ಇಳಕಲ್ಲ: ಯುವ ಶಕ್ತಿ ದುಶ್ಚಟಗಳ ದಾಸರಾಗುತ್ತಿದ್ದು, ಅವರು ಸನ್ಮಾರ್ಗದತ್ತ ಸಾಗಬೇಕಾದರೇ ಉತ್ತಮ ಮಾರ್ಗದರ್ಶನದ ಅವಶ್ಯಕತೆ ಇದೆ. ಈ ಕಾರ್ಯವನ್ನು ಜೇಸಿ ಸಂಸ್ಥೆ ಮಾಡಲು ಮುಂದಾಗಿದೆ ಎಂದು ಅಮೃತಸರ ನಗರದ ಜೇಸಿ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಜೆಎಫ್‌ಇ ದಿದಾ ಫೀರಜಾತಸಿಂಗ್ ಲೋಟೆಯಾ ಹೇಳಿದರು.
ನಗರದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಯ ಜ್ಯೂನಿಯರ್ ಚೇಂಬರ್ ಆಪ್ ಇಂಟರ್‌ನ್ಯಾಷನಲ್ ಸಂಸ್ಥೆಯ ವಲಯ 24ರ ಇಳಕಲ್ಲ ಘಟಕದಲ್ಲಿ ನಡೆದ ಮಲ್ಟಿ ಚಾಪ್ಟರ್ ವಿಜಿಟ್ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜೇಸಿ ಸಂಸ್ಥೆಯು 18 ವರ್ಷದಿಂದ 40 ವರ್ಷದ ಒಳಗಿನ ಯುವ ಜನಾಂಗಕ್ಕೆ ಉತ್ತಮ ಕಾರ್ಯ ಮಾಡುವ ಅನೇಕ ಮಾರ್ಗಗಳ ತರಬೇತಿ ಕೊಡಲು ಮುಂದಾಗಿದೆ. ಅದರ ಸದುಪಯೋಗವನ್ನು ಎಲ್ಲ ಯುವಕ ಯುವತಿಯರು ಪಡೆಯಬೇಕು. ಸಾರ್ವಜನಿಕರು ಸಾಮಾಜಿಕ ಸೇವೆ ಮಾಡುವ ಸಂಘ ಸಂಸ್ಥೆಗಳ ಸದಸ್ಯರಾಗುವ ಮೂಲಕ ತಮ್ಮ ದೈನಂದಿನ ಚಟುವಟಿಕೆಗಳ ಜತೆಗೆ ಸಾಮಾಜಿಕ ಚಿಂತನೆ ಹಾಗೂ ಸಮಾಜಸುಧಾರಣೆಯಂತಹ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಾರೆ.
ಇದರಿಂದ ಅವರ ಜೀವನ ಪರಿವರ್ತನೆ ಮಾಡಿಕೊಳ್ಳುವುದರ ಜತೆ ತಮ್ಮ ಉದ್ಯೋಗವನ್ನು ಹೆಚ್ಚಳ ಮಾಡಿಕೊಳ್ಳಲು ದಾರಿಯಾಗುತ್ತದೆ. ನಗರದ ಮಹಿಳಾ ಜೇಸಿ ಸಂಸ್ಥೆಯು ಸಮಾಜಮುಖಿ ಕಾರ್ಯ ಮಾಡುವುದರ ಮೂಲಕ ರಾಜ್ಯದಲ್ಲೇ ಅತ್ಯುತ್ತಮ ಸಂಸ್ಥೆ ಎಂದು ಗುರುತಿಸಿಕೊಂಡಿರುವುದು ಹೆಮ್ಮೆ ವಿಷಯವಾಗಿದೆ ಎಂದು ಹೇಳಿದರು.
ಜೇಸಿ ಸಂಸ್ಥೆಯ ವಲಯ 24ರ ಅಧ್ಯಕ್ಷೆ ಜೇಸಿ ದೀಪಿಕಾ ಬೀದರ್ ಮಾತನಾಡಿ, ಜೇಸಿ ಸಂಸ್ಥೆಯು ರಾಜ್ಯದ ದಕ್ಷಿಣ ಭಾಗದಲ್ಲಿ ಬೆಳವಣಿಗೆ ಹೊಂದುತ್ತಿದೆ. ಎಲ್ಲ ಸದಸ್ಯರು ಸಹಕರಿಸಬೇಕುಎಂದು ತಿಳಿಸಿದರು.
ಇಳಕಲ್ಲ ಜೇಸಿ ಸಿಲ್ಕ ಸಿಟಿ ಘಟಕ, ಇಳಕಲ್ಲಿನ ಜೇಸಿ ಮಹಾಂತಶ್ರೀ ಘಟಕ, ವಿಜಯಪುರದ ಜೇಸಿ ವಿಜಯಪುರ ಘಟಕ ಹಾಗು ಜೇಸಿ ವಿಜಯಪುರ ವಿಶ್ವರೂಪ ಘಟಕದ ಅದ್ಯಕ್ಷರು ಹಾಗು ಸದಸ್ಯರು ಭಾಗವಹಿಸಿದ್ದರು. ನಗರದ ಜೇಸಿ ಸಿಲ್ಕ ಸಿಟಿ ಸಂಸ್ಥೆಯ ಅಧ್ಯಕ್ಷೆ ಜೇಸಿ ವಿದ್ಯಾ ಸಜ್ಜನ ಅಧ್ಯಕ್ಷತೆ ವಹಿಸಿದ್ದರು. ಜೇಸಿ ವಲಯ 24ರ ಉಪಾದ್ಯಕ್ಷ ಗೌರಿಶ ಭಾರ್ಗವ, ನಗರದ ಜೇಸಿ ಅವಿನಾಶ ಅಕ್ಕಿ, ವಿಜಯಪುರದ ಜೇಸಿ ಹರವಿ, ಜೇಸಿ ಹಿರೇಮಠ ಉಪಸ್ಥಿತರಿದ್ದರು. ಮಹೇಶ್ವರಿ
ಮತ್ತು ರಾಜೇಶ್ವರಿ ಪ್ರಾರ್ಥಿಸಿದರು. ಮಮತಾ ಪಾಟೀಲ ಸ್ವಾಗತಿಸಿದರು. ರಶ್ಮಿ ಗವಿಮಠ ನಿರೂಪಿಸಿದರು.