು, ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಜಪಯೋಗ ನಡೆಯಿತು. ಆಶ್ರಮಕ್ಕೆ ಆಗಮಿಸಿದ್ದ ಭಕ್ತರಿಗಾಗಿ ಸಿದ್ದೇಶ್ವರ ಶ್ರೀಗಳ ಧ್ವನಿ ಮುದ್ರಿತ ಪ್ರವಚನ ಪ್ರಸಾರ ಮಾಡಲಾಯಿತು. ಈ ವೇಳೇ ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಪ್ರಶಾಂತವಾಗಿ ಕುಳಿತು ಸಿದ್ದೇಶ್ವರ ಶ್ರೀಗಳ ಸಂದೇಶ ಆಲಿಸಿದರು.
ಸಿದ್ಧೇಶ್ವರ ಶ್ರೀಗಳ ಪ್ರವಚನ ಪ್ರಸಾರದ ಬಳಿಕ ಪ್ರಣವ ಮಂಟಪದಲ್ಲಿ ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀಗಳು ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಗದ್ದುಗೆ ಪೂಜೆ ಸಲ್ಲಿಸಿದರು. ಬಳಿಕ ಪುಷ್ಪಗಳಿಂದ ಅಲಂಕೃತ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಬಳಿಕ ನೆರೆದಿದ್ದ ನೂರಾರು ಸಂತರು, ಸಾವಿರಾರು ಸಂಖ್ಯೆ ಭಕ್ತರು ಗದ್ದುಗೆ ಹಾಗೂ ಪಾದುಕೆ ಹಾಗೂ ಸಿದ್ಧೇಶ್ವರ ಶ್ರೀಗಳ ಭಾವಚಿತ್ರದ ದರ್ಶನ ಪಡೆದು, ಪುಷ್ಪ-ಕಾಯಿ-ಕಪೂರ್ಣ ನೈವೇದ್ಯ ಸಮರ್ಪಿಸಿದರು.
ಗುರುಪೂರ್ಣಿಮೆ ನಿಮಿತ್ತ ವಿಜಯಪುರ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ ಧಾರವಾಡ, ಕಲಬುರಗಿ, ಬೀದರ, ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಮಾತ್ರವಲ್ಲದೇ ನೆರೆ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿ ಭಕ್ತಿ ಸಮರ್ಪಿಸಿದರು.