ಗುಂಡ್ಲುಪೇಟೆ: ಟಿಪ್ಪರ್ ಲಾರಿ ಹರಿದು ಕೇರಳ ಮೂಲದ ಬೈಕ್ ಸವಾರನ ಕಾಲು ನಜ್ಜುಗುಜ್ಜಾಗಿರುವ ಘಟನೆ ಪಟ್ಟಣದ ಆರ್ ಟಿಓ ಕಚೇರಿ ಮುಂದೆ ನಡೆದಿದೆ.
ಕೇರಳದ ಮಲಪುರಂನ ಜಾಸ್ಮಿನ್ (35) ಕಾಲು ಕಳೆದುಕೊಂಡ ಯುವಕ. ಈತ ಪಟ್ಟಣದ ಆರ್ ಟಿಓ ಸರ್ಕಲ್ ಬಳಿ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಟಿಪ್ಪರ್ ಲಾರಿ ಬೈಕ್ ಗೆ ಗುದ್ದಿದೆ. ಲಾರಿಯು ಬೈಕ್ ಸವಾರನನ್ನು ಸುಮಾರು 20 ಮೀಟರ್ ಎಳೆದೋಯ್ದಿದ್ದು, ಎಡಗಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.
ಸ್ಥಳಕ್ಕಾಗಮಿಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಸೂಚನೆ ಮೇರೆಗೆ ಆತನನ್ನು ಮೈಸೂರಿಗೆ ರವಾನಿಸಲಾಗಿದೆ.
ಅಪಘಾತದ ನಂತರ ಟಿಪ್ಪರ್ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾರೆ. ಗುಂಡ್ಲುಪೇಟೆ ಪೊಲೀಸರು ಬೈಕ್ ಹಾಗೂ ಟಿಪ್ಪರನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಮೂವರ ಬಲಿ: ಎರಡು ತಿಂಗಳ ಹಿಂದೆ ಪಟ್ಟಣದ ಹೊರ ವಲಯದ ಕೇರಳ ರಸ್ತೆಯಲ್ಲಿ ಟಿಪ್ಪರ್ ಹರಿದು ಕೇರಳ ಮೂಲದ ಮೂವರು ದುರ್ಮರಣ ಹೊಂದಿದ್ದರು. ಇಷ್ಟಾದರು ಟಿಪ್ಪರ್ ಗಳ ಹಾವಳಿಗೆ ಕಡಿವಾಣ ಬೀಳದ ಪರಿಣಾಮ ಬುಧವಾರ ಕೂಡ ಕೇರಳದ ಬೈಕ್ ಸವಾರನೋರ್ವನ ಕಾಲು ನಜ್ಜುಗುಜ್ಜಾಗಿದೆ. ಇದಕ್ಕೆ ಟಿಪ್ಪರ್ ಚಾಲಕರ ನಿರ್ಲಕ್ಷ್ಯತನ ಚಾಲನೆಯೇ ಕಾರಣ. ಹಲವು ಮಂದಿ ಟಿಪ್ಪರ್ ಚಾಲಕರು ಕುಡಿದು ವಾಹನ ಚಲಾಯಿಸುವುದರಿಂದ ಅಪಘಾತಗಳು ಪದೇ ಪದೇ ನಡೆಯುತ್ತಿದೆ. ಈ ಬಗ್ಗೆ ಆರ್ ಟಿಓ, ಪೊಲೀಸರು ಹಾಗೂ ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದೇ ಕಾರಣ ಎಂದು ಕರವೇ ಟೌನ್ ಅಧ್ಯಕ್ಷ ರಾಜೇಂದ್ರ ವಿ.ನಾಯಕ್ ಆಕ್ರೋಶ ಹೊರಹಾಕಿದರು.