ಉಡುಪಿ: ಗುಂಡಿಬೈಲು ದ್ವಿಪಥ ರಸ್ತೆಯ ವಿಭಜಕ ತೆರವುಗೊಳಿಸಿರುವ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಎಲ್ಲೆಂದರಲ್ಲಿ ತಮಗೆ ಬೇಕಾದವರು ವಿಭಜಕವನ್ನು ತೆರವು ಮಾಡುವ ಕೆಲಸ ನಡೆಯುತ್ತಿದೆ. ರಸ್ತೆ ವಿಭಜಕ ತೆರವುಗೊಳಿಸಲು ನಗರಸಭೆ ಅನುಮತಿ ನೀಡಿರುವುದು ಸರಿಯಲ್ಲ. ಈಗಾಗಲೇ ಇಲ್ಲಿ ಬೇಕಾಬಿಟ್ಟಿ ಅವೈಜ್ಞಾನಿಕವಾಗಿ ವಿಭಜಕ ತೆರವುಗೊಳಿಸಿ ವಾಹನಗಳ ತಿರುವಿಗೆ ಅನುಕೂಲ ಮಾಡಿಕೊಡಲಾಗಿದೆ. ಇದರಿಂದ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದೆ ಎಂಬುದು ಸ್ಥಳೀಯರ ದೂರು.
ಅಂಬಾಗಿಲು-ಕಲ್ಸಂಕ ಸಂಪರ್ಕಿಸುವ ಈ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತವೆ. ಬೆಳಗ್ಗೆ, ಸಂಜೆ, ರಾತ್ರಿ ಅವಧಿಯಲ್ಲಿ ವಾಹನಗಳ ಒತ್ತಡ ಹೆಚ್ಚಿರುತ್ತದೆ. ಇಲ್ಲಿ ಎಲ್ಲಿಯೂ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿಲ್ಲ. ಎಲ್ಲರೂ ರಸ್ತೆ ಬದಿಯೇ ವಾಹನ ನಿಲ್ಲಿಸುತ್ತಾರೆ. ಎಲ್ಲೆಂದರಲ್ಲಿ ವಾಹನ ಪಾರ್ಕಿಂಗ್ ಸಹಿತ ರಸ್ತೆ ವಿಭಜಕವು ತೆರವು ಯು-ಟರ್ನ್ ಕಲ್ಪಿಸಿರುವುದರಿಂದ ಆಗಾಗ ಅಪಘಾತಗಳು ಸಂಭವಿಸುತ್ತಿದೆ. ಈಗ ಎಚ್‌ಪಿ ಪೆಟ್ರೋಲ್ ಬಂಕ್ ಬಳಿ ಮತ್ತೆ ವಿಭಜಕ ತೆರವು ಮಾಡಿರುವುದು ಸರಿಯಾದ ಕ್ರಮವಲ್ಲ. ರಸ್ತೆ ನಿಯಮಾವಳಿ ಸಂಪೂರ್ಣ ಉಲ್ಲಂಘನೆಯಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಎಂದು ಸಾರ್ವಜನಿಕರು ನಗರಸಭೆಗೆ ದೂರು ನೀಡಿದ್ದಾರೆ.
ನಗರಸಭೆ ಅನುಮತಿ ನೀಡಿಲ್ಲ
ಗುಂಡಿಬೈಲು ರಸ್ತೆ ವಿಭಜಕ ತೆರವಿಗೆ ಸಂಬಂಧಿಸಿ ನಗರಸಭೆ ಯಾರಿಗೂ ಅನುಮತಿ ನೀಡಿಲ್ಲ. ಇದನ್ನು ನಗರಸಭೆ ವತಿಯಿಂದ ಮಾಡಿಲ್ಲ. ಈ ಬಗ್ಗೆ ದೂರು ಸ್ವೀಕಾರಗೊಂಡಿದ್ದು, ವಿಭಜಕ ತೆರವುಗೊಳಿಸಿದ ಖಾಸಗಿ ವ್ಯಕ್ತಿ ಅವರಿಗೆ ನೋಟಿಸ್ ನೀಡಿದ್ದೇವೆ. ಮುಂದೆ ಈ ಬಗ್ಗೆ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಸಂಚಾರ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಪ್ರತ್ಯೇಕವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ.
– ಆರ್. ಪಿ. ನಾಯ್ಕ, ಪೌರಾಯುಕ್ತರು, ಉಡುಪಿ ನಗರಸಭೆ.