ಗುಂಡ್ಲುಪೇಟೆ (ಚಾಮರಾಜನಗರ): ಆರು ಜೀವಂತ ಆಮೆಗಳು ಮತ್ತು ಶ್ರೀಗಂಧ ಮರದ ತುಂಡುಗಳನ್ನು ಸಾಗಿಸುತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಅಧಿಕಾರಿ ಬಂಧಿಸಿದ ಘಟನೆ ನ.30ರ ಶನಿವಾರ ನಡೆದಿದೆ.
ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಆರ್.ಕುಮಾರ್ (27) ಬಂಧಿತ ಆರೋಪಿ.
ಅರಣ್ಯ ಸಿಬ್ಬಂದಿಗಳು ಗಸ್ತು ಮಾಡುತ್ತಿದ್ದ ಸಮಯದಲ್ಲಿ ಮದ್ದೂರು ವಲಯದ ಬರಗಿ ಶಾಖೆ ಹೊಂಗಳ್ಳಿ ಗಸ್ತಿನ ನುರ್ಜಿಕೊರೆ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಅರಣ್ಯ ಪ್ರದೇಶದೊಳಗೆ ಕಂಡು ಬಂದಿದ್ದಾನೆ. ಸುತ್ತುವರೆದಾಗ ಈತನ ಬಳಿ 6 ಜೀವಂತ ಆಮೆಗಳು ಮತ್ತು 72.15 ಕೆ.ಜಿ ತೂಕದಷ್ಟು 3 ಶ್ರೀಗಂಧದ ಹಸಿ ತುಂಡುಗಳು ಇರುವುದು ಕಂಡು ಬಂದಿದೆ.
ನಂತರ ಆತನನ್ನು ಸುದೀರ್ಘವಾಗಿ ವಿಚಾರಣೆ ನಡೆಸಲಾಗಿದ್ದು, ಈ ವ್ಯಕ್ತಿ ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯವನು ಎಂದು ತಿಳಿದುಬಂದಿದೆ.
ಆರೋಪಿ ವಿರುದ್ಧ ಮದ್ದೂರು ವಲಯದ ಅರಣ್ಯ ಮೊಕದ್ದಮೆ ಸಂಖ್ಯೆ 04/2024-25ರಲ್ಲಿ ಆರೋಪಿಯ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ಹಾಗೂ ಕರ್ನಾಟಕ ಅರಣ್ಯ ಕಾಯ್ದೆ 1963ರಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಕ್ರಮ ಜರುಗಿಸಲಾಗಿದೆ.
ಈ ವೇಳೆ ಸಹಾಯಕ ಗುಂಡ್ಲುಪೇಟೆ ಉಪವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್, ಮದ್ದೂರು ವಲಯದ ಪ್ರಭಾರ ಅರಣ್ಯಾಧಿಕಾರಿ ಎನ್.ಸಿ.ಮಹದೇವ, ಉಪ ವಲಯ ಅರಣ್ಯಾಧಿಕಾರಿ, ಗಸ್ತು ವನಪಾಲಕ, ಹೊರಗುತ್ತಿಗೆ ನೌಕರರು ಪಾಲ್ಗೊಂಡಿದ್ದರು. ಅಧಿಕಾರಿ, ನೌಕರರ ಕಾರ್ಯವನ್ನು ಹುಲಿ ಯೋಜನೆ ನಿರ್ದೇಶಕ ಪ್ರಭಾಕರನ್ ಶ್ಲಾಘಿಸಿದ್ದಾರೆ.