ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಪ್ರಚಂಡ ಜಯಭೇರಿ ಗಳಿಸಿದ್ದು, 2017ರ ಚುನಾವಣೆಯಲ್ಲಿ ಗಳಿಸಿದ್ದಕ್ಕಿಂತ (99) ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ದಾಖಲೆ ಬರೆದಿದೆ.
ಇದನ್ನೂ ಓದಿ:ಹೀಗೂ ಬಾಲ್ ಹಾಕಬಹುದಾ?: ವಿಚಿತ್ರ ರೀತಿಯ ನೋ ಬಾಲ್ ಎಸೆದ ಮೆಹಿದಿ ಹಸನ್
ಮತಎಣಿಕೆ ಮುಂದುವರಿದಿರುವ ನಡುವೆಯೇ ಬಿಜೆಪಿ 157 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ರಾಜಕೀಯ ಪಡಸಾಲೆಯಲ್ಲಿನ ವಿಶ್ಲೇಷಣೆ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರ ಬಿರುಸಿನ ಪ್ರಚಾರ ಮತ್ತು ಕರಾರುವಕ್ಕಾದ ಸಂಘಟನಾ ಚಾತುರ್ಯದ ಪರಿಣಾಮ 2017ರಲ್ಲಿ 99 ಸ್ಥಾನ ಪಡೆದಿದ್ದ ಬಿಜೆಪಿ 2022ರ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸಲು ಕಾರಣವಾಗಿದೆ.
ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ನಡೆದ ಸಂದರ್ಭದಲ್ಲಿನ ಅನುಕಂಪದ ಹಿನ್ನೆಲೆಯಲ್ಲಿ 1985ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 149 ಸ್ಥಾನಗಳಲ್ಲಿ ಜಯಗಳಿಸಿ ದಾಖಲೆ ಬರೆದಿತ್ತು. ಆದರೆ ಇದೀಗ 27 ವರ್ಷಗಳ ಸುದೀರ್ಘ ಆಡಳಿತದ ಬಳಿಕವೂ ಬಿಜೆಪಿ 155 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಕಾಂಗ್ರೆಸ್ ದಾಖಲೆಯನ್ನು ಮುರಿಯಲು ಸಿದ್ದವಾಗಿದೆ.
Related Articles
2017ರಲ್ಲಿ ಕಾಂಗ್ರೆಸ್ ನತ್ತ ವಾಲಿದ್ದ ಪಾಟಿದಾರ್ ಸಮುದಾಯ?
2017ರ ಗುಜರಾತ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅಂದು ಬಿಜೆಪಿ ಸರ್ಕಾರ ರೈತ ಸಮುದಾಯದ ಪಾಟೀದಾರ್ ಆಂದೋಲನಾ ಮತ್ತು ಅವರ ಆಕ್ರೋಶವನ್ನು ಕಾಂಗ್ರೆಸ್ ಅಬ್ಬರದ ಪ್ರಚಾರದ ಮೂಲಕ ಮತಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಯೊಳಗಿನ ಆಂತರಿಕ ಅಸಮಾಧಾನ, ಆಡಳಿತ ವಿರೋಧಿ ಧೋರಣೆಯಿಂದಾಗಿ ಬಿಜೆಪಿ 99 ಸ್ಥಾನಗಳಿಸಿ ಅಧಿಕಾರದ ಗದ್ದುಗೆ ಏರಿದ್ದು, ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಜಯಗಳಿಸಿ ಪ್ರಬಲ ವಿಪಕ್ಷವಾಗಿ ಹೊರಹೊಮ್ಮಿತ್ತು.
ಆಡಳಿತ ವಿರೋಧಿ ಅಲೆಗೆ ಬಿಜೆಪಿಯ ಸರ್ಜರಿ!
ಗುಜರಾತ್ ನಲ್ಲಿ ವರ್ಚಸ್ಸಿಲ್ಲದ ರಾಜ್ಯ ನಾಯಕತ್ವದ ಪರಿಣಾಮ ಬಿಜೆಪಿ ಹೈಕಮಾಂಡ್ ಸಚಿವ ಸಂಪುಟವನ್ನು ಸಂಪೂರ್ಣವಾಗಿ ಪುನರ್ ರಚಿಸಿ, ಭೂಪೇಂದ್ರ ಪಟೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿತ್ತು. 2017ರಲ್ಲಿ ವಿಜಯ್ ರೂಪಾನಿ ಅವರನ್ನು ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿತ್ತು. ಆದರೆ ಪಕ್ಷದೊಳಗೆ ಅಸಮಾಧಾನ ತೀವ್ರಗೊಂಡ ನಂತರ 2021ರ ಸೆಪ್ಟೆಂಬರ್ 13ರಂದು ಭೂಪೇಂದ್ರ ಪಟೇಲ್ ಅವರನ್ನು ಸಿಎಂ ಮಾಡುವ ಮೂಲಕ ಬಂಡಾಯ ಶಮನ ಮಾಡಲಾಗಿತ್ತು.
ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ 2020ರ ಜುಲೈನಲ್ಲಿ ಪಟೇಲ್ ಸಮುದಾಯದ ಜಿತು ವಾಘಾನಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸಿಆರ್ ಪಾಟೀಲ್ ಅವರನ್ನು ನೂತನ ಅಧ್ಯಕ್ಷರನ್ನಾಗಿ ಬಿಜೆಪಿ ಆಯ್ಕೆ ಮಾಡಿತ್ತು. ರತ್ನಾಕರ್ ಅವರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿತ್ತು.
ಈ ಬಾರಿ 41 ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪಿತ್ತು:
2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡು ಸಕ್ರಿಯವಲ್ಲದ ಸುಮಾರು 41 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಇದರೊಂದಿಗೆ ಆಡಳಿತ ವಿರೋಧಿ ಅಲೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಹೊಸ ಮುಖಗಳಿಗೆ ಮಣೆ ಹಾಕಿರುವುದಾಗಿ ವರದಿ ವಿಶ್ಲೇಷಿಸಿದೆ.
ಖುದ್ದು ಅಖಾಡಕ್ಕೆ ಇಳಿದಿದ್ದ ಪ್ರಧಾನಿ ಮೋದಿ, ಶಾ:
ಗುಜರಾತ್ ಚುನಾವಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರ ಅಖಾಡಕ್ಕೆ ಇಳಿದಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣೆಗೂ ಒಂದು ವಾರದ ಮೊದಲೇ ಬೂತ್ ಮಟ್ಟದ ಸಿದ್ಧತೆಗಾಗಿ ರಾಜ್ಯಕ್ಕೆ ಆಗಮಿಸಿದ್ದರು. ಮೂಲಗಳ ಪ್ರಕಾರ, ಅಮಿತ್ ಶಾ ಪ್ರತಿದಿನ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ಸಭೆ ನಡೆಸಿ ಸೂಚನೆಗಳನ್ನು ನೀಡುವ ಮೂಲಕ ಪ್ರಚಾರ ಕಾರ್ಯವನ್ನು ಸೂಕ್ಷ್ಮವಾಗಿ ಅವಲೋಕಿಸಿರುವುದಾಗಿ ತಿಳಿಸಿದೆ.
ಅಷ್ಟೇ ಅಲ್ಲ ಚುನಾವಣಾ ಬಹಿರಂಗ ರಾಲಿಗಳಿಗಾಗಿ ಒಂದು ನಿರ್ದಿಷ್ಟ ಪ್ರದೇಶವನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದೀರಿ? ಮನೆ, ಮನೆ ಪ್ರಚಾರ ಸೇರಿದಂತೆ ಪ್ರಚಾರದ ಕಾರ್ಯದ ಕುರಿತ ಪ್ರತಿಯೊಂದು ವಿವರಗಳನ್ನು ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದರೆನ್ನಲಾಗಿದೆ. ಪಕ್ಷದ ಮುಖಂಡರ ಜೊತೆಗಿನ ಸಭೆಗಳನ್ನು ಬೆಳಗಿನ ಜಾವದವರೆಗೆ ನಡೆಸಿರುವುದಾಗಿ ಮೂಲಗಳು ವಿವರಿಸಿರುವುದಾಗಿ ವರದಿ ತಿಳಿಸಿದೆ.
ಗುಜರಾತ್ ನಲ್ಲಿನ ನಿರ್ದಿಷ್ಟ ಸಮುದಾಯಗಳ ಮತ ಸೆಳೆಯಲು ಕೂಡಾ ಬಿಜೆಪಿ ರಣತಂತ್ರ ರೂಪಿಸಿತ್ತು. ಆ ನಿಟ್ಟಿನಲ್ಲಿ ಉತ್ತರಪ್ರದೇಶ ಸಿಎಂ ಯೋಗಿ, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸೇರಿದಂತೆ ಇನ್ನಿತರ ಮುಖಂಡರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿಯ ಪ್ರಧಾನಿ ಮೋದಿ ಮತ್ತು ಶಾ ಜೋಡಿಯ ರಣತಂತ್ರ ಮೋಡಿ ಮಾಡುವಲ್ಲಿ ಯಶಸ್ವಿಯಾಗಿರುವುದಾಗಿ ವಿಶ್ಲೇಷಿಸಲಾಗಿದೆ.