ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಬಾಚಹಳ್ಳಿ ಗ್ರಾಮದ ಸರ್ವೇ ನಂ-516ರ ಪ್ರದೇಶದಲ್ಲಿ ಹೆಣ್ಣಾನೆಯೊಂದರ ಮೃತದೇಹ ಪತ್ತೆಯಾಗಿದ್ದು, ಆನೆ ಆಂಥಾಕ್ಸ್ (Anthrax) ಕಾಯಿಲೆಯಿಂದ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಮೃತ ಹೆಣ್ಣಾನೆಗೆ ಅಂದಾಜು 30 ವರ್ಷ ವಯಸ್ಸಾಗಿದ್ದು, ಅರಣ್ಯ ಇಲಾಖೆ ಗಸ್ತು ತಿರುಗುತಿದ್ದಾಗ ಬೆಳಕಿಗೆ ಬಂದಿದೆ. ಮಾಹಿತಿ ಅರಿತ ಕೂಡಲೇ ಸ್ಥಳಕ್ಕಾಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಪರಿಶೀಲನೆ ನಡೆಸಿದ್ದಾರೆ.
ಇಲಾಖಾ ಪಶು ವೈದ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದು, ಆನೆಯು ಆಂಥಾಕ್ಸ್ (Anthrax) ಕಾಯಿಲೆಯಿಂದ ಬಳಲಿ ಮೃತಪಟ್ಟಿದೆ ಎಂದು ಶಂಕಿಸಿದ್ದಾರೆ.
ಮೃತ ಆನೆಯ ಅಂಗಾಂಗಗಳ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ವಿಜ್ಞಾನ ಪ್ರಯೋಗ ಶಾಲೆಗೆ ಕಳುಹಿಸಲಾಗಿದೆ. ಹೆಣ್ಣಾನೆ ಮೃತ ದೇಹವನ್ನು ಸುಡುವ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕುಂದುಕೆರೆ ಉಪ ವಲಯ ಅರಣ್ಯಾಧಿಕಾರಿ ಮನೋಹರ ಸೇರಿದಂತೆ ಯಲಚೆಟ್ಟಿ ಶಾಖೆ, ಕುಂದುಕೆರೆ ವಲಯ ಹಾಗೂ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.