Advertisement

ಗುಳೇದಗುಡ್ಡ: ಜಾಕ್‌ವೆಲ್‌ನಿಂದ ನೀರೆತ್ತುವ ಮೋಟಾರ್‌ ಬಂದ್‌

05:43 PM May 24, 2023 | Team Udayavani |

ಗುಳೇದಗುಡ್ಡ: ಆಲಮಟ್ಟಿಯಲ್ಲಿನ ಜಾಕ್‌ವೆಲ್‌ನಲ್ಲಿ ನೀರು ಎತ್ತುವ ಮೋಟಾರ್‌ ಬಂದ್‌ ಆಗಿದ್ದರಿಂದ ನೀರಿನ ಸಮಸ್ಯೆ ಎದುರಾಗಿದ್ದು, ಇದರಿಂದ ಜನರು ನೀರಿಗಾಗಿ ಪರಿತಪಿಸುವಂತಾಗಿದೆ. ಜಾಕವೆಲ್‌ನಲ್ಲಿ ಹೆಚ್ಚುವರಿ ಮೋಟಾರ್‌ ಇದ್ದರೂ ದುರಸ್ತಿ ಮಾಡಿಸಲು ಮುಂದಾಗದಿರುವುದರಿಂದ ಗುಳೇದಗುಡ್ಡ-ಅಮೀನಗಡ, ಕಮತಗಿ ಪಟ್ಟಣಗಳಿಗೆ ನೀರಿನ ಸಮಸ್ಯೆ ಎದುರಾಗಿದೆ.

Advertisement

ಆಲಮಟ್ಟಿಯಿಂದ ಗುಳೇದಗುಡ್ಡ ಪುರಸಭೆ ಹಾಗೂ ಅಮೀನಗಡ, ಕಮತಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಈ ಜಾಕವೆಲ್‌ ಮೂರು ಪಟ್ಟಣಗಳ ಸ್ಥಳೀಯ ಸಂಸ್ಥೆಗೆ ಬರುತ್ತದೆ. ಮೂರು ದಿನಗಳಿಂದ ನೀರು ಬರದ ಕಾರಣ ನೀರಿಗಾಗಿ ಜನರು ನಿತ್ಯ ಸರದಿಯಲ್ಲಿ ನಿಲ್ಲುವಂತಾಗಿದೆ.

ಬೇರಿಂಗ್‌ ಜಾಮ್‌: ಆಲಮಟ್ಟಿಯ ಜಾಕವೆಲ್‌ನಲ್ಲಿನ ಮೋಟಾರ್‌ದಲ್ಲಿ ಒಟ್ಟು 16 ಪೈಪ್‌ಗ್ಳಿದ್ದು, ಅವುಗಳು ನಿತ್ಯ ನೀರು ಸರಬರಾಜು ಮಾಡಲು ಬಳಕೆಯಾಗಿ ಅದರಲ್ಲಿದ್ದ ಬೇರಿಂಗ್‌ ಜಾಮ್‌ ಆಗಿದ್ದು, ಮೋಟರ್‌ ಅಲುಗಾಡುತ್ತಿದೆ. ಒಂದು ಪೈಪ್‌ ಹೊರತುಪಡಿಸಿ ಎಲ್ಲ ಪೈಪ್‌ ತೆರವುಗೊಳಿಸಲಾಗಿದೆ. ಅದರ ಬೇರಿಂಗ್‌ ಜಾಮ್‌ ಆಗಿದ್ದರಿಂದ ಆ ಪೈಪ್‌ ಹೊರಬರುತ್ತಿಲ್ಲ. ಬುಧವಾರ ಬೇರೆ ಕಡೆಯಿಂದ ಸಿಬ್ಬಂದಿ ಬಂದು ಮೋಟರ್‌ ದುರಸ್ತಿ ಕೈಗೊಳ್ಳಲಿದ್ದಾರೆ. ಬಳಿಕ ನೀರು ಬಿಡಲಾಗುವುದು ಎಂದು
ಅಧಿಕಾರಿಗಳು ತಿಳಿಸಿದ್ದಾರೆ.

ಆಲಮಟ್ಟಿ ಜಾಕವೆಲ್‌ನಲ್ಲಿ ಒಂದು ಮೋಟಾರ್‌ ರಿಪೇರಿಗೆ ಬಂದರೂ ಇನ್ನೊಂದು ಮೋಟಾರ್‌ ಕಾಯ್ದಿರಿಸಲಾಗಿದೆ. ಆದರೆ, ಆ ಮೋಟಾರ್‌ನ್ನು ಒಂದು ತಿಂಗಳಿಂದ ದುರಸ್ತಿ ಮಾಡಿಸಲು ಮುಂದಾಗಿಲ್ಲ.

ನೀರಿಗಾಗಿ ಸರದಿ: ಪಟ್ಟಣದಲ್ಲಿ ಕಳೇದ ಮೂರು ದಿನಗಳಿಂದ ನೀರಿನ ಸಮಸ್ಯೆ ಉಂಟಾಗಿದೆ. ಆಲಮಟ್ಟಿಯಿಂದ ನೀರು ಪೂರೈಕೆಯಾದಾಗಿನಿಂದ ನಾಲ್ಕು ವರ್ಷಗಳಿಂದ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಕಳೆದ ಒಂದು ವರ್ಷದಲ್ಲಿ 3-4 ಬಾರಿ ಈ ಸಮಸ್ಯೆ ಉಂಟಾಗಿದೆ. ಇದರಿಂದ ಜನರು ಪಟ್ಟಣದ ಹಲವು ಕಡೆಗಳಲ್ಲಿ ನೀರು ತುಂಬಲು ಸರದಿಯಲ್ಲಿ ನಿಲ್ಲುವಂತಾಗಿದೆ. ಪಟ್ಟಣದ ಹೊಸ ಅಂಬಾಭವಾನಿ ದೇವಸ್ಥಾನದ ಹತ್ತಿರ, ಪುರಸಭೆ ನಾನಾ ಕಡೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ, ಬೋರ್‌ವೆಲ್‌ ವ್ಯವಸ್ಥೆ ಹೊಂದಿರುವ ಮನೆಗಳ ಮುಂದೆ ನೀರು ತುಂಬಲು ಜನರು ಸರದಿಯಲ್ಲಿ ನಿಲ್ಲುತಿರುವುದು ಕಂಡು ಬಂದಿತು. ಪಟ್ಟಣದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದರಿಂದ ಹಲವು ಜನರು ಟ್ಯಾಂಕರ್‌ಗೆ ಮೊರೆ ಹೋಗಿದ್ದರಿಂದ ಟ್ಯಾಂಕರ್‌ಗಳಿಗೂ ಬೇಡಿಕೆಬಂದಿದ್ದು, ಹೆಚ್ಚಿನ ಜನರು ಮೋಟರ್‌ಗಳಿಂದ ನೀರು ತರಿಸಿಕೊಳ್ಳುತ್ತಿರುವುದು ಕಂಡು ಬಂದಿತು.

Advertisement

ಮೂರು ದಿನಗಳಿಂದ ರಿಪೇರಿ: ಆಲಮಟ್ಟಿಯಲ್ಲಿ ಮೋಟರ್‌ ರಿಪೇರಿ ಮಾಡಲು ಪುರಸಭೆ ಮುಖ್ಯಾಧಿಕಾರಿ ನಬಿ ಎಂ.ಕಲಾದಗಿ, ಪುರಸಭೆ ಸಿಬ್ಬಂದಿ ಮೂರು ದಿನಗಳಿಂದ ಆಲಮಟ್ಟಿಯಲ್ಲಿಯೇ ಇದ್ದು ದುರಸ್ತಿ ಮಾಡುತ್ತಿದ್ದಾರೆ.

ಕಳೆದ ಮೂರು ದಿನಗಳಿಂದ ಆಲಮಟ್ಟಿಯಲ್ಲಿಯೇ ನಾನು ಮತ್ತು ನಮ್ಮ ಸಿಬ್ಬಂದಿ ಇದ್ದು , ಮೋಟಾರ್‌ ರಿಪೇರಿ ಮಾಡುತ್ತಿದ್ದೇವೆ. ಬೇರಿಂಗ್‌ ಜಾಮ್‌ ಆಗಿದ್ದರಿಂದ ಮೋಟರ್‌ ರಿಪೇರಿ ತಡವಾಗುತ್ತಿದೆ. ಮಂಗಳವಾರ ರಾತ್ರಿ ಇಲ್ಲವೇ ಬುಧವಾರ ಬೆಳಿಗ್ಗೆ ಮೋಟಾರ್‌ ರಿಪೇರಿಯಾಗುವ ನೀರಿಕ್ಷೆಯಿದ್ದು, ಮೋಟಾರ್‌ ದುರಸ್ತಿಯಾದ ಕೂಡಲೇ ನೀರು ಪೂರೈಸಲಾಗುವುದು.
*ಎನ್‌.ಎಂ.ಕಂದಗಲ್ಲ,
ಮುಖ್ಯಾಧಿಕಾರಿ ಗುಳೇದಗುಡ್ಡ ಪುರಸಭೆ

ಹೆಚ್ಚುವರಿ ಇರುವ ಮೋಟಾರ್‌ ರಿಪೇರಿಗೆ 4 ಲಕ್ಷ ಹಣವನ್ನು ತೆಗೆದಿರಿಸಿದ್ದೇವೆ. ನಾವು ಮೋಟಾರ್‌ ರಿಪೇರಿ ಮಾಡಿಸಲು ಸಿದ್ಧರಿದ್ದೇವೆ. ಅಲ್ಲದೇ ಕೋಟೇಶನ್‌ ಗುಳೇದಗುಡ್ಡ ಪುರಸಭೆಯವರು ತೆಗೆದುಕೊಂಡಿದ್ದಾರೆ. ಒಂದು ವಾರದ ಹಿಂದೆಯು ಮಾತಾಡಿದ್ದೇವೆ. ರಿಪೇರಿ ಮಾಡಿಸುತ್ತೇವೆ.
ಮಹೇಶ ನೀಡಶೇಶಿ, ಮುಖ್ಯಾಧಿಕಾರಿಗಳು,
ಅಮೀನಗಡ ಪಟ್ಟಣ ಪಂಚಾಯಿತಿ

*ಮಲ್ಲಿಕಾರ್ಜುನ ಕಲಕೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next