Advertisement

ಗುಂಜಾ ನರಸಿಂಹಸ್ವಾಮಿ ರಥೋತ್ಸವ

09:37 PM Mar 23, 2019 | |

ತಿ.ನರಸೀಪುರ: ಧೂಪದ ಘಮಲು, ಹಣ್ಣು ಜವನಗಳ ಸುರಿಮಳೆ, ನಗಾರಿಗಳ ಭೋರ್ಗರೆತ ಶಬ್ದಗಳ ನಡುವೆ ಪುರಾತನ ಪ್ರಸಿದ್ಧ ಗುಂಜಾ ನರಸಿಂಹಸ್ವಾಮಿಯ ಬ್ರಹ್ಮ ರಥೋತ್ಸವವು ಪಟ್ಟಣದಲ್ಲಿ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

Advertisement

ಹರ್ಷೋದ್ಘಾರ: ಅಲಂಕೃತ ರಥದಲ್ಲಿ ವೀರಾಜಮಾನರಾಗಿದ್ದ ಮಹಾಲಕ್ಷ್ಮೀ ಸಮೇತ ಗುಂಜಾ ನರಸಿಂಹಸ್ವಾಮಿ ಉತ್ಸವ ಮೂರ್ತಿಗಳನ್ನು ಕಂಡು ಪುಳಕಿತರಾದ ಭಕ್ತರ ಹರ್ಷೋದ್ಘಾರಗಳ ನಡುವೆ ವಾಲಿ ವಾಲಾಡಿ ಸಾಗಿ ಬಂದ ರಥೋತ್ಸವ ವೈಭವವನ್ನು ನೆರೆದಿದ್ದ ಜನರು ಕಣ್ತುಂಬಿಕೊಂಡು ಹಣ್ಣು ಜವನವನ್ನು ಎಸೆದು ಧನ್ಯತೆ ಮೆರೆದರು.

ಯುವಕರ ಸಂಭ್ರಮ: ರಥೋತ್ಸವದಿಂದಾಗಿ ಪಟ್ಟಣ ಸೇರಿದಂತೆ ಗುಂಜಾ ನರಸಿಂಹಸ್ವಾಮಿ ದೇವಾಲಯ ಆವರಣ ಜನಸಾಗರದಿಂದ ಕಳೆಗಟ್ಟಿತ್ತು. ಕುಣಿದು ಕುಪ್ಪಳಿಸಿದ ಯುವಕರು ಕೂಡ ಜಾತ್ರೆಗೆ ರಂಗನ್ನು ನೀಡಿದರು. ವಿಶ್ವಕರ್ಮ ಬೀದಿ ಮಾರ್ಗವಾಗಿ ಸಾಗಿದ ರಥ ಯಾವುದೇ ಅಡಚಣೆಯಿಲ್ಲದೆ ಚಿಕ್ಕಅಂಗಡಿ ಬೀದಿಯಲ್ಲಿನ ಸ್ವಸ್ಥಾನವನ್ನು ತಲುಪಿತು.

ಮಂಟಪೋತ್ಸವ: ಪಟ್ಟಣದ ರಥದ ಬೀದಿಗಳಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆಯ ಮಂಟಪೋತ್ಸವ ನಡೆಯಿತು. ಮಂಟಪೋತ್ಸವ ತರುವಾಯ ಮಧ್ಯಾಹ್ನ 12.30 ರಿಂದ ಹಸ್ತ ನಕ್ಷತ್ರದಲ್ಲಿ ಸಲ್ಲುವ ಶುಭ ಮೀನ ಕೃಷ್ಣ ದ್ವಿತೀಯ ಲಗ್ನದಲ್ಲಿ ಶೃಂಗಾರಗೊಂಡಿದ್ದ ರಥದ ಬಳಿಗೆ ಉತ್ಸವ ಮೂರ್ತಿಗಳನ್ನು ಹೊತ್ತು ತಂದು ವೇದ ಮಂತ್ರಗಳನ್ನು ಪಠಿಸಿ ಸುತ್ತಲೂ ಮೂರು ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಪ್ರದಕ್ಷಿಣೆ: ವ್ಯಾಸರಾಜಪುರ ಯಜಮಾನರು ಆಲಗೂಡಿಗೆ ತೆರಳಿ ಅಲ್ಲಿನ ಯಜಮಾನರನ್ನು ಕರೆತಂದು ಪಟ್ಟಣದ ಯಜಮಾನರ ಜೊತೆಗೂಡಿ ಮಹಾಮಂಗಳಾರತಿ ನೆರವೇರಿಸಿ ಪ್ರದಕ್ಷಿಣೆ ಹಾಕಿದರು. ಉತ್ಸವ ಮೂರ್ತಿಗಳಿಗೆ ಮಹಾಮಂಗಳಾರತಿ ಮಾಡಿದ ನಂತರ ಬ್ರಹ್ಮ ರಥೋತ್ಸವ ವಿಧ್ಯಕ್ತವಾಗಿ ಆರಂಭಗೊಂಡಿತು. 

Advertisement

ಜಾತ್ರೋತ್ಸವ ಪ್ರಯುಕ್ತ ಗುಂಜಾ ನರಸಿಂಹಸ್ವಾಮಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯ ಹಾಗೂ ಅಭಿಷೇಕ ಉತ್ಸವಗಳು ಸಾಂಗವಾಗಿ ನೆರವೇರಿದವು. ಬಿಳಿಗಿರಿ ರಂಗಸ್ವಾಮಿ ಬೆಟ್ಟದ ಆಗಮಿಕ ನಾಗರಾಜ ಭಟ್ಟರು, ದೇವಾಲಯದ ಪ್ರಧಾನ ಅರ್ಚಕ ಸಂಪತ್‌ ಕುಮಾರ್‌ ಭಟ್ಟರು ಹಾಗೂ ಅರ್ಚಕ ವೆಂಕಟೇಶ್‌ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ನಡೆದವು.

ಪ್ರಸಾದ: ಹರಕೆ ಹೊತ್ತಿದ್ದ ಭಕ್ತರು ಪಾನಕ, ಮಜ್ಜಿಗೆ ಹಾಗೂ ಉಪಾಹಾರ ವಿತರಿಸಿದರು. ಗುಂಜಾ ನರಸಿಂಹಸ್ವಾಮಿ ರಥೋತ್ಸವ ಹಬ್ಬದ ಸಂಭ್ರಮವನ್ನು ತಂದಿತ್ತು. ಈ ಸಂದರ್ಭದಲ್ಲಿ ತಹಶೀಲ್ದಾರ್‌ ಡಿ.ನಾಗೇಶ, ಕಂತೆಕಟ್ಟೆ ಪಾರುಪತ್ತೇಗಾರ .ನರಸಿಂಹನ್‌, ಸಿ.ರಮೇಶ್‌, ಯಜಮಾನರಾದ ಬಸವಣ್ಣ, ಎಂ.ಮಹದೇವಪ್ಪ, ಭೈರನಾಯಕ, ಎನ್‌.ಮಹದೇವಸ್ವಾಮಿ, ಪುಳ್ಳಾರಿ ಆರ್‌.ಮಹದೇವ, ರಾಜಣ್ಣ, ಪುರಸಭಾ ಸದಸ್ಯರಾದ ಎಸ್‌.ಕೆ.ಕಿರಣ, ಟಿ.ಎಂ.ನಂಜುಂಡಸ್ವಾಮಿ, ಬಾದಾಮಿ ಮಂಜು, ಪಿ.ಪುಟ್ಟರಾಜುಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next