ಕಾಶ್ಮೀರ: ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್ ಯುವಿ, ಪಂಚತಾರಾ ಹೋಟೆಲ್ ನಲ್ಲಿ ಆತಿಥ್ಯ…ಇದು ಯಾವುದೇ ಹಿರಿಯ ಅಧಿಕಾರಿಯ ಭೇಟಿಗೆ ನೀಡಿದ ಸವಲತ್ತುಗಳಲ್ಲ…ಗುಜರಾತ್ ನ ಖದೀಮನೊಬ್ಬ ತಾನು ಪ್ರಧಾನ ಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿ ಎಂದು ಸುಳ್ಳು ಹೇಳಿ ಜಮ್ಮು-ಕಾಶ್ಮೀರದ ಆಡಳಿತಾಧಿಕಾರಿಗಳನ್ನೇ ವಂಚಿಸಿದ ಘಟನೆ ಇದಾಗಿದೆ.
ಗುಜರಾತ್ ನ ಕಿರಣ್ ಭಾಯಿ ಪಟೇಲ್ ಎಂಬಾತ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ, ತಾನು ಪ್ರಧಾನಮಂತ್ರಿ ಸಚಿವಾಲಯದ ಹಿರಿಯ ಅಧಿಕಾರಿಯಾಗಿದ್ದು, ಗಡಿ ಪ್ರದೇಶವನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದ್ದ..ಅದಕ್ಕಾಗಿ ಜಮ್ಮು-ಕಾಶ್ಮೀರದ ಅಧಿಕಾರಿಗಳು ಝಡ್ ಪ್ಲಸ್ ಭದ್ರತೆ ನೀಡಿ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು.
ಈ ಘಟನೆ 2023ರ ಜನವರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶ್ರೀನಗರಕ್ಕೆ ಭೇಟಿ ನೀಡಿದ್ದ ಪಟೇಲ್ ಜಮ್ಮು-ಕಾಶ್ಮೀರದ ಅಧಿಕಾರಿಗಳ ಜತೆ ಸರಣಿ ಸಭೆ ಕೂಡಾ ನಡೆಸಿ, ಚರ್ಚಿಸಿದ್ದ. ಪ್ರಧಾನ ಮಂತ್ರಿ ಕಚೇರಿಯ ಸ್ಟ್ರೆಟಜಿ ಮತ್ತು ಪ್ರಚಾರ ನಿರ್ವಹಣೆಯ ಹೆಚ್ಚುವರಿ ನಿರ್ದೇಶಕ ಎಂಬಂತೆ ಪೋಸು ಕೊಟ್ಟಿದ್ದ ವಂಚಕ ಕಿರಣ್ ಭಾಯಿ ಪಟೇಲ್ ನನ್ನು ಹತ್ತು ದಿನಗಳ ಹಿಂದಷ್ಟೇ ಬಂಧಿಸಿರುವುದಾಗಿ ವರದಿ ತಿಳಿಸಿದೆ.
Related Articles
ಈತನ ಬಂಧನದ ವಿಷಯವನ್ನು ಪೊಲೀಸರು ರಹಸ್ಯವಾಗಿಟ್ಟಿದ್ದು, ಕೋರ್ಟ್ ಗೆ ಹಾಜರುಪಡಿಸಿದ ವೇಳೆ ನ್ಯಾಯಾಧೀಶರು ಪಟೇಲ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದ ಬಳಿಕವಷ್ಟೇ ಪ್ರಕರಣ ಬಹಿರಂಗವಾಗಿರುವುದಾಗಿ ವರದಿ ವಿವರಿಸಿದೆ.
ಕಿರಣ್ ಭಾಯಿ ಪಟೇಲ್ ವೆರಿಫೈಡ್ ಟ್ವೀಟರ್ ಖಾತೆಯನ್ನು ಹೊಂದಿದ್ದು, ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳಿದ್ದಾರೆ. ಗುಜರಾತ್ ನ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿನ್ಹಾ ವಾಘೇಲಾ ಕೂಡಾ ಫಾಲೋವರ್ಸ್ ಆಗಿದ್ದಾರೆ. ಮಾರ್ಚ್ 2ರಂದು ಜಮ್ಮು-ಕಾಶ್ಮೀರಕ್ಕೆ ಅಧಿಕೃತ ಭೇಟಿ ನೀಡಿರುವ ವಿಡಿಯೋ ಮತ್ತು ಫೋಟೋಗಳನ್ನು ಟ್ವೀಟರ್ ನಲ್ಲಿ ಶೇರ್ ಮಾಡಿಕೊಂಡಿದ್ದ. ವಿಡಿಯೋದಲ್ಲಿ ಕಿರಣ್ ಭಾಯಿ ಪಟೇಲ್ ಭೇಟಿ ನೀಡಿದ ವೇಳೆ ಯೋಧರು ಈತನ ಸುತ್ತ ಭದ್ರತೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕೂಡಾ ಸೆರೆಯಾಗಿತ್ತು.
ಟ್ವೀಟರ್ ಬಯೋದಲ್ಲಿರುವ ಮಾಹಿತಿಯಂತೆ, ಪಟೇಲ್ ವರ್ಜಿನಿಯಾದ ಕಾಮನ್ ವೆಲ್ತ್ ಯೂನಿರ್ವಸಿಟಿಯಿಂದ ಪಿಎಚ್ ಡಿ, ತಿರುಚ್ಚಿ ಐಐಎಂನಿಂದ ಎಂಬಿಎ, ಎಂಟೆಕ್ ಇನ್ ಕಂಪ್ಯೂಟರ್ ಸೈನ್ಸ್ ಮತ್ತು ಬಿ.ಇ ಇನ್ ಕಂಪ್ಯೂಟರ್ ಎಂಜಿನಿಯರಿಂಗ್ ಪದವಿ ಪಡೆದಿರುವುದಾಗಿ ಉಲ್ಲೇಖಿಸಿದ್ದಾನೆ.