Advertisement

ರಾಜಕಾರಣಿಗಳಿಗೂ ಗುರು

11:44 PM Dec 29, 2019 | mahesh |

ಮಣಿಪಾಲ: ಕಾವಿ ವಸ್ತ್ರ, ಅನುಷ್ಠಾನ, ಉಪಾಸನೆಗಳ ಕಟ್ಟುನಿಟ್ಟು ಇದ್ದರೂ ಪೇಜಾವರ ಶ್ರೀಗಳಿಗೂ ರಾಜಕೀಯಕ್ಕೂ ಬಲವಾದ ನಂಟು. ಕೊನೆಯವರೆಗೂ ರಾಜಕಾರಣಿಗಳು, ರಾಜಕೀಯ ಅವರನ್ನು ಬಿಟ್ಟಿರಲಿಲ್ಲ. ರಾಜಕೀಯ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದರು. ಇತ್ತೀಚೆಗೆ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿ, ಈಗಿನ ರಾಜಕೀಯದಲ್ಲಿ ನೈತಿಕತೆ ಕುಸಿದಿದೆ ಎಂದಿದ್ದರು.

Advertisement

ಶ್ರೀಗಳ ಮತ್ತು ರಾಜಕೀಯದ ನಂಟು ಇಂದು ನಿನ್ನೆಯದಲ್ಲ. ಅಷ್ಟಮಠಗಳಲ್ಲೇ ಅತಿ ಹೆಚ್ಚು ರಾಜಕೀಯ ಸಂಪರ್ಕ ಹೊಂದಿದ್ದ ಯತಿವರೇಣ್ಯರು ಅವರು. ಈ ಸಂಪರ್ಕಗಳನ್ನು ಅವರು ಸ್ವಂತಕ್ಕಾಗಿ ಬಳಸಿಕೊಂಡಿದ್ದಿಲ್ಲ. ಬದಲಿಗೆ ತಾನು ಮಾಡುತ್ತಿರುವ ಕೆಲಸಗಳಿಗಾಗಿ ಬಳಸಿಕೊಂಡಿದ್ದರು. ಸಂತ ಸಮ್ಮೇಳನ, ವಿಹಿಂಪ ಜತೆಗಿನ ಒಡನಾಟದೊಂದಿಗೆ ಅವರಿಗೆ ರಾಜಕಾರಣಿಗಳ ಸಖ್ಯ ಲಭ್ಯವಾಗಿತ್ತು.

ಹಿಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿಯವರೆಗೆ ಅವರಿಗೆ ರಾಜಕಾರಣಿಗಳ ಸಂಪರ್ಕ ಇತ್ತು. ಇದಕ್ಕೆ ಕಾಂಗ್ರೆಸ್‌, ಬಿಜೆಪಿ ಎಂಬ ಭೇದ ಇರಲಿಲ್ಲ. ಅವರ ಅಂತಿಮ ದಿನಗಳ ಸಂದರ್ಭ ಪಕ್ಷ- ಜಾತಿ, ಮತಗಳ ಭೇದವಿಲ್ಲದೆ ಹಲವಾರು ರಾಜಕೀಯ ನಾಯಕರು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದರು. ಪೇಜಾವರ ಶ್ರೀಗಳು ಎಲ್ಲ ರಾಜಕೀಯ ವ್ಯಕ್ತಿಗಳೊಂದಿಗೆ ಪರಿಚಯರಾಗಿದ್ದರಿಂದಲೋ ಏನೋ, ಅವರ ಮಾತಿಗೆ ರಾಜಕೀಯ ವಲಯದಲ್ಲಿ ವಿಶೇಷ ತೂಕ ಇರುತ್ತಿತ್ತು. ಕೆಲವು ನಾಯಕರಂತೂ ಪೇಜಾವರರ ಮಾತುಗಳನ್ನು ಮೀರಿ ನಡೆಯೆವು ಎಂಬಷ್ಟರ ಮಟ್ಟಿಗೆ ಗೌರವ ಭಾವ ಹೊಂದಿದ್ದರು. ಇದೇ ಕಾರಣಕ್ಕೆ ಪ್ರಮುಖ ರಾಜಕೀಯ ವಿದ್ಯಮಾನಗಳಾದಾಗ ಪತ್ರಕರ್ತರು ಪೇಜಾವರ ಶ್ರೀಗಳ ಪ್ರತಿಕ್ರಿಯೆ ಕೇಳುತ್ತಿದ್ದರು. ಅವರ ಅಭಿಪ್ರಾಯವೂ ಒಂದು ಚರ್ಚೆಗೆ ನಾಂದಿಯಾಗುತ್ತಿತ್ತು.

ರಾಮಜನ್ಮಭೂಮಿ ಆಂದೋಲನದ ಬಳಿಕವಂತೂ ಪೇಜಾವರ ಶ್ರೀಗಳ ಹೆಸರು ರಾಜಕೀಯ ವಲಯದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿತ್ತು. ಅವರು ಆಂದೋಲನದ ಮುಂಚೂಣಿಯಲ್ಲಿದ್ದದ್ದು ಮತ್ತು ಅವರ ನಿರ್ಧಾರಗಳಿಗೆ ಸಿಕ್ಕ ಮನ್ನಣೆಯಿಂದಾಗಿ ರಾಜಕೀಯ ವಲಯ ಅವರ ಮಾತುಗಳನ್ನು ಕೇಳುತ್ತಿತ್ತು. ಧರ್ಮವು ಪ್ರಬಲವಾಗಿದ್ದು ರಾಜಕೀಯಕ್ಕೆ ನಿರ್ದೇಶನ ನೀಡುವಂತಿರಬೇಕುಎಂಬ ರೀತಿಯ ಆಶಯವನ್ನು ಹೊಂದಿದ್ದರು. ಇದಕ್ಕೆ ರಾಜಕಾರಣಿಗಳು ಸಲಹೆ ಕೇಳಿದರೆ ತುಂಬು ಮನಸ್ಸಿನಿಂದ ಮಾರ್ಗದರ್ಶನ ಮಾಡುತ್ತಿದ್ದುದು ನಿದರ್ಶನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next