Advertisement

ಪಕ್ಷೇತರರ ಮೊರೆ; ಹಿಮಾಚಲದಲ್ಲಿ ಅತಂತ್ರ ಫ‌ಲಿತಾಂಶದ ಸುಳಿವು

09:07 PM Dec 06, 2022 | Team Udayavani |

ನವದೆಹಲಿ: ಎಲ್ಲ ಮತಗಟ್ಟೆ ಸಮೀಕ್ಷೆಗಳೂ ಗುಜರಾತ್‌ ಚುನಾವಣೆಯಲ್ಲಿ ಬಿಜೆಪಿಗೆ ಪ್ರಚಂಡ ಬಹುಮತ ಸಿಗಲಿದೆ ಎಂದು ಹೇಳಿವೆ. ಆದರೆ, ಹಿಮಾಚಲಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪ್ರಬಲ ಪೈಪೋಟಿಯಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಯೇ ಹೆಚ್ಚು ಎಂದಿವೆ. ಸಮೀಕ್ಷೆಯ ವಿವರಗಳು ಬಹಿರಂಗವಾಗುತ್ತಿದ್ದಂತೆಯೇ, ದೇವಭೂಮಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Advertisement

ಫೋಟೋ ಫಿನಿಷ್‌ ಫ‌ಲಿತಾಂಶವೇನಾದರೂ ಬಂದರೆ, ಪಕ್ಷೇತರರನ್ನು ತಮ್ಮತ್ತ ಸೆಳೆಯಲು ಬಿಜೆಪಿ ಮತ್ತು ಕಾಂಗ್ರೆಸ್‌ ಮುಂದಾಗಿವೆ. ಈ ನಿಟ್ಟಿನಲ್ಲಿ ಸೋಮವಾರ ರಾತ್ರಿಯಿಂದಲೇ ಸಿದ್ಧತೆಗಳು ಆರಂಭವಾಗಿವೆ. ಬಹಿರಂಗವಾಗಿ ಹೇಳಿಕೆ ನೀಡುವಾಗ ಎರಡೂ ಪಕ್ಷಗಳು, “ಗೆಲ್ಲುವುದು ನಾವೇ’ ಎಂದು ಹೇಳುತ್ತಿದ್ದರೂ, ಒಳಗಿಂದೊಳಗೇ ಆತಂಕ ಮನೆ ಮಾಡಿದೆ. ಹೀಗಾಗಿ, ಅತಂತ್ರ ಸ್ಥಿತಿ ಎದುರಾದರೆ ಸ್ವತಂತ್ರ ಶಾಸಕರನ್ನು ಹೇಗೆ ತಮ್ಮತ್ತ ಒಲಿಸಿಕೊಳ್ಳಬೇಕು ಎಂಬ ಕುರಿತು ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಕಾರ್ಯತಂತ್ರ ರೂಪಿಸುತ್ತಿದ್ದಾರೆ.

ಹಿಮಾಚಲ ಸಿಎಂ ಜೈರಾಂ ಠಾಕೂರ್‌ ಅವರು ತಮ್ಮ ಕ್ಷೇತ್ರ ಸೆರಾಜ್‌ನಲ್ಲಿ ಉಳಿಯುವ ಬದಲು, ನೇರವಾಗಿ ಶಿಮ್ಲಾಗೆ ಹೋಗಿದ್ದಾರೆ. ಅಲ್ಲೇ ಕುಳಿತು ರಾಜಕೀಯ ಲೆಕ್ಕಾಚಾರ ಹಾಕಲಾರಂಭಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಸುರೇಶ್‌ ಕಶ್ಯಪ್‌ ಅವರು ದೆಹಲಿಗೆ ಧಾವಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇನ್ನೊಂದೆಡೆ, ಕಾಂಗ್ರೆಸ್‌ ಕೂಡ ಪಕ್ಷೇತರರಾಗಿ ಸ್ಪರ್ಧಿಸಿರುವ ತನ್ನ ಬಂಡಾಯ ನಾಯಕರನ್ನು ಸಂಪರ್ಕಿಸಿ ಮಾತುಕತೆ ಆರಂಭಿಸಿದೆ.

ಇದೇ ವೇಳೆ, ಸೋಮವಾರ ನಡೆದ ಗುಜರಾತ್‌ನ 2ನೇ ಹಂತದ ಮತದಾನದಲ್ಲಿ ಒಟ್ಟು ಶೇ.65.22ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. 2017ರ ಚುನಾವಣೆಯಲ್ಲಿ ಶೇ.69.99ರಷ್ಟು ಮತದಾನ ದಾಖಲಾಗಿತ್ತು.

ಮತಗಟ್ಟೆ ಸಮೀಕ್ಷೆಗಳ ವರದಿಯು ಗುಜರಾತಿಗರಿಗೆ ಪ್ರಧಾನಿ ಮೋದಿ ಮೇಲೆ ಪ್ರೀತಿ ಎಷ್ಟಿದೆ ಎಂಬುದನ್ನು ತೋರಿಸಿದೆ. ರಾಜ್ಯದಲ್ಲಿ ಆಮ್‌ ಆದ್ಮಿ ಪಕ್ಷ ಒಂದೇ ಒಂದು ಸ್ಥಾನದಲ್ಲೂ ಜಯ ಗಳಿಸುವುದಿಲ್ಲ.
– ಯಮಾಲ್‌ ವ್ಯಾಸ್‌, ಗುಜರಾತ್‌ ಬಿಜೆಪಿ ವಕ್ತಾರ

Advertisement

ಬಿಜೆಪಿ ಬಾಹುಳ್ಯದ ರಾಜ್ಯದಲ್ಲಿ ಹೊಸ ಪಕ್ಷವೊಂದು ಶೇ.15-20 ಮತಗಳನ್ನು ಪಡೆಯುತ್ತದೆ ಎಂದರೆ, ಅದು ಉತ್ತಮ ಸಾಧನೆಯೇ ಸರಿ. ಯಾವುದಕ್ಕೂ ಮತ ಎಣಿಕೆಯ ದಿನದವರೆಗೂ ಕಾಯೋಣ.
– ಅರವಿಂದ ಕೇಜ್ರಿವಾಲ್‌, ಆಪ್‌ ನಾಯಕ

ಸಮೀಕ್ಷೆಗಳ ಅಂದಾಜು ನಿಜವಾದರೆ, ಅದು ಕಾಂಗ್ರೆಸ್‌ ಪಕ್ಷಕ್ಕೆ ಅತ್ಯಂತ ನಿರಾಸೆಯ ಸಂಗತಿ. ವಿಭಜನೆಯ ರಾಜಕೀಯದಿಂದಷ್ಟೇ ಬಿಜೆಪಿ ಗೆಲ್ಲುತ್ತಿದೆ. ಜತೆಗೆ ಹಣ ಬಲವೂ ಕೆಲಸ ಮಾಡಿದೆ.
– ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ ನಾಯಕ

ಸುಳ್ಳು ಟ್ವೀಟ್‌: ಟಿಎಂಸಿ ವಕ್ತಾರ ವಶಕ್ಕೆ
ಪ್ರಧಾನಿ ಮೋದಿಗೆ ಸಂಬಂಧಿಸಿ ಸುಳ್ಳು ಮಾಹಿತಿಯಿರುವ ಟ್ವೀಟ್‌ವೊಂದನ್ನು ಬೆಂಬಲಿಸಿದ್ದ ಆರೋಪದಲ್ಲಿ ಟಿಎಂಸಿ ರಾಷ್ಟ್ರೀಯ ವಕ್ತಾರ ಸಾಕೇತ್‌ ಗೋಖಲೆ ಅವರನ್ನು ಗುಜರಾತ್‌ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. “ಮೊರ್ಬಿ ತೂಗುಸೇತುವೆ ದುರಂತದ ಬಳಿಕ ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲು 30 ಕೋಟಿ ರೂ. ವೆಚ್ಚ ಮಾಡಲಾಗಿತ್ತು ಎಂಬ ವಿಚಾರ ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ’ ಎಂದು ಬರೆಯಲಾಗಿದ್ದ ಪತ್ರಿಕೆಯ ಕ್ಲಿಪ್ಪಿಂಗ್‌ವೊಂದನ್ನು ಗೋಖಲೆ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ರಾಜಸ್ಥಾನದ ಜೈಪುರದಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಗೋಖಲೆ ಬಂಧನವನ್ನು ಖಂಡಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, “ಇದು ಪ್ರತೀಕಾರದ ಕ್ರಮ. ಪ್ರಧಾನಿ ಮೋದಿ ವಿರುದ್ಧ ಟ್ವೀಟ್‌ ಮಾಡಿದ್ದಕ್ಕಾಗಿ ಬಂಧನವೇ? ನನ್ನ ವಿರುದ್ಧವೂ ಜನ ಟ್ವೀಟ್‌ ಮಾಡುತ್ತಾರೆ’ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next