ದಾವಣಗೆರೆ ಜಿಲ್ಲೆಯ ಸುಂದರ ತಾಣ. ಪುರಾಣದ ಪ್ರಕಾರ, ಈ ಪ್ರದೇಶವು ಗುಹಾಸುರನೆಂಬ ರಾಕ್ಷಸನ ಅಧೀನದಲ್ಲಿತ್ತು. ಪ್ರಜೆಗಳಿಗೂ, ದೇವತೆಗಳಿಗೂ ಉಪಟಳ ನೀಡಿ, ಆನಂದಿಸುತ್ತಿದ್ದ ಈತನಿಗೆ ಮಂತ್ರಿಯಿಂದ ತನ್ನ ಅಂತ್ಯದ ಸುಳಿವು ಗೋಚರವಾಗುತ್ತದೆ. “ಪರಮಶಕ್ತಿಶಾಲಿಗಳಾದ ಹರಿ ಮತ್ತು ಹರನನ್ನು ನೀನು ಸೋಲಿಸುವುದು ಅಸಾಧ್ಯ. ಅವರಿಬ್ಬರಲ್ಲಿ ಒಬ್ಬರಿಂದ ನಿನ್ನ ಮರಣ ಶತಃಸಿದ್ಧ’ ಎಂದು ಮಂತ್ರಿ ಹೇಳಿದಾಗ, ಸಾವಿನಿಂದ ತಪ್ಪಿಸಿಕೊಳ್ಳುವ ಹಾದಿ ಹುಡುಕುತ್ತಾನೆ. ಕಠಿಣ ತಪಸ್ಸಿನಿಂದ ಬ್ರಹ್ಮನನ್ನು ಓಲೈಸಿಕೊಂಡು, ಆತನಿಂದ ವರ ಪಡೆಯುತ್ತಾನೆ. ಅದರಂತೆ, ಹರಿಯಾಗಲೀ, ಹರನಾಗಲೀ, ಗುಹಾಸುರನನ್ನು ಸೋಲಿಸುವುದು ಅಸಾಧ್ಯವಾಗುತ್ತದೆ. ಪ್ರಜೆಗಳಿಗೆ, ದೇವತೆಗಳಿಗೆ ಇದರಿಂದ ಚಿಂತೆ ಶುರುವಾಗುತ್ತದೆ. ಲೋಕದ ಸಂಕಷ್ಟ ಅರಿತ ವಿಷ್ಣು ಮತ್ತು ಶಿವನು, ಒಂದೇ ರೂಪ ತಾಳಿ ಧರೆಗೆ ಇಳಿದು, ಗುಹಾಸುರನನ್ನು ಸಂಹರಿಸುತ್ತಾರೆ. ಹರಿಹರದಲ್ಲಿ ಇಂದಿಗೂ ಪುರಾಣ ಪ್ರಸಿದ್ಧ ದೇಗುಲವಿದ್ದು, ಶಿವನ ದೇಹದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ, ಹರಿಹರೇಶ್ವರ ಮೂರ್ತಿ ರೂಪು ತಳೆದಿರುವುದನ್ನು ನೋಡಬಹುದು. ಹೊಯ್ಸಳ ದೊರೆ 2ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಲ್ವಾಳನು ಇದರ ನಿರ್ಮಾತೃ ಎಂದು ಶಾಸನಗಳು ಹೇಳುತ್ತವೆ.