ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿಗೆ ತಿಲಕ್‌ನಗರ ಠಾಣೆ ಪೊಲೀಸರು ಬಂದೂಕಿನ ಮೂಲಕ ಉತ್ತರ ನೀಡಿದ್ದಾರೆ. ತಬ್ರೇಜ್ ಪಾಷಾ ಗುಂಡೇಟು ತಿಂದ ರೌಡಿ. ಜಯನಗರ 9ನೇ ಬ್ಲಾಕ್‌ನ ಬಾರ್ ಒಂದರಲ್ಲಿ ಭಾನುವಾರ ಮಧ್ಯಾಹ್ನ ನಡೆದಿದ್ದ ಕಿಶೋರ್ ಗೌಡ (23) ಕೊಲೆ ಪ್ರಕರಣ ಆರೋಪಿಗಳ ಪತ್ತೆಗೆ ತಿಲಕ್‌ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದರು. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಆರೋಪಿ ತಬ್ರೇಜ್ ಬನ್ನೇರುಘಟ್ಟ ರಸ್ತೆಯಲ್ಲಿ ಆಟೋದಲ್ಲಿ ತೆರಳುತ್ತಿದ್ದ.
ಈ ವೇಳೆ ಅಲ್ಲಿಗೆ ಪೊಲೀಸರ ತಂಡ ಅಲ್ಲಿಗೆ ತೆರಳಿತ್ತು. ಪೊಲೀಸ್ ಪೇದೆ ಆನಂದ್ ತಬ್ರೇಜ್‌ನನ್ನು ಹಿಡಿಯಲು ಹೋದಾಗ ಆರೋಪಿ, ಆನಂದ್ ಅವರ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಹೀಗಾಗಿ ಸ್ಥಳದಲ್ಲಿದ್ದ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್ ತಮ್ಮ ಸರ್ವಿಸ್ ರಿವಾಲ್ವರ್‌ನಿಂದ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ತಬ್ರೇಜ್, ಇನ್ಸ್‌ಪೆಕ್ಟರ್ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ.
ಹೀಗಾಗಿ ಪ್ರಾಣ ರಕ್ಷಣೆ ಸಲುವಾಗಿ ಇನ್ಸ್‌ಪೆಕ್ಟರ್ ಅನಿಲ್‌ಕುಮಾರ್, ತಬ್ರೇಜ್ ಬಲಗಾಲಿಗೆ ಗುಂಡು ಹೊಡೆದಿದ್ದಾರೆ. ಗುಂಡೇಟಿನಿಂದ ಕುಸಿದು ಬಿದ್ದ ಆತನನ್ನು ಬಂಧಿಸಿದ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಶೋರ್ ಕೊಲೆಯಲ್ಲಿ ಭಾಗಿಯಾಗಿದ್ದ ಇತರೆ ಆರೋಪಿಗಳಾದ ಲೈಂಗಿಕ ಅಲ್ಪಸಂಖ್ಯಾತೆ ಅಪರ್ಣಾ, ಮಧು, ಆನಂದ್‌ನನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.
ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಕೊಂದರು: ಹಣಕಾಸು ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಕಿಶೋರ್ ಗೌಡ ಭೈರಸಂದ್ರದಲ್ಲಿ ಕುಟುಂಬದ ಜತೆ ವಾಸವಿದ್ದರು. ಭಾನುವಾರ ಮಧ್ಯಾಹ್ನ ಸ್ನೇಹಿತ ಯೂಸೂಫ್ ಜತೆ ಜಯನಗರ 9ನೇ ಬ್ಲಾಕ್‌ನಲ್ಲಿರುವ ಈಸ್ಟ್‌ಎಂಡ್ ಬಾರ್‌ಗೆ ತೆರಳಿದ್ದರು. ಕಿಶೋರ್ ಹಾಗೂ ಯೂಸೂಫ್ ಕುಳಿತಿದ್ದ ಟೇಬಲ್ ಸಮೀಪವೇ ಮತ್ತೂಂದು ಟೇಬಲ್‌ನಲ್ಲಿ ಕುಳಿತು ಮದ್ಯ ಸೇವಿಸುತ್ತಿದ್ದ ತಬ್ರೇಜ್, ಅಪರ್ಣಾ ಹಾಗೂ ಇತರರು, ಜೋರಾಗಿ ಗಲಾಟೆ ಮಾಡುತ್ತಿದ್ದರು. ಇದನ್ನು ಗಮನಿಸಿದ ಕಿಶೋರ್, ಗಲಾಟೆ ಮಾಡದಂತೆ ತಿಳಿಸಿದ್ದಾನೆ.
ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ತಬ್ರೇಜ್ ಚಾಕುವಿನಿಂದ ಕಿಶೋರ್ ಹೊಟ್ಟೆ ಹಾಗೂ ಕತ್ತಿನ ಭಾಗಕ್ಕೆ ಇರಿದಿದ್ದಾನೆ. ಅಪರ್ಣಾ ಯೂಸೂಪ್ ಮೇಲೆ ಹಲ್ಲೆಗೆ ಮುಂದಾಗಿದ್ದು ಯೂಸೂಪ್ ಅಲ್ಲಿಂದ ಓಡಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಕಿಶೋರ್‌ನನ್ನು ಬಾರ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಕಿಶೋರ್ ಸಾವಿನ ಕುರಿತು ಯೂಸೂಫ್ ನೀಡಿದ ದೂರು ಆಧರಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಯಿತು. ಜತೆಗೆ, ಕೊಲೆ ನಡೆದ ದೃಶ್ಯಗಳು ಬಾರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.
ಅವುಗಳ ಆಧಾರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಚಾಮರಾಜಪೇಟೆ ಹಾಗೂ ತಿಲಕ್‌ನಗರ ಪೊಲೀಸ್ ಠಾಣೆಗಳಲ್ಲಿ ಡಕಾಯಿತಿ, ರಾಬರಿ, ಹಲ್ಲೆ ಸೇರಿದಂತೆ ಒಟ್ಟು 13 ಅಪರಾಧ ಪ್ರಕರಣಗಳಲ್ಲಿ ತಬ್ರೇಜ್ ಆರೋಪಿಯಾಗಿದ್ದಾನೆ. ಅಪರ್ಣಾ ಹಾಗೂ ಇತರ ಆರೋಪಿಗಳ ಜತೆ ತಬ್ರೇಜ್, ಕೆ.ಆರ್. ಮಾರುಕಟ್ಟೆಯಲ್ಲಿ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.