ಅಹ್ಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಶನಿವಾರ (ಡಿ.9) ನಡೆಯುತ್ತಿದ್ದು, 115 ವರ್ಷ ಪ್ರಾಯದ ವಯೋವೃದ್ಧೆ, ನವದಂಪತಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿ ಸುದ್ದಿಯಾಗಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಜಗತ್ತಿನ ಇತರ ಎಲ್ಲಾ ದೇಶಗಳಿಂದ ಭಿನ್ನ ಎನ್ನುವುದಕ್ಕೆಈ ಘಟನೆಗಳು ಸಾಕ್ಷಿ ಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತವರಿನಲ್ಲಿ ಮತದಾರರು ಉತ್ಸಾಹ ದಿಂದ ಮತದಾನ ಮಾಡುತ್ತಿದ್ದಾರೆ.
ರಾಜ್‌ಕೋಟ್‌ನ ಉಪ್ಲೇಟಾದಲ್ಲಿ 115 ರ ಹರೆಯದ ಅಜಿ ಬೆಹನ್ ಅವರು ಕುಟುಂಬ ಸದಸ್ಯರೊಡನೆ ಬಂದು ಮತ ಚಲಾಯಿಸಿ ಯುವ ಮತದಾರರಿಗೆ ಆದರ್ಶಪ್ರಾಯವಾದರು.
ಭರೂಚ್‌ನಲ್ಲಿ ನವ ವಿವಾಹಿತ ಜೋಡಿ ಮದುವೆ ಕಾರ್ಯಕ್ರಮದ ಸಂಪ್ರದಾಯಗಳನ್ನು ಬದಿಗೊತ್ತಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದಾರೆ. ಪ್ರತಿಯೊಬ್ಬ ಮತದಾರನು ತನ್ನ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದ ಎಲ್ಲೆಡೆ ವಯೋವೃದ್ಧರಿಂದ ಹಿಡಿದು ಯುವಕ ಯುವತಿಯರು ಉತ್ಸಾಹದಿಂದ ಮತ ಚಲಾಯಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಮೊದಲ ಹಂತದ ಚುನಾವಣೆಯಲ್ಲಿ ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಪ್ರಾಂತ್ಯಗಳಿಗೆ ಒಳಪಟ್ಟ 89 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.