ಬೆಂಗಳೂರು: ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಬಂಧಿಸಿ ಶುಕ್ರವಾರ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದ್ದು, ಷರತ್ತು ಸಹಿತವೋ ರಹಿತವೋ ಎಂಬ ಕುತೂಹಲ ರಾಜ್ಯದ ಜನರಲ್ಲಿ ಸೃಷ್ಟಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಇದುವರೆಗೆ ನಡೆದ ಎಲ್ಲ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಗ್ಯಾರಂಟಿ ಜಾರಿಗೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಮಂಗಳ ವಾರ ತಮ್ಮೆಲ್ಲ ಸಂಪುಟ ಸಹೋದ್ಯೋಗಿಗಳ ಜತೆಗೆ ಚರ್ಚೆ ನಡೆಸಿದ್ದರು. ಹಣಕಾಸು ಹಾಗೂ ಪ್ರಮುಖ ಇಲಾಖೆ ಅಧಿಕಾರಿಗಳು ಸಭೆ ಯ ಲ್ಲಿ ಭಾಗಿಯಾಗಿದ್ದರು.
ಸಂಪನ್ಮೂಲ ಕ್ರೋಡೀಕರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪೂರ್ಣ ನೀಲನಕ್ಷೆ ನೀಡುವಂತೆ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಗುರುವಾರ ಸಿದ್ದರಾಮಯ್ಯ ಅವರನ್ನು ಮೂರು ಬಾರಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಎಷ್ಟು ಜಾರಿ?
ಐದು ಗ್ಯಾರಂಟಿಗಳನ್ನು ಸರಕಾರ ಏಕಕಾಲಕ್ಕೆ ಜಾರಿ ಮಾಡುವ ಸಾಧ್ಯತೆ ಕಡಿಮೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಐದರ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪಾಸ್, ಅನ್ನಭಾಗ್ಯ ಹಾಗೂ ನಿರುದ್ಯೋಗಿ ಪದವೀ ಧರ ರಿಗೆ ಸ್ಕಾಲರ್‌ಶಿಪ್ ಯೋಜನೆ ಯುವನಿಧಿ ಮಾತ್ರ ಜಾರಿ ಯಾಗಬಹುದು. 200 ಯುನಿಟ್ ಉಚಿತ ವಿದ್ಯುತ್ ಹಾಗೂ ಮನೆಯೊಡತಿಗೆ ಮಾಸಿಕ 2,000 ರೂ. ನೀಡುವ ಯೋಜನೆಗಳ ಜಾರಿಗಾಗಿ ನಿಯಮಾವಳಿ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಬಹುದು ಎಂದು ಹೇಳ ಲಾಗುತ್ತಿದೆ. ಆದರೆ ಇದ್ಯಾವುದರ ಬಗ್ಗೆಯೂ ಸ್ಪಷ್ಟ ಮಾಹಿತಿ ನೀಡಲು ಸರಕಾರದ ಮೂಲಗಳು ನಿರಾಕರಿಸಿವೆ.
Related Articles
200 ಯುನಿಟ್ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಪಟ್ಟಂತೆ ಇಂಧನ ಸಚಿವ ಕೆ.ಜೆ. ಜಾರ್ಜ್ ಬೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳ ಜತೆಗೆ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಮುಖ್ಯ ಮಂತ್ರಿ ಸಿದ್ದ ರಾ ಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಜಾರಿ ಅನಿವಾರ್ಯ
ಚುನಾವಣ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಘೋಷಿಸಿದ್ದ 5 ಗ್ಯಾರಂಟಿಗಳ ಜಾರಿಗೆ ಕಾಂಗ್ರೆಸ್ ಸರಕಾರ ರಚನೆ ಯಾದ ದಿನದಿಂದಲೂ ಸಾಕಷ್ಟು ಕಸರತ್ತುಗಳು ನಡೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹಲವು ಸುತ್ತಿನ ಸಭೆ ನಡೆಸಿದ ಬಳಿಕ ಗ್ಯಾರಂಟಿಗಳ ಜಾರಿ ಕುರಿತು ಒಂದು ಸ್ಪಷ್ಟ ಸ್ವರೂಪ ದೊರೆತಿದೆ. ಈ ಮಧ್ಯೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಷರತ್ತುಗಳಿಲ್ಲದೆ ಗ್ಯಾರಂಟಿಗಳನ್ನು ಜಾರಿಗೆ ತರಬೇಕೆಂದು ಸರಕಾರಕ್ಕೆ ತಾಕೀತು ಮಾಡಿವೆ. ಜತೆಗೆ ಸಾರ್ವಜನಿಕರಿಂದಲೂ ದಿನೇ ದಿನೆ ಒತ್ತಡ ಹೆಚ್ಚುತ್ತಿದೆ.