ನಮ್ಮ ಭಾರತ ದೇಶದ ವೈಶಿಷ್ಟ್ಯಗಳಲ್ಲಿ ಒಂದು ಗುರು ಶಿಷ್ಯ ಪರಂಪರೆ. ಗುರುಗಳು ನಮಗೆ ಅಜ್ಞಾನದಿಂದ ಮುಕ್ತಿ ನೀಡುತ್ತಾರೆ. ಅದಕ್ಕೆ ಗುರು ಪೂರ್ಣಿಮೆಯ ದಿನದಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಅವರ ಚರಣಕ್ಕೆ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಗುರುಗಳು ನಮ್ಮ ಜೀವನದ ಸೂತ್ರದಾರರಲ್ಲಿ ಒಬ್ಬರು ಎಂದೂ ಹೇಳಬಹುದು.
ನಮಗೆ ಸಂಸ್ಕಾರವನ್ನು ಕಲಿಸಿ, ನಮ್ಮನ್ನು ಸಮಾಜದೊಂದಿಗೆ ಏಕರೂಪವಾಗಲು ಕಲಿಸುವ ತಂದೆ ತಾಯಿಯೇ ನಮ್ಮ ಜೀವನದ ಮೊದಲ ಗುರು. ಬಾಲ್ಯದಲ್ಲಿ ತಂದೆ ತಾಯಿ ನಮಗೆ ಪ್ರತಿಯೊಂದು ವಿಷಯವನ್ನೂ ಕಲಿಸುತ್ತಾರೆ. ಯಾವುದು ಒಳ್ಳೆಯದು-ಕೆಟ್ಟದ್ದು ಎಂಬುದರ ಅರಿವು ಮೂಡಿಸುತ್ತಾರೆ.
ಹಾಗೇ ನಮಗೆ ಅನೇಕ ವಿಷಯಗಳನ್ನು ಕಲಿಸಿ ಸರ್ವಾಂಗೀಣ ಪ್ರಗತಿಗೆ ಶ್ರಮ ವಹಿಸುವ ಶಿಕ್ಷಕರೇ ನಮ್ಮ ಜೀವನದ ಎರಡನೇ ಗುರು. ಈವರು ನಮಗೆ ಅರಿಯದ, ಲೋಕದ ಜ್ಞಾನ ನೀಡುತ್ತಾರೆ.
ನಮ್ಮ ಜೀವನದ ಮೂರನೇ ಗುರು ಎಂದರೆ ಆಧ್ಯಾತ್ಮಿಕ ಗುರು! ಪ್ರತಿಯೊಂದು ವ್ಯಕ್ತಿಯ ಜೀವನದಲ್ಲಿ ಗುರುಗಳು ಬರುತ್ತಾರೆ. ಭಗವಾನ್ ಶ್ರೀ ಕೃಷ್ಣ – ಅರ್ಜುನ ಮತ್ತು ರಾಮಕೃಷ್ಣ ಪರಮಹಂಸ – ಸ್ವಾಮಿ ವಿವೇಕಾನಂದ ಹೀಗೆ ಗುರು ಶಿಷ್ಯ ಪರಂಪರೆ ಇದು ನಮ್ಮ ದೇಶದ ವೈಶಿಷ್ಟ್ಯವಾಗಿದೆ. ಶಿಕ್ಷಣವು ತುಂಬಾ ಪರಿಪೂರ್ಣವಾಗಿರುವುದರಿಂದ ಪ್ರಾಚೀನ ಕಾಲದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ನಡುವಿನ ಸಂಬಂಧವು ತುಂಬಾ ಪವಿತ್ರವಾಗಿದೆ.
ಇಂದಿನ ದಿನದಲ್ಲಿ ಈ ಸಂಬಂಧಗಳ ಕೊರತೆಯು ತುಂಬಾ ಇದೆ. ಇದನ್ನು ಕೇವಲ ವೃತ್ತಿ ಎಂದು ಪರಿಗಣಿಸಲಾಗಿದೆ. ಇದು ಉದಾತ್ತ ವೃತ್ತಿಯೆಂದು ಪರಿಗಣಿಸಲ್ಪಟ್ಟ ಹಿಂದಿನ ದಿನಗಳಿಗೆ ಹೋಲಿಸಿದರೆ ಇದು ವ್ಯಾಪಾರ ಅಥವಾ ಆದಾಯದ ಮೂಲವಾಗಿದೆ. ಈ ಉದಾತ್ತ ವೃತ್ತಿಗೆ ಕಳಂಕ ತರದಂತೆ ಜಾಗೃತರಾಗಬೇಕು. ಭಾರತೀಯರ ಪರಿಕಲ್ಪನೆಯ ಪ್ರಕಾರ ಶಿಕ್ಷಣ ಶಿಕ್ಷಕರ ಆಧ್ಯಾತ್ಮಿಕ ಮತ್ತು ಬೌದ್ಧಿಕ ತಂದೆ. ಶಿಕ್ಷಕರ ಸಹಾಯವಿಲ್ಲದೆ ಯಾವುದೇ ಶಿಕ್ಷಣ ಪಡೆದುಕೊಳ್ಳಲು ಸಾಧ್ಯವಿಲ್ಲ. ಪ್ರಾಚೀನ ಭಾರತದಲ್ಲಿ ಜ್ಞಾನದ ಪ್ರಸರಣವು ಮೌಖೀಕವಾಗಿತ್ತು ಮತ್ತು ಶಿಕ್ಷಕನು ಜ್ಞಾನದ ಏಕೈಕ ಪಾಲಕನಾಗಿದ್ದನು. ಇವರಿಬ್ಬರ ನಡುವಿನ ಸಂಬಂಧ ಸೌಹಾರ್ದಯುತವಾಗಿತ್ತು.
ಉತ್ತಮ ಶಿಕ್ಷಕರಾಗಲು ಸಾಕಷ್ಟು ಶ್ರಮ ಬೇಕಾಗುತ್ತದೆ. ಯಾವಾಗಲೂ ಹಿರಿಯರನ್ನು ಗೌರವಿಸಿ ಮತ್ತು ಅವರಿಗೆ ವಿಧೇಯರಾಗಿ ಸಮಾಜ, ಶಿಕ್ಷಣದ ಕಡೆಗೆ ಏಕಾಗ್ರತೆ ಹೆಚ್ಚಬೇಕು. ಯಾವುದೇ ಬೇದಭಾವ ಮಾಡದೆ ಎಲ್ಲರನ್ನೂ ಸಮನಾಗಿ ನೋಡಬೇಕು. ಯಾವಾಗಲೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು.
ಕತ್ತಲೆ ಅಜ್ಞಾನವನ್ನು ತೊಡೆದುಹಾಕಲು ಸಹಾಯ ಮಾಡುವ ಎಲ್ಲ ಶಿಕ್ಷಕರನ್ನು ರಾಷ್ಟ್ರ ಯಾವಾಗಲೂ ಗೌರವಿಸುತ್ತದೆ. ಶಿಕ್ಷಕನು ಜ್ಞಾನದ ಸಾಗರ. ನಾವು ಸಾಧ್ಯವಾದಷ್ಟು ಕಾಲ ಒಂದು ವಿಷಯದ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳಲು ಯತ್ನಿಸಿದರೆ ವಿದ್ಯಾರ್ಥಿ ಜೀವನ ಎಂಬುದು ಸಾರ್ಥಕವಾದಂತೆ.
-ಸುದೀಪ ರವಿ ಮಾಳಿ
ಎಂ.ಎಂ. ಕಾಲೇಜು ಶಿರಸಿ