Advertisement

ದರೋಡೆ, ಸುಲಿಗೆ ಆರೋಪಿಗೆ ಗುಂಡೇಟು

01:06 AM Jun 25, 2019 | Team Udayavani |

ಬೆಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೆಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಕೊಲೆ ಯತ್ನ , ದರೋಡೆ ಪ್ರಕರಣಗಳ ಅರೋಪಿಗೆ ಬ್ಯಾಟರಾಯನಪುರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

Advertisement

ಮೂಡಲಪಾಳ್ಯ ನಿವಾಸಿ ಕೆ.ರಾಹುಲ್‌ ಅಲಿಯಾಸ್‌ ಗೋವಿಂದು(22) ಎಂಬಾತನಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಆತನ ದಾಳಿಯಿಂದ ಹಲ್ಲೆಗೊಳಗಾಗಿದ್ದ ಹೆಡ್‌ಕಾನ್‌ಸ್ಟೆಬಲ್‌ ಪ್ರಕಾಶ್‌ ಅವರ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೇಳು ವರ್ಷಗಳಿಂದ ಕೊಲೆ ಯತ್ನ, ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ, ಇತ್ತೀಚೆಗೆ ಬ್ಯಾಟರಾಯಪುರ, ಚಾಮರಾಜಪೇಟೆ, ಜ್ಞಾನಭಾರತಿ ವ್ಯಾಪ್ತಿಯಲ್ಲಿ ತನ್ನ ಸಹಚರರ ಜತೆ ಸೇರಿಕೊಂಡು ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಡ್ಡಿ ಸುಲಿಗೆ ಮಾಡುತ್ತಿದ್ದ.

ಆತನ ವಿರುದ್ಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೆ, ಮೂರು ದಿನಗಳ ಹಿಂದೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ರಾಹುಲ್‌,ತನ್ನ ಸಹಚರರ ಜತೆ ತಡರಾತ್ರಿವರೆಗೆ ಕಂಠಪೂರ್ತಿ ಮದ್ಯ ಸೇವಿಸಿ ಚಾಮರಾಜಪೇಟೆ ಮತ್ತು ಬ್ಯಾಟರಾಯಪುರದಲ್ಲಿ ಸುತ್ತಾಡುತ್ತ ಸಿಕ್ಕಸಿಕ್ಕವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸುಲಿಗೆ ಮಾಡಿದ್ದಾನೆ.

ನಾಲ್ಕು ಬೇಕರಿಗಳನ್ನು ಮಾರಕಾಸ್ತ್ರಗಳಿಂದ ಧ್ವಂಸ ಮಾಡಿ, ಭಯದ ವಾತಾವರಣ ಸೃಷ್ಟಿಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಲಯ ಹಿರಿಯ ಪೊಲೀಸ್‌ ಅಧಿಕಾರಿಗಳು ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದರು.

Advertisement

ಆರೋಪಿ ಎಡಗಾಲಿಗೆ ಗುಂಡೇಟು: ಎರಡು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ರಾಹುಲ್‌ ಸೋಮವಾರ ಮುಂಜಾನೆ ಆರು ಗಂಟೆ ಸುಮಾರಿಗೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ಚಿಕ್ಕಬಸ್ತಿ ಸಮೀಪದಲ್ಲಿ ಅಡಗಿಕೊಂಡಿದ್ದ.

ಈ ಮಾಹಿತಿ ಪಡೆದ ಬ್ಯಾಟರಾಯನಪುರ ಪೊಲೀಸರು, ಕೂಡಲೇ ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಲು ಮುಂದಾಗಿದ್ದಾರೆ. ಪೊಲೀಸರನ್ನು ಕಂಡ ರಾಹುಲ್‌ ಸ್ಥಳದಿಂದ ಪರಾರಿಯಾಗಲು ಯತ್ನಿಸಿ, ಹೆಡ್‌ಕಾನ್‌ಸ್ಟೆಬಲ್‌ ಪ್ರಕಾಶ್‌ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಪ್ರಕಾಶ್‌ ಕೈಗೆ ಗಾಯವಾಗಿದೆ.

ಈ ವೇಳೆ ಬ್ಯಾಟರಾಯನಪುರ ಠಾಣೆ ಇನ್‌ಸ್ಪೆಕ್ಟರ್‌ ಮಾರಕಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸೂಚಿಸಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ ಆರೋಪಿ ಮತ್ತೂಮ್ಮೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ತಮ್ಮ ರಿವಾಲ್ವರ್‌ನಿಂದ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ನಂತರ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next