ಬೆಂಗಳೂರು: ಗುಜರಾತ್ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಆ ರಾಜ್ಯದಲ್ಲಿ ಪಕ್ಷಗಳ ಸೋಲು, ಗೆಲುವಿನ ಬಗ್ಗೆ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಇನ್ನಷ್ಟು ತೀವ್ರಗೊಂಡಿದ್ದು, ಸುಮಾರು 50 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ.
ಗುಜರಾತ್‌ನಲ್ಲಿ ಬಿಜೆಪಿ ಜಯ ಗಳಿಸುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆಯಾದರೂ ರಾಜ್ಯದಲ್ಲಿ ಕಾಂಗ್ರೆಸ್ ಪರ ಬೆಟ್ಟಿಂಗ್ ಕಟ್ಟುವವರಿಗೇನೂ ಕೊರತೆಯಿಲ್ಲ.
ಎರಡನೇ ಹಂತದ ಮತದಾನದ ಬಳಿಕ ಕಾಂಗ್ರೆಸ್ ಗುಜರಾತ್‌ನಲ್ಲಿ ಸರಳ ಬಹುಮತ ಗಳಿಸುತ್ತದೆ ಎಂದು ಬೆಟ್ಟಿಂಗ್ ಕಟ್ಟಿದವರ ಪ್ರಮಾಣದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯಾಗಿದೆ ಎನ್ನುತ್ತವೆ ಸತ್ತಾ ಬಜಾರ್ ಎಂದೇ ಕರೆಯುವ ಬೆಟ್ಟಿಂಗ್ ಮಾರುಕಟ್ಟೆ ಮೂಲಗಳು.
ರಾಜ್ಯದ ಸಣ್ಣ ಪಟ್ಟಣಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಆದರೆ, ದೊಡ್ಡ ಪಟ್ಟಣ ಮತ್ತು ಮಹಾನಗರಗಳ ಜನ ಬಿಜೆಪಿ ಗೆಲ್ಲುತ್ತದೆ ಎಂದು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಬೆಟ್ಟಿಂಗ್ ಕಟ್ಟುವವರ ಪೈಕಿ ಶೇ. 70ರಷ್ಟು ಮಂದಿ ಬಿಜೆಪಿ ಮೇಲೆಯೇ ಕಟ್ಟುತ್ತಿದ್ದಾರೆ. ಬಿಜೆಪಿ ಪರ ಬೆಟ್ಟಿಂಗ್ ಕಟ್ಟುವವರು ಹೆಚ್ಚಾಗಿದ್ದಾರೆ. ಪಕ್ಷಗಳ ಪರ ಬೆಟ್ಟಿಂಗ್ ಕಟುವವರ ಪೈಕಿ ಬಿಜೆಪಿ ಪರ ಒಂದು ರೂ. ಬೆಟ್ಟಿಂಗ್ ಕಟ್ಟಿದವರಿಗೆ ಆ ಪಕ್ಷ ಗೆದ್ದಾಗ 25 ಪೈಸೆ ಹೆಚ್ಚುವರಿ ಸಿಗುತ್ತದೆ. ಆದರೆ, ಕಾಂಗ್ರೆಸ್ ಪರ ಒಂದು ರೂ. ಬೆಟ್ಟಿಂಗ್ ಕಟ್ಟಿದರೆ ಈ ಮೊತ್ತ ದುಪ್ಪಟ್ಟಿಗಿಂತಲೂ ಹೆಚ್ಚಾಗುತ್ತದೆ ಎನ್ನುತ್ತಾರೆ ಹುಬ್ಬಳ್ಳಿಯ ಬುಕ್ಕಿ ಒಬ್ಬರು.
ಸಚಿನ್, ವಿರಾಟ್, ರೋಹಿತ್, ರೈನಾ!:
ಇದು ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿರುವ ಬುಕಿಗಳ ಹೆಸರು. ಮುಂಬೈ, ಅಹಮದಾಬಾದ್‌ಗಳಲ್ಲಿ ಕಾರ್ಯನಿರ್ವಹಿಸುವ ದೊಡ್ಡ ಬುಕ್ಕಿಗಳನ್ನು ಪ್ರತಿನಿಧಿಸುತ್ತಿರುವ ರಾಜ್ಯದ ಬುಕ್ಕಿಗಳು ಸಚಿನ್, ವಿರಾಟ್, ರೋಹಿತ್, ರೈನಾ… ಹೀಗೆ ಕ್ರಿಕೆಟಿಗರ ಹೆಸರಿನಲ್ಲಿ ಬೆಟ್ಟಿಂಗ್ ಪುಸ್ತಕಗಳನ್ನು ನಿರ್ವಹಣೆ ಮಾಡುತ್ತಾರೆ. ಬಹುತೇಕ ಮೊಬೈಲ್ ಮೂಲಕ ಬೆಟ್ಟಿಂಗ್ ನಡೆಯುತ್ತಿದ್ದು, ಇದರಿಂದಾಗಿ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ. ಆದರೂ ಸ್ಥಳೀಯ ಬುಕ್ಕಿಗಳ ಚಟುವಟಿಕೆ ಕುರಿತು ನಿಗಾ ವಹಿಸಲಾಗಿದೆ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.