ಕುಮಟಾ: ತಾಲೂಕಿನ ವಾಲಗಳ್ಳಿ ಗ್ರಾಪಂ ವ್ಯಾಪ್ತಿಯ ಗುಂಡಿಗದ್ದೆ ಮಿನಿ ಸೇತುವೆಯು ಶಿಥಿಲಾವಸ್ಥೆಗೆ ತಲುಪಿದ್ದು, ಆಗಲೋ, ಈಗಲೋ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ವಾಲಗಳ್ಳಿ ಗ್ರಾಪಂ ವ್ಯಾಪ್ತಿಯ ಕೋಟೆಗುಡ್ಡೆ ಮತ್ತು ಉಂಚಗಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಕಾಲು ಹಾದಿಯಾಗಿ ಬಳಕೆಯಾಗುತ್ತಿದೆ. ಕಳೆದ 18-20 ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಮಿನಿ ಸೇತುವೆಯು ಇಂದು ಶಿಥಿಲಾವಸ್ಥೆ ತಲುಪಿದ್ದು, ಜನರು ನಡೆದಾಡಲೂ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಟೆಗುಡ್ಡೆಯಿಂದ ಉಂಚಗಿಗೆ ಬರಲು ಹಾಗೂ ಉಂಚಗಿಯಿಂದ ಕೋಟೆಗುಡ್ಡಕ್ಕೆ ಹೋಗಲು ಇದೇ ಸಮೀಪದ ಮಾರ್ಗವಾಗಿದ್ದು, ಕೋಟೆಗುಡ್ಡೆಯವರು ದಿನನಿತ್ಯದ ಕಾರ್ಯಗಳಿಗಾಗಿ ಸದಾ ಇದೇ ಮಾರ್ಗವಾಗಿ ಸಂಚರಿಸುತ್ತಾರೆ.
ಬೇಸಿಗೆಯಲ್ಲಿ ಅಷ್ಟೊಂದು ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಮಳೆಗಾಲದಲ್ಲಿ ಗುಂಡಿಗದ್ದೆ ಹಳ್ಳವು ತುಂಬಿ ಹರಿಯುತ್ತದೆ. ಆಗ ಸೇತುವೆಯು ಈ ಭಾಗದ ಜನತೆಗೆ ಅನಿವಾರ್ಯವಾಗಿ ಪರಿಣಮಿಸಲಿದೆ. ಸೇತುವೆ ಮೇಲೆ ವಾಹನಗಳು ಸಂಚರಿಸುವುದಿಲ್ಲ. ಆದರೂ ಸಹಿತ ಜನರಿಗೆ ಕಾಲುಹಾದಿಯಾಗಿ ಅತೀ ಉಪಯುಕ್ತವಾಗಿದೆ. ಉಂಚಗಿ ಭಾಗದವರು ಮಳೆಗಾಲದಲ್ಲಿ ಹೊಲಗದ್ದೆಗಳಿಗೆ ಬರುವಾಗ ಹಾಗೂ ಹೊಲದ ಕೆಲಸಕ್ಕೆ ಎತ್ತು-ಕೋಣಗಳನ್ನು ಇದೇ ಸೇತುವೆಯ ಮೇಲೆ ತರಬೇಕಾಗುತ್ತದೆ.
ಸುಮಾರು 70-80 ಅಡಿ ಉದ್ದವಾಗಿರುವ ಈ ಸೇತುವೆಗೆ 6 ಫಿಲ್ಲರ್‌ಗಳಿವೆ. ಈ ಆರೂ ಫಿಲ್ಲರ್‌ಗಳು ಸಹಿತ ಬುಡದಲ್ಲಿ ಕುಸಿಯುತ್ತಿದೆ. ಪಿಲ್ಲರ್‌ನ ರಾಡ್ ಹಾಗೂ ಜಲ್ಲಿ-ಕಲ್ಲುಗಳು ಹೊರಕ್ಕೆ ಬಂದಿವೆ. ಆದಗ್ಯೂ ಅನಿವಾರ್ಯವಾಗಿ ಈ ಸೇತುವೆಯ ಮೇಲೆ ಹಿರಿಯರು, ಮಕ್ಕಳು ಯಾವಾಗಲೂ ಓಡಾಡುತ್ತಿರುವುದು ಕಂಡುಬಂದಿದೆ.
ಉಂಚಗಿ ಹಾಗೂ ಕೋಟೆಗುಡ್ಡ ಭಾಗದಿಂದ ಎರಡು ಗ್ರಾಪಂ ಸದಸ್ಯರು ಈ ಭಾಗವನ್ನು ಪ್ರತಿನಿಧಿಸುತ್ತಿದ್ದು, ಇಬ್ಬರೂ ಕೂಡ ಗ್ರಾಮ ಸಭೆಯಲ್ಲಿ ಇಂದಿಗೂ ಚಕಾರವೆತ್ತದಿರುವುದು ವಿಪರ್ಯಾಸದ ಸಂಗತಿಯಾಗಿದೆ. ಬಹುಜನೋಪಯೋಗಿ ಈ ಸೇತುವೆಯನ್ನು ಪುನಃ ನಿರ್ಮಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗುವ ಮೂಲಕ ಈ ಭಾಗದ ಜನರ ಓಡಾಟಕ್ಕೆ ಅನುಕೂಲವನ್ನು ಒದಗಿಸಬೇಕೆಂಬುದು ಇಲ್ಲಿನ ಜನರ ಒತ್ತಾಯವಾಗಿದೆ.
ಕೆ. ದಿನೇಶ ಗಾಂವ್ಕರ