Advertisement

ಆಪ್ತಮಿತ್ರ ಸಹಾಯವಾಣಿ ಮೂಲಕ ರೋಗಿಗಳಿಗೆ ಮಾರ್ಗದರ್ಶನ : ಸಚಿವ ಡಾ.ಕೆ.ಸುಧಾಕರ್

08:20 PM Apr 28, 2021 | Team Udayavani |

ಬೆಂಗಳೂರು:  ಆಪ್ತಮಿತ್ರ ಸಹಾಯವಾಣಿಯ ಮೂಲಕ ಎಲ್ಲ ಕೋವಿಡ್ ರೋಗಿಗಳಿಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಲು ಸಿದ್ಧತೆ ನಡೆದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಪಾಸಿಟಿವ್ ಆದ ರೋಗಿಗಳಿಗೆ 3-4 ಗಂಟೆಗಳೊಳಗೆ ಆಪ್ತಮಿತ್ರದ ಮೂಲಕ ಕರೆ ಮಾಡಲಾಗುವುದು. ವೈದ್ಯಕೀಯ ಹಿನ್ನೆಲೆ ಇರುವ ತಜ್ಞರು, ಪದವೀಧರರು ಕರೆ ಮಾಡಿ ಮಾರ್ಗದರ್ಶನ ನೀಡುತ್ತಾರೆ. ರೋಗ ಲಕ್ಷಣ ಇರುವವರಿಗೆ ಇತರೆ ಸಹ-ಅಸ್ವಸ್ಥತೆ, ದೇಹಸ್ಥಿತಿ ಮೊದಲಾದವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತದೆ. ನಂತರ ಅವರಿಗೆ ಮನೆ ಆರೈಕೆ, ಕೋವಿಡ್ ಕೇರ್ ಸೆಂಟರ್ ಅಥವಾ ಆಸ್ಪತ್ರೆ ಸೇರಿಸುವ ಬಗ್ಗೆ ನಿರ್ಧರಿಸಲಾಗುತ್ತದೆ. ಕೆಲವರು ಫೋನ್ ಗೆ ಸಿಗುವುದಿಲ್ಲ. ಅವರನ್ನು ಪ್ರತ್ಯೇಕವಾಗಿ ಸಂಪರ್ಕಕ್ಕೆ ಸಿಗದವರು ಎಂದು ಗುರುತಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಬಳಿಕ ಪೊಲೀಸರು ಸಂಪರ್ಕ ಪತ್ತೆ ಮಾಡುತ್ತಾರೆ. ಬೆಂಗಳೂರಿನ ಪ್ರತಿ ವಲಯದಲ್ಲಿ ಸಹಾಯವಾಣಿ ಸಿಬ್ಬಂದಿ ಇದ್ದು, ಅವರು ಮಾಹಿತಿ ಪಡೆಯುತ್ತಾರೆ ಎಂದು ವಿವರಿಸಿದರು.

ಸಹಾಯವಾಣಿ ಮೂಲಕ ಪ್ರತಿಯೊಬ್ಬ ಸೋಂಕಿತ ವ್ಯಕ್ತಿಗೂ ತ್ವರಿತವಾಗಿ ಮತ್ತು ಸಮರ್ಪಕವಾಗಿ ಮಾರ್ಗದರ್ಶನ ನೀಡಲು 6-8 ಸಾವಿರ ಸಿಬ್ಬಂದಿ ಬೇಕಾಗುತ್ತದೆ. ಇದಕ್ಕೆ ಖಾಸಗಿ ಕಂಪನಿಗಳ ಸಹಕಾರ ಪಡೆಯಲು ಯತ್ನಿಸಲಾಗಿದೆ. 8-10 ನಿಮಿಷ ರೋಗಿಯ ಜೊತೆ ಸಮಾಲೋಚಿಸುವಂತಾಗಬೇಕು. ಇಂತಹ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಇಡೀ ದೇಶದಲ್ಲಿ ಎಂಟು ಕಂಪನಿಗಳು ರೆಮ್ ಡಿಸಿವಿರ್ ತಯಾರಿಸುತ್ತವೆ. ಕೇಂದ್ರ ಸರ್ಕಾರ 1.22 ಲಕ್ಷ ವೈಲ್ ಗಳನ್ನು ಹಂಚಿಕೆ ಮಾಡಿದೆ. ರಾಜ್ಯದಲ್ಲಿ 3 ಲಕ್ಷ ಕೊರೊನಾ ರೋಗಿಗಳಿದ್ದಾರೆ. ಕೆಲ ಸೋಂಕಿತರು  ಮನೆಯಲ್ಲೇ ಯಾವುದೇ ವೈದ್ಯಕೀಯ ಮಾರ್ಗದರ್ಶನ ಇಲ್ಲದೆ ರೆಮ್ ಡಿಸಿವಿರ್ ಪಡೆಯುವುದು ಗೊತ್ತಾಗಿದೆ. ಮನೆಯಲ್ಲಿ ದಾಸ್ತಾನು, ವೈದ್ಯರಿಂದ ಬರೆಸಿಕೊಂಡು ಔಷಧಿ ಪಡೆಯುವುದು ಮೊದಲಾದ ಚಟುವಟಿಕೆ ಮಾಡಬಾರದು. ವೈದ್ಯರು ಕೂಡ ಈ ರೀತಿ ಔಷಧಿ ಬರೆದುಕೊಡಬಾರದು. ಅಗತ್ಯ ಇರುವವರಿಗೆ ಮಾತ್ರ ನೀಡಬೇಕು ಎಂದು ಎಚ್ಚರಿಕೆ ನೀಡಿದರು.

ಜ್ಯುಬಿಲೆಂಟ್ ಕಂಪನಿಗೆ ಔಷಧಿ ಪೂರೈಸಲು ಸೂಚಿಸಿದರೂ ಒಂದೂ ಔಷಧಿ ನೀಡಿಲ್ಲ. ಈ ಕಂಪನಿ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಹೆಚ್ಚುವರಿಯಾಗಿ 1.80 ಲಕ್ಷ ಔಷಧಿಯನ್ನು ಆರ್ಡರ್ ಮಾಡಲಾಗಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 800 ಟನ್ ಆಕ್ಸಿಜನ್ ಹಂಚಿಕೆ ಮಾಡಿದೆ. ಅಗತ್ಯ ಇರುವ ಆಸ್ಪತ್ರೆಗೆ ಅರ್ಧ ನೀಡದೆ ಪೂರ್ಣವಾಗಿ ಆಕ್ಸಿಜನ್ ನೀಡಬೇಕು ಎಂದು ಸೂಚಿಸಲಾಗಿದೆ. ಹಾಸಿಗೆ ನೀಡದ ಆಸ್ಪತ್ರೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

Advertisement

ಶಿಶು, ತಾಯಿ ಆಸ್ಪತ್ರೆಗಳನ್ನು ಕೋವಿಡ್ ಗೆ ಬಳಸುತ್ತಿಲ್ಲ. ಆದರೆ ಇಂತಹ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿರುವ ಗರ್ಭಿಣಿಯರು ಬಂದರೆ ದಾಖಲಿಸಿಕೊಳ್ಳಬೇಕು. ವಾಣಿ ವಿಲಾಸದಲ್ಲಿ ಈ ರೀತಿ ದಾಖಲಿಸಿಕೊಳ್ಳಲಾಗುತ್ತಿದೆ. ಅಂತಹ ಶೇ.50 ರಷ್ಟು ರೋಗಿಗಳಿಗೆ ಅವಕಾಶ ನೀಡಬೇಕೆಂದು. ದಾಖಲು ನಿರಾಕರಿಸುವಂತಿಲ್ಲ ಎಂದು ಸೂಚಿಸಲಾಗಿದೆ ಎಂದರು.

ನಿವೃತ್ತ ವೈದ್ಯರು, ಯುವವೈದ್ಯರು ಮನೆಯಲ್ಲೇ ಕುಳಿತು ಆನ್ ಲೈನ್ ನಲ್ಲಿ ರೋಗಿಗಳಿಗೆ ಸಲಹೆ ನೀಡಲು ಕೋರಲಾಗಿದೆ. ಸ್ವಯಂಪೇರಿತರಾಗಿ ಕೋವಿಡ್ ನಿಯಂತ್ರಣ ಕಾರ್ಯ ಬರಬಹುದು. ಇದಕ್ಕಾಗಿ ಪ್ರತ್ಯೇಕ ಪೋರ್ಟಲ್ ರೂಪಿಸಲಿದ್ದು, ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಇದಕ್ಕೆ ಪ್ರತ್ಯೇಕ ಸರ್ಟಿಫಿಕೇಟ್ ನೀಡುವ ಚಿಂತನೆ ಇದೆ. ಆಕ್ಸಿಜನ್ ಬೇಕಾದಲ್ಲಿ ಆಸ್ಪತ್ರೆಗಳು ಆನ್ ಲೈನ್ ನಲ್ಲೇ ಬೇಡಿಕೆ ಸಲ್ಲಿಸುವ ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ರೆಮ್ ಡಿಸಿವಿರ್ ಗೂ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next