Advertisement

ಗುಂಡ್ಲುಪೇಟೆಯಲ್ಲಿ “ಅನುಕಂಪ’ದ್ದೇ ಲೆಕ್ಕಾಚಾರ

03:45 AM Apr 06, 2017 | Team Udayavani |

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವು ದಿನೇದಿನೆ ರಂಗೇರುತ್ತಿದೆ. ರಾಜಕೀಯ ಧುರೀಣರು ಆರೋಪ-ಪ್ರತ್ಯಾರೋಪ ಮಾಡುತ್ತ ಚುನಾವಣಾ ಅಖಾಡವನ್ನು ಮತ್ತಷ್ಟು ಬಿಸಿಗೊಳಿಸಿದ್ದಾರೆ.  ಕಾಂಗ್ರೆಸ್‌ ಅಭ್ಯರ್ಥಿ  ಎಂ.ಸಿ. ಮೋಹನಕುಮಾರಿ (ಡಾ.ಗೀತಾ ಮಹದೇವಪ್ರಸಾದ್‌) ಹಾಗೂ ಬಿಜೆಪಿ ಅಭ್ಯರ್ಥಿ ನಿರಂಜನಕುಮಾರ್‌  ನಡುವೆ ಬಿರುಸಿನ ಸ್ಪರ್ಧೆಯಿದ್ದು, ಇಬ್ಬರೂ ಅನುಕಂಪದ ಲೆಕ್ಕಾಚಾರದಲ್ಲಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳೊಂದಿಗೆ “ಉದಯವಾಣಿ’ ನಡೆಸಿದ ಸಂದರ್ಶನ ಹಾಗೂ ಕ್ಷೇತ್ರವಾರು ವಿವರ ಇಲ್ಲಿದೆ…

Advertisement

ಜನರ ಒತ್ತಾಸೆಯಿಂದ ಸ್ಪರ್ಧೆ : ಗೀತಾ
ಪ್ರಶ್ನೆ: ಮಹದೇವಪ್ರಸಾದ್‌ ಅಗಲಿಕೆ ನಂತರ ಕಾಂಗ್ರೆಸ್‌ನಲ್ಲಿ ಬೇರೆ ಅಭ್ಯರ್ಥಿಗೆ ಅವಕಾಶ ನೀಡಬಹುದಿತ್ತು. ನೀವೇ ಏಕೆ ಸ್ಪರ್ಧೆ ಮಾಡಿದಿರಿ?
ಗೀತಾ: ಮಹದೇವ ಪ್ರಸಾದ್‌ ಅಕಾಲಿಕ ನಿಧನ ದೊಡ್ಡ ಶಾಕ್‌. ಅವರ 11ನೇ ದಿನದ ಕಾರ್ಯದ ವೇಳೆ ಅಭಿಮಾನಿಗಳು ಕ್ಷೇತ್ರವನ್ನು ಅತಂತ್ರ ಮಾಡಬೇಡಿ. ಚುನಾವಣೆಗೆ ಸ್ಪರ್ಧಿಸಿ ಎಂದು ಮನವಿ ಮಾಡಿದರು. ಅನಿವಾರ್ಯವಾಗಿ ಸ್ಪರ್ಧಿಸಲೇಬೇಕಾಯಿತು.

ಪ್ರಶ್ನೆ: ನಿಮ್ಮ ಸ್ಪರ್ಧೆ ಕುಟುಂಬ ರಾಜಕಾರಣಕ್ಕೆ ಇಂಬು ಕೊಟ್ಟಂತಲ್ಲವೇ?
ಗೀತಾ: ಮಹದೇವಪ್ರಸಾದ್‌ ಇದ್ದಿದ್ದರೆ ನಾನು ರಾಜಕೀಯಕ್ಕೆ ಬರುತ್ತಿದ್ದೆನೆ? ಬೇರೆ ಯಾರೂ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿ ಮುಂದೆ ಬರಲಿಲ್ಲ. ಪ್ರಸಾದ್‌ ಕುಟುಂಬದವರೇ ಸ್ಪರ್ಧಿಸಬೇಕೆಂದು ಜನ ಬಯಸಿದರು. ಅವರ ಒತ್ತಾಸೆಗೆ ಮಣಿಯಬೇಕಾಯಿತು.

ಪ್ರಶ್ನೆ: ಮಹದೇವ ಪ್ರಸಾದ್‌ ಅವರಿಗೆ ಚುನಾವಣೆ ತಂತ್ರ ತಿಳಿದಿದ್ದವು. ಇದನ್ನೆಲ್ಲ ನಿಭಾಯಿಸುವುದು ನಿಮಗೆ ಕಷ್ಟವಾಗುತ್ತಿಲ್ಲವೇ?
ಗೀತಾ: ಬೆಂಬಲಕ್ಕೆ ಸಿಎಂ, ಸಚಿವರು, ಶಾಸಕರು, ಮುಖಂಡರು, ಪತಿಯವರು ಬೆಳೆಸಿದ ಕಾರ್ಯಕರ್ತರಿದ್ದಾರೆ. ಮಗ ಜವಾಬ್ದಾರಿ ಹೊತ್ತಿದ್ದಾನೆ. ಕ್ರಮೇಣ ನನಗೂ ಎಲ್ಲ ಅರ್ಥವಾಗುತ್ತಿದೆ.

ಪ್ರಶ್ನೆ: ಯಾರೇ ಗೆದ್ದರೂ ಅಧಿಕಾರ ಒಂದೇ ವರ್ಷ. ಚುನಾವಣೆ ಖರ್ಚು, ಸಮಯ, ಶ್ರಮ ಎಲ್ಲ ವ್ಯರ್ಥವಲ್ಲವೇ?
ಗೀತಾ: ನನಗೂ ಹಾಗೇ ಅನಿಸುತ್ತಿದೆ. ಉಪ ಚುನಾವಣೆ ಬದಲು, ಒಂದೇ ಬಾರಿಗೆ ಸಾರ್ವತ್ರಿಕ ಚುನಾವಣೆಗೇ ಸ್ಪರ್ಧಿಸುವುದು ಉತ್ತಮವಾಗಿತ್ತು.

Advertisement

ಪ್ರಶ್ನೆ: ಪ್ರತಿಸ್ಪರ್ಧಿ ಬಿಜೆಪಿ ನಿರಂಜನಕುಮಾರ್‌ ಎರಡು ಬಾರಿ, ತಮ್ಮ ತಂದೆ ಎರಡು ಬಾರಿ ಸೋತಿದ್ದಾರೆ. ಇದು ನನ್ನ ಬದುಕಿನ ಪ್ರಶ್ನೆ. ಅನುಕಂಪದ ಮೇಲೆ ಮತ ನೀಡಿ ಎನ್ನುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆಯೇನು?
ಗೀತಾ: ನಿರಂಜನ್‌ ಎರಡೆರಡು ಬಾರಿ ಸೋತು ಎಲ್ಲ ಕಳೆದುಕೊಂಡಿದ್ದೇನೆ, ಇದು ಬದುಕಿನ ಪ್ರಶ್ನೆ ಎನ್ನುತ್ತಿದ್ದಾರೆ. ರಾಜಕೀಯಕ್ಕೆ ಬರುವುದು ಸಂಪಾದನೆ ಮಾಡುವುದಕ್ಕಾ? ಅನುಕಂಪದ ಅರ್ಥವೇನು? ಕಳೆದುಕೊಂಡಿದ್ದು ವಾಪಸ್‌ ಬರುವುದಿಲ್ಲ ಎಂಬ ದುಃಖದಲ್ಲಿರುವ ವ್ಯಕ್ತಿಗೆ ಅನುಕಂಪಬೇಕು. ಅನುಕಂಪದ ವ್ಯಾಖ್ಯಾನವನ್ನೇ ಇವರು ಬದಲಿಸಿದ್ದಾರೆ. ಇವರಿಗೆ ಅನುಕಂಪದ ಅರ್ಥವೇ ಗೊತ್ತಿಲ್ಲ.

ಪ್ರಶ್ನೆ: ಬಿಜೆಪಿ ಗೆಲುವಿಗೆ ಅನೇಕ ತಂತ್ರ ಅನುಸರಿಸುತ್ತಿದೆ. ಬಿಎಸ್‌ವೈ ಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದಾರೆ ಇದರಿಂದ ನಿಮಗೆ ಕಷ್ಟವಾಗುವುದಿಲ್ಲವೇ?
ಗೀತಾ: ಏನೇ ತಂತ್ರ ಅನುಸರಿಸಿದರೂ  ತೊಂದರೆ ಇಲ್ಲ . ಎಲ್ಲೇ ಪ್ರಚಾರಕ್ಕೆ ಹೋದರೂ ಜನ ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಬೆಂಬಲ ತೋರಿಸುತ್ತಿದ್ದಾರೆ. ಗೆಲ್ಲುವ ವಿಶ್ವಾಸವಿದೆ.

ಸಂದರ್ಶನ: ಕೆ.ಎಸ್‌.ಬನಶಂಕರ ಆರಾಧ್ಯ

ಕುಟುಂಬ ರಾಜಕಾರಣ ಕೊನೆಗಾಣಿಸಿ: ನಿರಂಜನಕುಮಾರ್‌
ಪ್ರಶ್ನೆ: ಕ್ಷೇತ್ರದ ಜನತೆ ಯಾತಕ್ಕಾಗಿ ಬಿಜೆಪಿ ಬೆಂಬಲಿಸಬೇಕು?
ನಿರಂಜನ: ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕಳೆದ 23ವರ್ಷಗಳಿಂದ ಕುಟುಂಬ ರಾಜಕಾರಣವಿದೆ. ಇದನ್ನು ಕೊನೆಗಾಣಿಸಿ ಬದಲಾವಣೆ ತಂದಾಗ ಮಾತ್ರ ಕ್ಷೇತ್ರದ ಸಮಗ್ರ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಜನತೆ ಬಿಜೆಪಿ ಬೆಂಬಲಿಸಬೇಕು.

ಪ್ರಶ್ನೆ: ಶೇ.80ರಷ್ಟು ಅಭಿವೃದ್ಧಿ ಕೆಲಸ ಆಗಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ, ಇದಕ್ಕೆ ಏನೆನ್ನುತ್ತೀರಿ?
ನಿರಂಜನ:  ಕ್ಷೇತ್ರದಲ್ಲಿ ಆಡಳಿತ ನಡೆಸಿದವರು ಅಭಿವೃದ್ಧಿಯೇ ಮಾಡಿಲ್ಲ. ಶೇ.80ರಷ್ಟು ಕೆಲಸ ಆಗಿದೆ ಎಂಬುದೇ ಸುಳ್ಳು. ಸಮುದಾಯ ಭವನ, ಕಟ್ಟಡ ನಿರ್ಮಿಸುವುದು ಅಭಿವೃದ್ಧಿಯಲ್ಲ. ನೀರಾವರಿ, ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು. ತಾಲೂಕಿನಲ್ಲಿ ಕುಡಿವ ನೀರಿಗೆ ಹಾಹಾಕಾರವಿದೆ. ಇಂತಹ ಪರಿಸ್ಥಿಯನ್ನು  ಅಭಿವೃದ್ಧಿ  ಎಂದು ಹೇಳಬಹುದೇ?

ಪ್ರಶ್ನೆ: ಬಿಎಸ್‌ವೈ ಪ್ರಚಾರ ಕ್ಷೇತ್ರದಲ್ಲಿ ಕಮಲ ಅರಳಿಸುತ್ತಾ?
ನಿರಂಜನ್‌: ಅನುಮಾನವೇ ಬೇಡ. ಬಿಎಸ್‌ವೈ ಜಾತ್ಯತೀತ ನಾಯಕ. ಯಾವುದೇ ವರ್ಗಕ್ಕೆ ಸೀಮಿತವಾಗದೆ ಎಲ್ಲಾ ವರ್ಗದ ಇಷ್ಟ-ಕಷ್ಟ ಅರಿತು ದುಡಿಯುತ್ತಿದ್ದಾರೆ. ಬಿಜೆಪಿ ಶಾಸಕ ಇಲ್ಲದಿದ್ದರೂ ಬಜೆಟ್‌ನಲ್ಲಿ 220 ಕೋಟಿ ರೂ.ಮೀಸಲಿಟ್ಟು ಜಿಲ್ಲೆಯ ಹಲವು ಕೆರೆಗಳಿಗೆ ನೀರು ತುಂಬಿಸಲು ನೆರವಾದರು. ಬಿಎಸ್‌ವೈ ಪ್ರಚಾರ ಗೆಲುವಿಗೆ ಮೆಟ್ಟಿಲುಗಳಾಗುತ್ತದೆ ಎಂಬ ವಿಶ್ವಾಸವಿದೆ.

ಪ್ರಶ್ನೆ: ಮಹದೇವಪ್ರಸಾದ್‌ ನಿಧನದ ಹಿನ್ನೆಲೆಯಲ್ಲಿ  ಅನುಕಂಪ ಆ ಕುಟುಂಬಕ್ಕೆ ಎನ್ನಲಾಗುತ್ತದೆ. ನೀವು ಚುನಾವಣೆಯಲ್ಲಿ ಸೋತಿರುವುದನ್ನೇ ಅನುಕಂಪ ಎನ್ನಲಾಗುತ್ತದೆಯೇ?
ನಿರಂಜನ: ನಾನು 2 ಬಾರಿ, ತಂದೆಯವರು 2 ಬಾರಿ ಸೋತಿದ್ದೇವೆ. ಇದರಿಂದ ಜನರಿಗೆ ನಮ್ಮ ಮೇಲೆ ಅನುಕಂಪವಿದೆ. ಹಳ್ಳಿಗಳಿಗೆ ತೆರಳಿದಾಗ ಇದು ವ್ಯಕ್ತವಾಗಿದೆ. ಜನತೆ ನಿಮ್ಮ ಮೇಲೆ ವಿಶ್ವಾಸವಿದೆ, ಈ ಬಾರಿ ನಿಮ್ಮನ್ನು ಆಯ್ಕೆ ಮಾಡುತ್ತೇವೆ ಎನ್ನುತ್ತಿದ್ದಾರೆ.

ಪ್ರಶ್ನೆ: ಪ್ರತಿಪಕ್ಷದಲ್ಲಿದ್ದು ಕ್ಷೇತ್ರಕ್ಕೆ ನೀರಾವರಿ ಸೇರಿ ಇತರೆ ಯೋಜನೆ ತರಲು ಸಾಧ್ಯವೇ?
ನಿರಂಜನ: ಗೆದ್ದರೆ ಪ್ರತಿಪಕ್ಷದಲ್ಲಿದ್ದುಕೊಂಡೇ ರೈತ ಪರ, ಕುಡಿವ ನೀರಿಗಾಗಿ ಹೋರಾಟ ನಡೆಸಿ ಅಗತ್ಯ ಅನುದಾನ, ಯೋಜನೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ. ಜತೆಗೆ ಕ್ಷೇತ್ರಕ್ಕೆ ಯಾವುದೇ ನೀರಾವರಿ ಮೂಲವಿಲ್ಲ. ಆದ್ದರಿಂದ ಎಲ್ಲಾ ಕೆರೆಗಳಿಗೆ ನೀರು ತುಂಬಿಸಿ ದುಡಿಯುವ ಕೈಗಳಿಗೆ ಕೆಲಸ ಕಲ್ಪಿಸುವ ವಾತಾವರಣ ಕಲ್ಪಿಸುವೆ.

ಸಂದರ್ಶನ: ಸೋಮಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next