Advertisement

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

09:01 PM Dec 02, 2022 | Team Udayavani |

ಗಾಂಧಿನಗರ: ಸ್ವಾತ್ರಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಜತೆಗೆ ವರ್ಷಗಳು ಕೆಲಸ ಮಾಡಿದ ಕಾರಣ ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ ಬಂದಿದೆ. ಆ ಪಕ್ಷ ಎಂದೂ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರನ್ನು ತಮ್ಮವರೆಂದು ಸ್ವೀಕರಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

Advertisement

ಗುಜರಾತ್‌ ವಿಧಾನಸಭೆಯ ಎರಡನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಆನಂದ್‌ ಜಿಲ್ಲೆಯ ಸೋಜಿತ್ರಾ ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಭಾರತದ ಏಕತೆ ಕಾಂಗ್ರೆಸ್‌ಗೆ ಬೇಕಿರಲಿಲ್ಲ. ಅದು ಒಡೆದು ಆಳುವ ನೀತಿಯನ್ನು ಅನುಸರಿಸುತ್ತದೆ. ಪಟೇಲರು ಪ್ರತಿಯೊಬ್ಬರನ್ನು ಒಂದುಗೂಡಿಸುವ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಈ ಭಿನ್ನಾಭಿಪ್ರಾಯ ಕಾರಣದಿಂದ ಕಾಂಗ್ರೆಸ್‌ ಎಂದೂ ಪಟೇಲರನ್ನು ತಮ್ಮವರು ಎಂದುಕೊಳ್ಳಲಿಲ್ಲ,’ ಎಂದರು.

ಪಟೇಲರು ನಿಮಗೆ ಅಸ್ಪೃಶ್ಯರಾದರೇ?: “ಗುಜರಾತ್‌ನಲ್ಲಿ ಒಂದು ಸಮುದಾಯ, ಜಾತಿ ಮತ್ತು ಧರ್ಮೀಯರನ್ನು ಇನ್ನೊಬ್ಬರ ಮೇಲೆ ಎತ್ತಿಕಟ್ಟುವ ಕಾರ್ಯದಲ್ಲಿ ಕಾಂಗ್ರೆಸ್‌ ನಿರತವಾಗಿದೆ. ಪಟೇಲರ ಪ್ರತಿಮೆಯನ್ನು ಮೋದಿ ನಿರ್ಮಿಸಿದ ಒಂದೇ ಕಾರಣಕ್ಕಾಗಿ ಸ್ಥಳಕ್ಕೆ ಕಾಂಗ್ರೆಸ್‌ ನಾಯಕರು ಭೇಟಿ ನೀಡುತ್ತಿಲ್ಲ. ಈ ಒಂದೇ ಕಾರಣಕ್ಕೆ ಪಟೇಲರು ನಿಮಗೆ ಅಸ್ಪೃಶ್ಯರಾದರೇ?,’ ಎಂದು ಕಾಂಗ್ರೆಸ್‌ ಅನ್ನು ಮೋದಿ ಪ್ರಶ್ನಿಸಿದರು.

ನಿರ್ಮಾಣಕ್ಕೆ ಅಡ್ಡಿ: “ಸರ್ದಾರ್‌ ಸರೋವರ್‌ ಜಲಾಶಯ ನಿರ್ಮಾಣಕ್ಕೆ ಕಾಂಗ್ರೆಸ್‌ ಅಡ್ಡಿಪಡಿಸಿತು. ಕೊಟ್ಟ ಮಾತಿನಂತೆ ನಾವು ನರ್ಮದಾ ನದಿಯ ನೀರನ್ನು ಬನಸ್ಕಾಂತ ಪ್ರದೇಶದ ಜನರು ಮತ್ತು ಕೃಷಿ ಬಳಕೆಗೆ ಸರಬರಾಜು ಮಾಡುತ್ತಿದ್ದೇವೆ. ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ದೇಶಾದ್ಯಂತ ಕೈಬಿಟ್ಟಿದ್ದ 99 ನೀರಾವರಿ ಯೋಜನೆಗಳನ್ನು 1 ಲಕ್ಷ ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ ಪೂರ್ಣಗೊಳಿಸುತ್ತಿದೆ,’ ಎಂದು ಪ್ರಧಾನಿ ಮೋದಿ ಹೇಳಿದರು.

5 ಲಕ್ಷ ಹುದ್ದೆಗಳು ಭರ್ತಿ ಸ್ಥಗಿತ:
“ಶೇ.50ರಷ್ಟು ಉದ್ಯೋಗಗಳು ದಲಿತರು, ಬುಡಕಟ್ಟು ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪಾಲಿಗೆ ಹೋಗುವ ಹಿನ್ನೆಲೆಯಲ್ಲಿ ಗುಜರಾತ್‌ನ ಬಿಜೆಪಿ ಸರ್ಕಾರ 5 ಲಕ್ಷ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಲಿಲ್ಲ,’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ ಆರೋಪಿಸಿದರು.

Advertisement

ಗುಜರಾತ್‌ನ ಅರಾವಳಿ ಜಿಲ್ಲೆಯ ಎಸ್‌ಟಿ ಮೀಸಲಿನ ಭಿಲೋದಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ದಲಿತರು ಮತ್ತು ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ ಪ್ರಕರಣಗಳ ಸಂಖ್ಯೆಯಲ್ಲಿ ಶೇ.17ರಷ್ಟು ಏರಿಕೆಯಾಗಿದೆ,’ ಎಂದು ದೂರಿದರು.

ಶೇ.63.14ರಷ್ಟು ಮತದಾನ: ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.63.14ರಷ್ಟು ಮತದಾನವಾಗಿದೆ.

ಗುಜರಾತ್‌ ಚಿತ್ರಗಳು ಬಿಡುಗಡೆ
ಇಸ್ರೋ ಇತ್ತೀಚೆಗೆ ಉಡಾಯಿಸಿದ ಇಒಎಸ್‌-06 ಉಪಗ್ರಹವು ಸೆರೆಹಿಡಿದಿರುವ ಗುಜರಾತ್‌ನ ಅದ್ಭುತ ಚಿತ್ರಗಳನ್ನು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮಾಡಿರುವ ಸಾಧನೆ ಕರಾವಳಿ ಕ್ಷೇತ್ರದ ಅರ್ಥ ವ್ಯವಸ್ಥೆ ಬೆಳವಣಿಗೆಗೆ ನೆರವಾಗಲಿದೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next