Advertisement
ಪದ್ಮನಾಭನಗರದಲ್ಲಿ ಹ್ಯಾಟ್ರಿಕ್ ಗೆಲುವಿಗಾಗಿ ಆರ್.ಅಶೋಕ್ ಬಿಜೆಪಿ ಮುಖಂಡರ ದಂಡಿನೊಂದಿಗೆ ಪ್ರಚಾರ ನಡೆಸಿದ್ದಾರೆ. ಜೆಡಿಎಸ್‌ನ ವಿ.ಕೆ.ಗೋಪಾಲ್ ಸಹ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕೊನೆಯ ಘಳಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದ ಹಿರಿಯ ಮುಖಂಡ ಎಂ.ಶ್ರೀನಿವಾಸ್ ಈಗಷ್ಟೇ ಮತದಾರರನ್ನು ಸೆಳೆಯಲು ಬೆವರು ಹರಿಸಲಾರಂಭಿಸಿದ್ದಾರೆ.ಮೂವರು ಅಭ್ಯರ್ಥಿಗಳು ಬಿರುಸಿನ ಪ್ರಚಾರದಲ್ಲಿ ತೊಡಗಿದ್ದು, ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಕಾಣುತ್ತಿದೆ.
Related Articles
Advertisement
ಬ್ರಾಹ್ಮಣ ಸಮುದಾಯದ ಜತೆಗೆ ಒಕ್ಕಲಿಗ ಮತದಾರರನ್ನು ನೆಚ್ಚಿಕೊಂಡಿರುವ ಅಶೋಕ್, ನಾಯ್ಡು ಸಮುದಾಯ ಸೇರಿದಂತೆ ಇತರೆ ಸಮಾಜದವರ ಬೆಂಬಲ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಚಿಕ್ಕಪೇಟೆ ಕ್ಷೇತ್ರದ ಟಿಕೆಟ್ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದ ಎನ್.ಆರ್.ರಮೇಶ್ ಇಲ್ಲಿ ಪಕ್ಷದ ಪರ ಪ್ರಚಾರದಲ್ಲಿ ತೊಡಗಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್‌ನ ಒಬ್ಬ ಕಾರ್ಪೊರೇಟರ್ ಸಹ ಇಲ್ಲದ ಕಾರಣ ಆರು ತಿಂಗಳಿನಿಂದಲೇ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ಗೋಪಾಲ್ ತೊಡಗಿಸಿಕೊಂಡಿದ್ದಾರೆ. ಮೊದಲಿಗೆ ತಮ್ಮದೇ ನಾಯ್ಡು ಸಮುದಾಯದವರನ್ನು ಒಲಿಸಿಕೊಳ್ಳುವ ಜತೆಗೆ ಒಕ್ಕಲಿಗರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ವರ್ಚಸ್ಸನ್ನು ಬಳಸಿಕೊಂಡು ಹಲವು ಸುತ್ತಿನ ಪ್ರಚಾರ ಮುಗಿಸಿರುವ ಗೋಪಾಲ್ ಇನ್ನಷ್ಟು ಬಿರುಸಿನ ಪ್ರಚಾರಕ್ಕೆ ಮುಂದಾಗಿದ್ದಾರೆ.
ಡಾ.ಬಿ.ಗುರಪ್ಪನಾಯ್ಡು ಅವರು ಪಕ್ಷದ “ಬಿ’ ಫಾರಂ ನೀಡಿ ನಾಮಪತ್ರ ಸಲ್ಲಿಸಿದ ಬಳಿಕ ಕಾಂಗ್ರೆಸ್ ಎಂ.ಶ್ರೀನಿವಾಸ್ ಅವರಿಗೆ “ಸಿ’ ಫಾರಂ ನೀಡಿ ಕಣಕ್ಕಿಳಿಸಿರುವುದು ಗೊಂದಲಕ್ಕೆ ಕಾರಣವಾಗಿತ್ತು. ಇದು ನಾಯ್ಡು ಸಮುದಾಯದವರ ಅಸಮಾಧಾನಕ್ಕೂ ಕಾರಣವಾಗಿದೆ. ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲೆಗಳನ್ನು ಗುರುತಿಸಿ ಬಲಪಡಿಸುವ ಕಾರ್ಯಕ್ಕೆ ಆದ್ಯತೆ ನೀಡಿದ್ದಾರೆ.
ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಕಳೆದ ಬಾರಿ ಸೋತಿದ್ದ ಚೇತನ್‌ಗೌಡ ಜತೆಗೆ ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ ಕಾಂಗ್ರೆಸ್ ಮುಖಂಡರನ್ನು ಸಂಘಟಿಸಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಕಾಂಗ್ರೆಸ್ ಸಾಂಪ್ರದಾಯಿಕ ಮತಗಳ ಜತೆಗೆ ಇತರೆ ವರ್ಗದವರನ್ನು ಸೆಳೆಯುವ ಕಾರ್ಯವೂ ಬಿರುಸಾಗಿ ನಡೆದಿದೆ.
* ಎಂ.ಕೀರ್ತಿಪ್ರಸಾದ್