Advertisement

ಗುಲ್ವಾಡಿ: ಶತಮಾನ ಕಂಡ ಶಾಲೆ ಶಿಕ್ಷಕರಿಲ್ಲದೆ ಮುಚ್ಚುವ ಭೀತಿ

03:58 PM Dec 07, 2022 | Team Udayavani |

ಗುಲ್ವಾಡಿ: ಶತಮಾನದ ಇತಿಹಾಸವನ್ನು ಹೊಂದಿರುವ ಅನುದಾನಿತ ಶಾಲೆಗೆ ಸರಕಾರದ ನಿರ್ಲಕ್ಷ್ಯದಿಂದಾಗಿ ಮಕ್ಕಳಿದ್ದರೂ, ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಗುಲ್ವಾಡಿಯ ಸರ್ವೋದಯ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ ಕಳೆದ 25 ವರ್ಷಗಳಿಂದ ಖಾಯಂ ಶಿಕ್ಷಕರ ನೇಮಕಾತಿಯೇ ಆಗದಿರುವುದರಿಂದ ಈಗ ಮುಚ್ಚುವ ಭೀತಿ ಎದುರಾಗಿದೆ.

Advertisement

ಗುಲ್ವಾಡಿಯ ಸರ್ವೋದಯ ಅನುದಾನಿತ ಹಿ.ಪ್ರಾ. ಶಾಲೆಯಲ್ಲಿ 202-5 ವರ್ಷಗಳಿಂದ ಹಂತ-ಹಂತವಾಗಿ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತ ಬಂದಿದ್ದು, ಈಗ ಇಲ್ಲಿ ಒಬ್ಬರು ಮಾತ್ರ ಖಾಯಂ ಶಿಕ್ಷಕರಿದ್ದಾರೆ. ಮುಂದಿನ ಜೂನ್‌ನಲ್ಲಿ ಅವರು ಸಹ ನಿವೃತ್ತಿಯಾಗಲಿದ್ದು, ಆ ಬಳಿಕ ಇಲ್ಲಿ ಖಾಯಂ ಶಿಕ್ಷಕರೇ ಇರುವುದಿಲ್ಲ. ಇದರಿಂದ ಶಾಲೆಯ ಮುಂದಿನ ಭವಿಷ್ಯದ ಬಗ್ಗೆ ಪೋಷಕರು, ಊರವರಿಗೆ ಆತಂಕ ಶುರುವಾಗಿದೆ.

115 ವರ್ಷಗಳ ಇತಿಹಾಸ
1908 ರಲ್ಲಿ ಅಂದರೆ 115 ವರ್ಷಗಳ ಹಿಂದೆ ಗುಲ್ವಾಡಿಯಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯೇ ಸರ್ವೋದಯ ಅನುದಾನಿತ ಶಾಲೆ. ಈವರೆಗೆ ಇಲ್ಲಿ ಸಹಸ್ರಾರು ಮಂದಿ ವಿದ್ಯಾರ್ಜನೆಗೈದಿದ್ದಾರೆ. ವೈದ್ಯರು, ಕೆಎಎಸ್‌ ಅಧಿಕಾರಿಗಳು, ಸಾಹಿತಿಗಳು, ಎಂಜಿನಿಯರ್‌ಗಳು, ವಕೀಲರು, ಪತ್ರಕರ್ತ ದಿ| ಸಂತೋಷ್‌ ಕುಮಾರ್‌ ಗುಲ್ವಾಡಿಯವರಂತಹ ಅನೇಕ ಮಂದಿ ಮಹನೀಯರ ಬದುಕು ರೂಪಿಸಿದ ಶಾಲೆಯಿದು.

82 ಮಂದಿ ವಿದ್ಯಾರ್ಥಿಗಳು
ಹಿಂದೆ ಇಲ್ಲಿ ಶೈಕ್ಷಣಿಕ ವರ್ಷದಲ್ಲಿ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈಗ ಈ ಸಂಖ್ಯೆ 82ಕ್ಕೆ ಇಳಿದಿದೆ. ಇದಕ್ಕೆ ಮುಖ್ಯ ಕಾರಣ ಖಾಯಂ ಶಿಕ್ಷಕರ ಸಂಖ್ಯೆ ಕಡಿಮೆಯಾಗಿರುವುದು. ಸರಕಾರದಿಂದ ನೇಮಕ ಮಾಡಿರುವ 6-7 ಮಂದಿ ಖಾಯಂ ಶಿಕ್ಷಕಕರು ಹಿಂದೆ ಇಲ್ಲಿದ್ದರು. ಆದರೆ ಈಗ ಈ ಸಂಖ್ಯೆ ಒಂದಕ್ಕಿಳಿದಿದೆ. ಇವರೊಂದಿಗೆ ಈಗ ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿಗಳು, ಊರವರ ವತಿಯಿಂದ ನಾಲ್ವರು ಗೌರವ ಶಿಕ್ಷಕರಿದ್ದಾರೆ.

ಜಿಲ್ಲೆಯ 100ಕ್ಕೂ ಮಿಕ್ಕಿ ಶಾಲೆಗಳಲ್ಲಿ ಸಮಸ್ಯೆ
ಇದು ಕೇವಲ ಗುಲ್ವಾಡಿಯ ಶಾಲೆಯೊಂದರ ಕಥೆಯಲ್ಲ. ಕಳೆದ 20 ವರ್ಷಗಳಿಂದ ಸರಕಾರದಿಂದ ಅನುದಾನಿತ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ನಡೆದಿಲ್ಲ. ಇದರಿಂದ ರಾಜ್ಯದಲ್ಲಿರುವ 3,700ಕ್ಕೂ ಅಧಿಕ ಅನುದಾನಿತ ಶಾಲೆಗಳಲ್ಲಿ 7 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ಉಡುಪಿ ಜಿಲ್ಲೆಯಲ್ಲಿ 167 ಅನುದಾನಿತ ಶಾಲೆಗಳಿದ್ದು, ಅವುಗಳಲ್ಲಿ ಬಹುತೇಕ ಕಡೆಗಳಲ್ಲಿ ಶಿಕ್ಷಕರ ಕೊರತೆಯಿದೆ. 1998ರಿಂದೀಚೆಗೆ ನೇಮಕಾತಿ ಆಗದೆ ಈಗ ಈ ಶಾಲೆಗಳಲ್ಲಿರುವ ಬಹುತೇಕ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿದ್ದು, ಅವರೆಲ್ಲ ನಿವೃತ್ತಿಯಾದರೆ ಈ ಶಾಲೆಗಳ ಭವಿಷ್ಯವೇನು ಅನ್ನುವ ಪ್ರಶ್ನೆ ಈಗ ಉದ್ಭವಗೊಂಡಿದೆ.

Advertisement

ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ
ಬೈಂದೂರು ವಲಯದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗ ಗುಲ್ವಾಡಿಯ ಶಾಲೆಗೆ ಸಂಬಂಧಪಟ್ಟವರು ಮನವಿ ಕೊಟ್ಟರೆ ಅದನ್ನು ಇಲಾಖೆಯ ಆಯುಕ್ತರ ಗಮನಕ್ಕೂ ತರಲಾಗುವುದು.
– ಮಂಜುನಾಥನ್‌ ಎಂ.ಜಿ., ಶಿಕ್ಷಣಾಧಿಕಾರಿ,
ಬೈಂದೂರು ಕ್ಷೇತ್ರ

ಸರಕಾರಿ ಶಾಲೆಯಾಗಿಸಲಿ
ಇಲ್ಲಿನ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಒಳ್ಳೆಯದಿದೆ. ಗ್ರಾಮೀಣ ಭಾಗದ ಮಾತ್ರವಲ್ಲದೆ ಬಡ, ಸಾಮಾನ್ಯ ವರ್ಗದ ಮಕ್ಕಳೇ ಹೆಚ್ಚಾಗಿ ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಕರ ಕೊರತೆಯಿಂದ ಸಮಸ್ಯೆಯಾಗುತ್ತಿದೆ. ಇದ್ದ ಒಬ್ಬರು ನಿವೃತ್ತಿಯಾದರೆ ಕಷ್ಟವಾಗಲಿದೆ. ಶಾಲೆಯ ಜಾಗ ಸರಕಾರದ ಹೆಸರಲ್ಲಿದ್ದು, ಇದನ್ನು ಸರಕಾರಿ ಶಾಲೆಯಾಗಿ ಮಾರ್ಪಾಡು ಮಾಡಿದರೆ ಬಡ ವರ್ಗದ ಮಕ್ಕಳಿಗೆ ಅನುಕೂಲವಾಗಲಿದೆ.
– ಸುಧೀಶ್‌ ಕುಮಾರ್‌ ಶೆಟ್ಟಿ, ಗುಲ್ವಾಡಿ ಗ್ರಾ.ಪಂ.
ಅಧ್ಯಕ್ಷ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ

 ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next