ಸುಳ್ಯ: ರಾಜ್ಯದ ಸರಕಾರಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಅತಿಥಿ ಶಿಕ್ಷಕರಿಗೆ ದಸರಾ ಬಳಿಕ ಈಗ ದೀಪಾವಳಿ ಹಬ್ಬದ ಸಂಭ್ರಮವೂ ಇಲ್ಲ. ಏಕೆಂದರೆ, ಈ ಸಿಬ್ಬಂದಿಗೆ ನಾಲ್ಕು ತಿಂಗಳಿನಿಂದ ಮಾಸಿಕ ಗೌರವಧನವೇ ಸಿಕ್ಕಿಲ್ಲ. 2018-19ನೇ ಸಾಲಿಗೆ ಪ್ರಾಥಮಿಕ ಶಾಲೆಗಳ 12,500 ಮತ್ತು ಪ್ರೌಢಶಾಲೆಗಳ 3,100 ಹುದ್ದೆಗಳು ಸೇರಿ ಖಾಲಿ ಇರುವ ಒಟ್ಟು 15,600 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಸರಕಾರವು ಶಿಕ್ಷಣ ಇಲಾಖೆ ಮೂಲಕ ನೇಮಕ ಮಾಡಿಕೊಂಡಿತ್ತು. ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರ ಗೌರವ ಧನ ತಿಂಗಳಿಗೆ 10,500 ರೂ. ಹಾಗೂ ಪ್ರೌಢ ಶಾಲಾ ಅತಿಥಿ ಶಿಕ್ಷಕರಿಗೆ 12,500 ರೂ. ನಿಗದಿಪಡಿಸಿ ಆದೇಶಿಸಿತ್ತು.
ಸರಕಾರದ ಸುತ್ತೋಲೆಯಂತೆ ಶಿಕ್ಷಣ ಇಲಾಖೆ ಈ ಜೂನ್‌ನಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿತ್ತು. ಆದರೆ
ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂಬುದು ಶಿಕ್ಷಕರ ಗೋಳು.
ಶಿಕ್ಷಕರ ಕೊರತೆಗೆ ಪರಿಹಾರ: ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತೀವ್ರ ಸ್ಥಿತಿಗೆ ತಲುಪಿದಾಗ ಅತಿಥಿ ಶಿಕ್ಷಕರ ನೇಮಕದ
ಮೂಲಕ ಪರಿಸ್ಥಿತಿಯಲ್ಲಿ ಸುಧಾರಣೆ ತರುವುದು ಸರಕಾರದ ಇಚ್ಛೆಯಾಗಿತ್ತು. ಹೀಗಾಗಿ ನೇಮಕ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚಿಸಿತ್ತು. ಆದರೆ ಬಳಿಕ ವೇತನ ನೀಡುವುದನ್ನು ಅದು ಮರೆತಂತಿದೆ ಎಂದು ಅತಿಥಿ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಳ ಇಲ್ಲದೆ ಕೆಲಸ ಮಾಡುವುದು ಹೇಗೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ಈ ಹಿಂದೆ 5,000 ರೂ. ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರಿಗೆ 6,500ರೂ. ವೇತನ ನಿಗದಿ ಪಡಿಸಲಾಗಿತ್ತು. ಈ ವರ್ಷ ಮಾಸಿಕ ಗೌರವ ಧನವನ್ನು ಸರಕಾರ ಹೆಚ್ಚಿಸಿತ್ತು.
ತಾಂತ್ರಿಕ ಕಾರಣದ ಸಬೂಬು: ಗೌರವಧನ ವಿಳಂಬವಾಗಲು ತಾಂತ್ರಿಕ ತೊಂದರೆಗಳು ಕಾರಣ ಎನ್ನುವುದು ಶಿಕ್ಷಣ ಇಲಾಖೆ ನೀಡುತ್ತ ಬಂದಿರುವ ಕಾರಣ. ಆದರೆ ಸರಕಾರದ ಅಧೀನದಲ್ಲಿರುವ ಶಿಕ್ಷಣ ಇಲಾಖೆಯೇ ಈ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಅದಾಗಿಲ್ಲ. ದಸರಾ ಬಳಿಕ ದೀಪಾವಳಿಗೂ ಅವರಿಗೆ ವೇತನ ಸಿಕ್ಕಿಲ್ಲ. ಸೂಕ್ತ ಸಮಯದಲ್ಲಿ ಸರಕಾರ ನಿಗದಿಪಡಿಸಿದ ವೇತನ ನೀಡುವುದಕ್ಕೆ ಇಲಾಖೆ ಮುತುವರ್ಜಿ ವಹಿಸಬೇಕು. ಇಲಾಖೆಯ ನಿರ್ಲಕ್ಷ್ಯದಿಂದಲೇ ಈ ಗೊಂದಲ ಉಂಟಾಗುತ್ತಿದೆ ಎನ್ನುವುದು ಅತಿಥಿ ಶಿಕ್ಷರ ವಲಯದಿಂದ ಕೇಳಿಬರುವ ಆರೋಪ. ವೇತನ ವಿಳಂಬ ಕುರಿತು ಅತಿಥಿ ಶಿಕ್ಷಕರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿ ವಿಚಾರಿಸಿದರೆ, ಸರಕಾರದಿಂದ ಬಿಡುಗಡೆಗೊಂಡಿದೆ, ಶೀಘ್ರ ನಿಮ್ಮ ಬ್ಯಾಂಕು ಖಾತೆಗೆ ತಲುಪುತ್ತದೆ ಎನ್ನುವ ಉತ್ತರ ನೀಡುತ್ತಾರೆ. ಆದರೆ ವೇತನ ಇನ್ನೂ ಶಿಕ್ಷಕರ ಖಾತೆ ಸೇರಿಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವೇತನ ನೀಡಲಾಗಿದೆ ಎನ್ನುವ ಮಾಹಿತಿ ಇದ್ದರೂ ಅದೂ
ಖಚಿತಗೊಂಡಿಲ್ಲ.
ಸರಕಾರದಿಂದ ಹಣ ಬಿಡುಗಡೆಗೊಂಡು ತಾ.ಪಂ. ಕಚೇರಿಗೆ ಬಂದಿದೆ. ತಾಂತ್ರಿಕ ಕಾರಣಗಳಿಂದ ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವಲ್ಲಿ ತೊಡಕು ಕಂಡುಬಂದ ಕಾರಣ ತಡವಾಗಿದೆ. ಕೆಲವೇ ದಿನಗಳಲ್ಲಿ ಅತಿಥಿ ಶಿಕ್ಷಕರ ಖಾತೆಗೆ ಬಾಕಿ ಇರುವ ಎಲ್ಲ ವೇತನ ಪಾವತಿಯಾಗಲಿದೆ.
● ವಾಲ್ಟರ್ ಡಿಮೆಲ್ಲೊ, ಡಿಡಿಪಿಐ, ಮಂಗಳೂರು
ಬಾಲಕೃಷ್ಣ ಭೀಮಗುಳಿ