Advertisement
2018ರಲ್ಲಿ ಮಡಿಕೇರಿ ಭಾಗದಲ್ಲಿ ಉಂಟಾದ ಭೂ ಕುಸಿತದಿಂದ ಗುಳಿಕಾನ ಭಾಗದಲ್ಲೂ ನೆಲ ಬಿರುಕು ಬಿಟ್ಟಿತ್ತು. ಈ ವೇಳೆ ಗುಳಿಕಾನ ಪ್ರದೇಶ ವಾಸಕ್ಕೆ ಯೋಗ್ಯವಲ್ಲ ವರದಿ ಆಧಾರಿತವಾಗಿ ಅಪಾಯಕಾರಿ ಎನ್ನುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಲ್ಲಿನ ನಿವಾಸಿಗಳಿಗೆ ಕಂದಾಯ ಇಲಾಖೆ ಬದಲಿ ಜಾಗ ಗುರುತಿಸಲು ಪ್ರಯತ್ನ ಆರಂಭಿಸಿತ್ತು. ಅಂದಿನಿಂದ ಇಂದಿನವರೆಗೂ ಬದಲಿ ಜಾಗ ನೀಡುವುದಕ್ಕೆ ಸಾಧ್ಯವಾಗಿಲ್ಲ.
Related Articles
Advertisement
ಮಳೆ ಬರುವ ಸಂದರ್ಭದಲ್ಲಿ ಅಲ್ಲಿನ ಜನ ಜೀವ ಕೈಯಲ್ಲಿ ಹಿಡಿದು ದಿನ ಕಳೆಯುತ್ತಿದ್ದಾರೆ. ಇತ್ತೀಚೆಗೆ ಸಂಭವಿಸಿದ ಭೂಕಂಪನದ ಅನುಭವ ಗುಳಿಕಾನದಲ್ಲೂ ಅನುಭವಕ್ಕೆ ಬಂದಿತ್ತು. ಕೆಲವು ದಿನಗಳ ಹಿಂದೆ ಸುರಿದ ಬಾರೀ ಮಳೆ, ಭೂ ಕುಸಿತಕ್ಕೆ ಆ ಭಾಗಕ್ಕೆ ಸಂಪರ್ಕಿಸುವ ಸೇತುವೆಯೂ ತುಂಡಾಗಿದ್ದು,. ತಾತ್ಕಾಲಿಕ ಪಾಲ ನಿರ್ಮಿಸಲಾಗಿದೆ.
ನಾಲ್ಕು ವರ್ಷಗಳಾಗುತ್ತ ಬಂದರೂ ಶಾಶ್ವತ ಪರಿಹಾರ ಹಾಗೂ ಶಾಶ್ವತ ನಿವೇಶನಕ್ಕೆ ಜಾಗ ಗುರುತಿಸಲು ಕಂದಾಯ ಇಲಾಖೆ ಸಫಲವಾಗದಿರುವ ಬಗ್ಗೆ ಅಲ್ಲಿನ ನಿವಾಸಿಗಳು ಹಾಗೂ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಕ್ಕಳು, ವೃದ್ಧರು ಸಹಿತ ಗುಳಿಕಾನದ ಜನತೆಗೆ ಶೀಘ್ರ ಮನೆ ನಿರ್ಮಿಸಲು ಸೂಕ್ತ ಜಾಗ ಗುರುತಿಸಿ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸಂಬಂಧಿಸಿದವರು ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅರ್ಜಿಗಳಿಗೆ ಬೆಲೆ ಇಲ್ಲ
2018ರಿಂದ ಇಂದಿನವರೆಗೂ ಬದಲಿ ಮನೆ ನಿರ್ಮಾಣಕ್ಕೆ ಜಾಗ ಅಂತಿಮಗೊಂಡಿಲ್ಲ. ನಮ್ಮ ಅರ್ಜಿಗಳಿಗೆ ಇನ್ನೂ ಬೆಲೆ ಸಿಕ್ಕಿಲ್ಲ. ಆತಂಕದಿಂದಲೇ ಬದುಕು ನಡೆಸುವಂತಾಗಿದೆ ಎಂದು ಗುಳಿಕಾನದ ನಿವಾಸಿಗಳು ಪ್ರತಿಕ್ರಿಯಿಸಿದ್ದಾರೆ.
ತಜ್ಞರಿಂದ ಪರಿಶೀಲನೆ
ನಾಲ್ಕು ವರ್ಷಗಳ ಹಿಂದೆ ಸಂಭವಿಸಿದ ಭೂ ಕುಸಿತ ಬಗ್ಗೆ ಪರಿಶೀಲನೆಗೆ ಜುಲೈ ಮೊದಲ ವಾರದಲ್ಲಿ ಅಂದರೆ ನಾಲ್ಕು ವರ್ಷದ ಬಳಿಕ(ಭೂ ಕಂಪನ ನಡೆದ ಬಳಿಕ)ಭೂ ವಿಜ್ಞಾನಿಗಳು ಹಾಗೂ ಗಣಿ ಇಲಾಖೆಯವರು ಆಗಮಿಸಿದ್ದರು. ಗುಡ್ಡದ ಭಾಗಕ್ಕೆ ತೆರಳಿದ ತಂಡ ಅಲ್ಲಿನ ಜನರಿಂದ ಮಾಹಿತಿ ಪಡೆದಿದ್ದರು. ಕೆಲವು ದಿನಗಳ ಹಿಂದೆ ಸಂಭವಿಸಿದ ಭೂ ಕುಸಿತದಿಂದ ಗುಳಿಕಾನ ಪ್ರದೇಶದ ಸಮೀಪದಲ್ಲೇ ನೂರಾರು ಬೃಹತ್ ಮರಗಳು ಬಂದು ಸಿಲುಕಿಕೊಂಡಿವೆ ಎನ್ನುತ್ತಾರೆ ಅಲ್ಲಿನ ಜನರು. ಈ ವರ್ಷವೂ ಅಲ್ಲಿನ ನಿವಾಸಿಗಳನ್ನು ಕಲ್ಮಕಾರು ಶಾಲೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಜಾಗ ಸಿಗುತ್ತಿಲ್ಲ: ಗುಳಿಕಾನದ ಜನರಿಗೆ ಮನೆ ನಿರ್ಮಾಣಕ್ಕೆ ಕಲ್ಮಕಾರಿನ ಸುತ್ತಮುತ್ತ ಯಾವುದೇ ಸರಕಾರಿ ಜಾಗ ಸಿಗುತ್ತಿಲ್ಲ. ಸಿದ್ಧಪಡಿಸಿದ ಎರಡು-ಮೂರು ಫೈಲ್‌ಗಳಿಗೂ ಅರಣ್ಯ ಇಲಾಖೆದ್ದು ಎಂದು ತೋರಿಸುತ್ತಿದೆ. ಜಾಗ ಹುಡುಕುವ ಕಾರ್ಯ ನಡೆಯುತ್ತಿದೆ. ಒಂದು ಫೈಲ್ ಎಸಿ ಕಚೇರಿಗೆ ಕಳುಹಿಸಲಾಗಿದೆ. ಆದಷ್ಟು ಶೀಘ್ರ ಜಾಗ ಗುರುತಿಸಲು ಪ್ರಯತ್ನಿಸಲಾಗುವುದು. -ಅನಿತಾ ಲಕ್ಷ್ಮೀ, ತಹಶೀಲ್ದಾರ್ ಸುಳ್ಯ ದಯಾನಂದ ಕಲ್ನಾರ್