ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಆದರೆ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಇದೆ. 2018ರ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಸ್.ನಿರಂಜನ ಕುಮಾರ್ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ನಿರಂಜನ ಕುಮಾರ್‌ಗೆ ಪ್ರಬಲ ಪೈಪೋಟಿ ನೀಡಲು ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಹಾಗೂ ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಸುಪುತ್ರ ಎಚ್.ಎಂ.ಗಣೇಶಪ್ರಸಾದ್ ಎಲ್ಲ ರೀತಿಯ ಕಾರ್ಯ ತಂತ್ರ ರೂಪಿಸಿ ಸರ್ವಸನ್ನದ್ಧರಾಗಿದ್ದಾರೆ. ಆದರೆ ಮತ್ತೆ ಕ್ಷೇತ್ರದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಾದ ಜವಾಬ್ದಾರಿ ನಿರಂಜನ ಕುಮಾರ್ ಹೆಗಲಿಗಿರುವ ಕಾರಣ ಇವರು ಸಹ ತಮ್ಮ ಅವಧಿಯ ಅಭಿವೃದ್ಧಿಯ ಕೆಲಸಗಳನ್ನು ಮತದಾರರ ಮುಂದಿಟ್ಟು 2ನೇ ಬಾರಿಗೆ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ.
ಕಾಂಗ್ರೆಸ್‌ನಿಂದ ಎಚ್.ಎಂ.ಗಣೇಶಪ್ರಸಾದ್‌ಗೆ ಟಿಕೆಟ್: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ ಹಾಗೂ ಎಚ್.ಎಂ.ಗಣೇಶಪ್ರಸಾದ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ಇತ್ತೀಚೆಗೆ ಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವೇಳೆ ನನಗೆ ಜೈ ಎನ್ನಬೇಕಾದರೆ ಗಣೇಶಪ್ರಸಾದ್ ಕೈ ಬಲಪಡಿಸಿ ವಿಧಾನ ಸಭೆಗೆ ಕಳುಹಿಸಬೇಕು ಎನ್ನುವ ಮೂಲಕ ಬಹುತೇಕ ಎಚ್.ಎಂ.ಗಣೇಶಪ್ರಸಾದ್‌ಗೆ ಟಿಕೆಟ್ ಖಚಿತ ಎಂಬ ಸುಳಿವನ್ನು ಡಿ.ಕೆ.ಶಿವಕುಮಾರ್ ಬಿಟ್ಟುಕೊಟ್ಟಿದ್ದಾರೆ.
ಬಿಜೆಪಿಯಿಂದ ನಿರಂಜನ ಕುಮಾರ್ ಸ್ಪರ್ಧೆ ಖಚಿತ: ಶಾಸಕ ಸಿ.ಎಸ್.ನಿರಂಜನ ಕುಮಾರ್ ಹಾಲಿ ಶಾಸಕರಾಗಿರುವ ಹಿನ್ನೆಲೆ ಅವರಿಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗುತ್ತಿದೆ. ಈ ಮಧ್ಯೆ ಕೆಲವು ದಿನಗಳ ಹಿಂದೆ ಪಟ್ಟಣದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನಿರಂಜನ ಕುಮಾರ್ ಅವರನ್ನು ಈ ಬಾರಿ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿ ಎಂಬ ಸೂಚನೆಯನ್ನು ಕಾರ್ಯಕರ್ತರಿಗೆ ನೀಡುವ ಮೂಲಕ ನಿರಂಜನಕುಮಾರ್‌ಗೆ ಟಿಕೆಟ್ ಖಚಿತವಾಗಿದೆ.
ಜೆಡಿಎಸ್‌ನಿಂದ ಕಡಬೂರು ಮಂಜುನಾಥ್ ಕಣಕ್ಕೆ: ರೈತ ಸಂಘದಲ್ಲಿ ಗುರುತಿಸಿಕೊಂಡು ಕ್ಷೇತ್ರದಲ್ಲಿ ತನ್ನದೇ ಆದ ಬೆಂಬಲಿಗರನ್ನು ಹೊಂದಿರುವ ಕಡಬೂರು ಮಂಜು ನಾಥ್‌ಗೆ ಈ ಬಾರಿಯ ಜೆಡಿಎಸ್ ಟಿಕೆಟ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಸ್ವತಃ ಘೋಷಣೆ ಮಾಡಿರುವ ಹಿನ್ನೆಲೆ ಜೆಡಿಎಸ್‌ನಲ್ಲೂ ಸಹ ಚುನಾವಣೆಗೆ ಉತ್ಸುಕತೆ ಹೆಚ್ಚಿದೆ.
Related Articles
ಮತ್ತೆ ಪ್ರಭುತ್ವ ಸ್ಥಾಪಿಸಲು ಕಾಂಗ್ರೆಸ್ ಯತ್ನ: ಗುಂಡ್ಲುಪೇಟೆ ವಿಧಾನ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಗೆಲುವು ಸಾಧಿಸಿ ಶಾಸಕ, ಸಚಿವರಾಗಿದ್ದ ದಿ.ಹೆಚ್.ಎಸ್.ಮಹದೇವಪ್ರಸಾದ್ ಕುಟುಂಬ ಸದಸ್ಯರು ಕಳೆದ 2018ರ ಸಾರ್ವತ್ರಿಕ ಚುನಾವಣೆ ಯಲ್ಲಿ ಸೋಲುಂಡರು. ನಂತರ ಅಧಿಕಾರ ಇಲ್ಲದಿದ್ದರೂ ಸಹ ಕಳೆದ 5 ವರ್ಷಗಳಿಂದ ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವಪ್ರಸಾದ್ ಸುಪುತ್ರ ಎಚ್.ಎಂ.ಗಣೇಶಪ್ರಸಾದ್ ಕ್ಷೇತ್ರದ ಮತದಾರರ ಸಂಪರ್ಕದಲ್ಲಿದ್ದಾರೆ. ಈ ಮೂಲಕ ಕ್ಷೇತ್ರದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕು ಎಂಬ ನಿರೀಕ್ಷೆಯಲ್ಲಿದ್ದಾರೆ.
ಹಾಲಿ ಶಾಸಕ ನಿರಂಜನ ಕುಮಾರ್‌ಗೆ ಬಂಡಾಯದ ಬಿಸಿ
ಬಿಜೆಪಿ ಶಾಸಕ ನಿರಂಜನ ಕುಮಾರ್ ತಮ್ಮ 5 ವರ್ಷದ ಆಡಳಿತ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಸಾಕಷ್ಟು ಒತ್ತಡ ತಂದು ನೂರಾರು ಕೋಟಿ ಅನುದಾನ ತಂದು ಕೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ. ಆದರೆ ಎಂಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿರುವುದರಿಂದ ಶಾಸಕರಿಗೆ ಬಂಡಾಯದ ಬಿಸಿ ತಟ್ಟಿದೆ. ಇನ್ನೂ ಈ ಮಧ್ಯೆ ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಫರ್ಧೆ ಮಾಡುವುದು ಖಚಿತ ಎಂದು ಸುನಿಲ್ ಹೇಳಿಕೆ ನೀಡಿರುವುದು ಹಾಲಿ ಶಾಸಕ ನಿರಂಜನ ಕುಮಾರ್‌ಗೆ ತಲೆನೋವಾಗಿದೆ. ಕಳೆದ 2018ರ ಚುನಾವಣೆಯಲ್ಲಿ ನಿರಂಜನ ಕುಮಾರ್ ಗೆಲುವಿಗೆ ಬಂಡಾಯ ಎದ್ದಿರುವ ಎಂ.ಪಿ.ಸುನಿಲ್ ಹಾಗೂ ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ಸಾಕಷ್ಟು ಶ್ರಮ ವಹಿಸಿದ್ದರು.
-ಬಸವರಾಜು ಎಸ್.ಹಂಗಳ