Advertisement

ಗುಂಡ್ಲುಪೇಟೆ : ಕಾಡಾನೆ ದಾಳಿಗೆ ರೈತರ ಬೆಳೆ ನಾಶ : ಅಧಿಕಾರಿಗಳ ವಿರುದ್ಧ ರೈತ ಮುಖಂಡರ ಆಕ್ರೋಶ

08:00 PM Jun 09, 2022 | Team Udayavani |

ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಹುಂಡೀಪುರ ಗ್ರಾಮದ ರೈತರ ಜಮೀನುಗಳ ಮೇಲೆ ಕಾಡಾನೆ ದಾಳಿ ನಡೆಸಿ ಬಾಳೆ, ತೆಂಗು ಮತ್ತು ಸೋಲಾರ್ ವಿದ್ಯುತ್ ತಂತಿ ಬೇಲಿ ತುಳಿದು ನಾಶ ಪಡಿಸಿದ ಹಿನ್ನೆಲೆ ರೈತ ಮುಖಂಡರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವಾಹನಗಳ ಚಕ್ರದ ಗಾಳಿ ತೆಗೆಯುವ ಮೂಲಕ ದಿಗ್ಭಂದನ ವಿಧಿಸಿದರು.

Advertisement

ಹುಂಡೀಪುರ ಗ್ರಾಮದ ರವಿ, ಮಂಜು ಮತ್ತು ಕುಮಾರ ಎಂಬುವರ ಜಮೀನುಗಳಲ್ಲಿ ಬೆಳೆದಿದ್ದ ತೆಂಗು, ಬಾಳೆ ಮತ್ತು ಸೋಲಾರ್ ವಿದ್ಯುತ್ ತಂತಿ ಬೇಲಿಯನ್ನು ಆನೆಯೊಂದು ತಿಂದು, ತುಳಿದು ನಾಶ ಮಾಡಿತ್ತು. ಹಿಂದಿನ ಐದು ದಿನಗಳಲ್ಲೂ ಹಲವು ಕಡೆಗಳಲ್ಲಿ ಸಲಗದಿಂದ ಬೆಳೆ ಹಾನಿ ಸಂಭವಿಸಿತ್ತು. ಇದರಿಂದ ರೈತರು ಆಕ್ರೋಶಗೊಂಡಿದ್ದರು. ರೈತರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ನೌಕರರಿಂದ ಆನೆಯನ್ನು ಕಾಡಿಕಟ್ಟಲು ಸಾಧ್ಯವಾಗಿರಲಿಲ್ಲ. ಗುರುವಾರ ಬೆಳಗ್ಗೆ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆಯಲು ಬಂದ ಅರಣ್ಯ ಇಲಾಖೆ ನೌಕರರಿಗೆ ರೈತರು ದಿಗ್ಭಂಧನ ವಿಧಿಸಿದ್ದರು. ವಿಷಯ ತಿಳಿದ ಗೋಪಾಲಸ್ವಾಮಿ ಬೆಟ್ಟ, ಕುಂದಕೆರೆ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಮನವಿ ಆಲಿಸಿದರು. ಇದಕ್ಕೆ ಜಗ್ಗದ ರೈತರು ವಾಹನಗಳ ಗಾಳಿ ತೆಗೆಯುವ ಮೂಲಕ ಸ್ಥಳಕ್ಕೆ ಸಿಎಫ್ ಹಾಗು ಎಸಿಎಫ್ ಆಗಮಿಸಿ ಶಾಶ್ವತ ಪರಿಹಾರ ದೊರಕಿಸಿಕೊಡಬೇಕೆಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಸೋಲಾರ್ ವಿದ್ಯುತ್ ತಂತಿ ಬೇಲಿಯನ್ನು ಅರಣ್ಯ ಇಲಾಖೆಯವರು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಮೂರನೇ ವ್ಯಕ್ತಿಗೆ ನಿರ್ವಹಣೆ ಹೊಣೆ ವಹಿಸಿ ನಮ್ಮ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ. ಕಂದಕ ಇದ್ದೂ ಇಲ್ಲದಂತಿದೆ. ಈಗಾಗಿ ಕಾಡಾನೆ ಹಾವಳಿ ಮಿತಿ ಮೀರಿದೆ. ಸಾಲ ಮಾಡಿ ಬೆಳೆ ಬೆಳೆದಿದ್ದೇವೆ. ಬೆಳವಣಿಗೆ ಹಂತದಲ್ಲಿ ಬೆಳೆ ನಾಶವಾದರೆ ಮಾಡಿದ ಸಾಲ ಮತ್ತು ಬಡ್ಡಿ ಕಟ್ಟುವುದು ಹೇಗೆ, ಜಮೀನಿನ ಸುತ್ತಲೂ ಹಾಕಿಕೊಂಡ ಫೆನ್ಸಿಂಗ್ ಅನ್ನು ಸಲಗ ಹಾಳು ಮಾಡಿದೆ. ಈಗಾದರೆ ಮತ್ತೆ ಲಕ್ಷಾಂತರ ರೂಪಾಯಿ ವ್ಯಯಿಸಿ ಫೆನ್ಸ್ ಮಾಡಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಸಮಸ್ಯೆಗೆ ಶಾಸ್ವತ ಪರಿಹಾರದ ಭರವಸೆ ಸಿಗಬೇಕು. ಬೆಳೆ ಹಾನಿಗೆ ತಕ್ಷಣ ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಅಪರಾಧ ವಿಭಾಗದ ಪಿಎಸ್‍ಐ ಸುಜಾತ ಗ್ರಾಮಸ್ಥರನ್ನು ಸಮಾಧಾನ ಪಡಿಸಿದರು ಬಗ್ಗದೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ನಂತರ ಸ್ಥಳಕ್ಕಾಗಮಿಸಿದ ಎಸಿಎಫ್ ರವೀಂದ್ರ, ಬೆಳೆ ಹಾನಿಗೆ ಸೂಕ್ತ ಪರಿಹಾರ ಕೊಡಿಸಲಾಗುವುದು, ಹಾಳಾಗಿರುವ ಸೋಲಾರ್ ಫೆನ್ಸಿಂಗ್ ಅನ್ನು ಸರಿ ಪಡಿಸಿಕೊಡುವ ಜತೆಗೆ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ಅರಣ್ಯ ವಲಯದ ನೌಕರರು ರಾತ್ರಿವೇಳೆ ಗಂಟೆಗೊಮ್ಮ ಗಸ್ತು ತಿರುಗುವ ವ್ಯವಸ್ಥೆ ಮಾಡಿಸುತ್ತೇನೆ. ಕುಂದಕೆರೆ ವಲಯ ಅರಣ್ಯಾಧಿಕಾರಿ ವರ್ಗಾವಣೆ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.

ಕುಂದಕೆರೆ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿಗಳಾದ ಶ್ರೀನಿವಾಸನಾಯಕ, ಎನ್.ಪಿ.ನವೀನ್‍ಕುಮಾರ್, ರೈತರಾದ ಕಂದಸ್ವಾಮಿ, ದಿಲೀಪ್, ಎಚ್.ಪಿ.ಮಹೇಂದ್ರ, ಬಸವಣ್ಣ, ಅಶೋಕ, ಗುರು, ನಾಗಪ್ಪ ಮತ್ತು ರೈತ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next