ಭಟ್ರಳ್ಳಿ ಅನ್ನುವ ಪುಟ್ಟ ಹಳ್ಳಿಯಲ್ಲಿ ಒಂದು ಪುಟ್ಟ ಶಾಲೆ ಇತ್ತು. ಅನಾಥ ಮಕ್ಕಳ ಶಾಲೆ ಅದು. ಪ್ರಕಾಶಪ್ಪ ಅದರ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ತೋಟದ ಕೆಲಸ, ಅಡುಗೆ ಕೆಲಸ ಎಲ್ಲಾನೂ ಹೇಳ್ಕೊಡ್ತಾ ಇದ್ದರು.
ಅಡುಗೆ ಮಾಡುವ ನಾರಣಪ್ಪ ಮತ್ತು ಲಕ್ಷ್ಮಮ್ಮ ರುಚಿಯಾಗಿ ಅಡುಗೆ ಮಾಡಿ ಮಕ್ಕಳಿಗೆಲ್ಲ ಪ್ರೀತಿಯಿಂದ ಬಡಿಸುತ್ತಿದ್ದರು.
ಮಕ್ಕಳಿಗೆ ತಾವು ಅನಾಥರೆಂಬ ಪ್ರಜ್ಞೆ ಕಾಡದಂತೆ ಮಕ್ಕಳನ್ನು ಬೆಳೆಸುತ್ತಿದ್ದರು. ನಾರಣಪ್ಪ ಮತ್ತು ಲಕ್ಷ್ಮಮ್ಮರಿಗೆ ಮಕ್ಕಳಿಲ್ಲದ ಕಾರಣ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಅವರ ಊಟ ವಸತಿಯನ್ನು ಸಹ ಪ್ರಕಾಶಪ್ಪನವರೆ ನೋಡಿಕೊಳ್ಳುತ್ತಿದ್ದರು. ಮೊದಮೊದಲು ದೇಣಿಗೆ ಎತ್ತಿ, ಕೈಯಿಂದ ಕಸೂತಿ ಕೆಲಸ ಮಾಡಿಸಿ ಅದರ ಮಾರಾಟದಿಂದ ಮಕ್ಕಳ ಊಟೋಪಚಾರ, ಬಟ್ಟೆ ಎಲ್ಲವನ್ನೂ ನಿಭಾಯಿಸುತ್ತಿದ್ದರು.
ಒಮ್ಮೆ ಒಬ್ಬ ಆಗಂತುಕ ಬಂದು ಪ್ರಕಾಶಪ್ಪನವರ ಹತ್ತಿರ ಸ್ವಾಮಿ ಇಲ್ಲಿ ಹತ್ತಿರದಲ್ಲೆಲ್ಲಾದರೂ ಭೋಜನ ಶಾಲೆ ಇದೆಯೇ ಎಂದು ಕೇಳಿದ. ನಂತರ ಪ್ರಕಾಶಪ್ಪ ಆತನನ್ನು ಕೈಕಾಲು ತೊಳೆದುಕೊಳ್ಳಲು ಹೇಳಿ ನಂತರ ಲಕ್ಷ್ಮಮ್ಮನನ್ನು ಕರೆದು ಊಟ ಕೊಡಿಸಿದರು. ಆಮೇಲೆ ಆಗಂತುಕ ತನ್ನ ಪರಿಚಯ ಹೇಳಿಕೊಂಡ. ಆಗಂತುಕನ ಹೆಸರು ಗುರಪ್ಪ. ಅವನು ಅಲೆಮಾರಿಯಾಗಿದ್ದ. ಕಾಡುಗಳನ್ನು ಸುತ್ತುವುದು, ಬೆಟ್ಟಗುಡ್ಡ ಹತ್ತುವುದು, ಹಳ್ಳಕೊಳ್ಳಗಳಲ್ಲಿಳಿದು ಅದರ ಅಂದಚೆಂದ ನೋಡುವುದು, ಕಷ್ಟದಲ್ಲಿರುವವರಿಗೆ ನೆರವು ನೀಡುವುದು, ಹಳ್ಳಿಗಳಲ್ಲಿ, ಕಾಡುಗಳಲ್ಲಿ ಸಿಕ್ಕಿದ ಕೆಲಸ ಮಾಡಿ ಅವರು ಕೊಟ್ಟಷ್ಟನ್ನು ಪಡೆದು ಹೊಟ್ಟೆ ಹೊರೆದುಕೊಳ್ಳುತ್ತಿದ್ದ.
ಗುರಪ್ಪನ ಪರಿಚಯದಿಂದ ಪ್ರಕಾಶಪ್ಪನಿಗೆ ತುಂಬಾ ಸಂತೋಷವಾಯಿತು. ಅವರು “ನಮ್ಮ ಶಾಲೆಯ ಮಕ್ಕಳಿಗೂ ಸಹ ಪ್ರಕೃತಿಯ ಸೌಂದರ್ಯದ ಅರಿವಾಗಬೇಕು. ಆದರೆ ಇದುವರೆಗೂ ಅಂತಹ ಯಾವುದೇ ಪ್ರಯತ್ನವನ್ನು ನಾನು ಮಾಡಿಲ್ಲ. ನೀನು ಒಪ್ಪಿ ದೊಡ್ಡ ಮನಸ್ಸು ಮಾಡಿದರೆ ನಮ್ಮ ಮಕ್ಕಳಿಗೆ ಅಂತಹ ಸೌಭಾಗ್ಯ ದೊರೆಯುತ್ತದೆ.’ ಎಂದು ಕೇಳಿಕೊಂಡರು. ಗುರಪ್ಪ “ಹಸಿದವನಿಗೆ ಊಟ ಕೊಟ್ಟಿರಿ, ಇರುವುದಕ್ಕೆ ಜಾಗ ಕೊಡುತ್ತೇನೆ ಎನ್ನುತ್ತಿದ್ದೀರ. ಇದಕ್ಕಿಂತ ನನಗಿನ್ನೇನು ಬೇಕು’ ಎಂದು ಸಂತೋಷದಿಂದ ಒಪ್ಪಿದನು. ಪ್ರಕಾಶಪ್ಪನಿಗೆ ಸ್ವರ್ಗವೇ ಕೈಗೆಟುಕಿದಷ್ಟು ಸಂತೋಷವಾಯಿತು. ಅಂದಿನಿಂದ ಗುರಪ್ಪ ಮಕ್ಕಳನ್ನು ಬೆಟ್ಟ ಗುಡ್ಡಗಳಿಗೆ ಕರೆದೊಯ್ದು, ನಿಸರ್ಗವನ್ನು ಪರಿಚಯಿಸಿ, ಹಳ್ಳ ತೊರೆಗಳಲ್ಲೆಲ್ಲಾ ನಡೆಸಿ ಮಕ್ಕಳಿಗೆ ಅಚ್ಚುಮೆಚ್ಚಿನ ಗುರಪ್ಪ ಮಾವನಾದ.
ತುಳಸಿ ವಿಜಯಕುಮಾರಿ