ಬೆಂಗಳೂರು: ಕುಖ್ಯಾತ ಸುಲಿಗೆಕೋರ, ಪೋಕ್ಸೋ ಪ್ರಕರಣದ ಆರೋಪಿ ದರ್ಶನ್ (21) ಎಂಬಾತನ ಕಾಲಿಗೆ ಗುಂಡು ಹೊಡೆದು ಆರ್‌ಎಂಸಿ ಯಾರ್ಡ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿಸಲು ತೆರಳಿದ ವೇಳೆ ಆರೋಪಿ ದರ್ಶನ್ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿ ಕೊಲೆಗೆ ಯತ್ನಿಸಿದ್ದಾನೆ. ಹೀಗಾಗಿ, ಪ್ರಾಣ ರಕ್ಷಣೆ ಸಲುವಾಗಿ ಆತನ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ದರ್ಶನ್ ಬಹಳ ದಿನಗಳಿಂದ ತಲೆಮರೆಸಿಕೊಂಡಿದ್ದ. ಹಲವರಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ್ದ ಸಂಬಂಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ 11 ಕೇಸ್‌ಗಳಲ್ಲಿ ಆರೋಪಿಯಾಗಿದ್ದಾನೆ. ಆತನ ಬಂಧನಕ್ಕೆ ಎಂಟು ನ್ಯಾಯಾಲಯದ ಬಂಧನ ವಾರೆಂಟ್‌ಗಳು ಜಾರಿಯಲ್ಲಿದ್ದವು. ದರ್ಶನ್ ಇನ್ನೂ ಏಳೆಂಟು ಸುಲಿಗೆ ಕೇಸ್‌ಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದೆ. ಆತನ ಕೃತ್ಯಗಳಿಗೆ ಕುಟುಂಬಸ್ಥರು ಕೂಡ ಕುಮ್ಮಕ್ಕು ನೀಡುತ್ತಿದ್ದರು ಎನ್ನಲಾಗಿದೆ. ಅವರ ಪತ್ತೆಗೂ ಕ್ರಮ ವಹಿಸಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪೊಲೀಸರ ಮೇಲೆ ಹಲ್ಲೆಗೆ ಯತ್ನ!: ನ.24ರ ರಾತ್ರಿ 11-45ರ ಸುಮಾರಿಗೆ ಆರ್‌ಎಂಸಿ ಯಾರ್ಡ್‌ನ ಪ್ರಭಾಕರ್ ಕನ್ವೆನ್ಷನ್ ಸೆಂಟರ್ ಹಿಂಭಾಗದ ರಸ್ತೆಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಪ್ರದೀಪ್ ಎಂಬಾತನನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಬೈಕ್, ಮೊಬೈಲ್ ಹಣ ಕಿತ್ತುಕೊಂಡು ಹೋದ ಪ್ರಕರಣದ ತನಿಖೆಯಲ್ಲಿ ದರ್ಶನ್ ಕೃತ್ಯ ಎಸಗಿರುವುದು ಕಂಡು ಬಂದಿತ್ತು. ಹೀಗಾಗಿ ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಸೋಮವಾರ ರಾತ್ರಿ ಚಿಕ್ಕಬಾಣವಾರ ಕೆರೆಯ ರಸ್ತೆ ಮೇಲೆ ಕೂಡ ವ್ಯಕ್ತಿಯೊಬ್ಬರಿಂದ ಮೊಬೈಲ್ ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿರುವ ಮಾಹಿತಿ ಆಧರಿಸಿ ಪೊಲೀಸರು ಗಸ್ತು ಕಾರ್ಯಾಚರಣೆ ನಡೆಸುತ್ತಿದ್ದರು.
ಈ ವೇಳೆ ಅದೇ ಮಾರ್ಗವಾಗಿ ಬೈಕ್‌ನಲ್ಲಿ ಬಂದ ದರ್ಶನ್‌ನ್ನು ಅಡ್ಡಗಟ್ಟಿ ಪೊಲೀಸ್ ಪೇದೆ ಮುನಿಕೃಷ್ಣ ಅವರು ಹಿಡಿಯಲು ಹೋದಾಗ ಅವರ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಮಹೇಂದ್ರಕುಮಾರ್ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಯನ್ನು ಶರಣಾಗುವಂತೆ ಹೇಳಿದ್ದರು. ಆದರೂ, ಆರೋಪಿ ಹಲ್ಲೆ ಮುಂದುವರಿಸಿದ್ದಾನೆ. ಹೀಗಾಗಿ ಪ್ರಾಣರಕ್ಷಣೆ ಸಲುವಾಗಿ ಇನ್ಸ್‌ಪೆಕ್ಟರ್, ದರ್ಶನ್ ಬಲಕಾಲಿಗೆ ಗುಂಡು ಹೊಡೆದಿದ್ದು, ಕುಸಿದು ಬಿದ್ದ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಚಾಕುವಿನಿಂದ ಚುಚ್ಚಿ ದೋಚುತ್ತಿದ್ದ: ಆರೋಪಿ ದರ್ಶನ್ ಬೈಕ್‌ನಲ್ಲಿ ಬರುತ್ತಿದ್ದ ಒಬ್ಬಂಟಿಗರನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿಯುತ್ತಿದ್ದ, ಬಳಿಕ ಮೊಬೈಲ್, ಹಣ ದೋಚುತ್ತಿದ್ದ. ಇತ್ತೀಚೆಗೆ ನಡೆದ ಪ್ರಕರಣದಲ್ಲಿ ಯುವಕರೊಬ್ಬರ ಹಿಂಭಾಗಕ್ಕೆ ಚುಚ್ಚಿದ್ದ. ಅವರು ಆರ್‌ಎಂಸಿ ಯಾರ್ಡ್ ಠಾಣೆಗೆ ಆಗಮಿಸಿ ಪ್ರಕರಣ ದಾಖಲಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.