Advertisement
ಅತಿಥಿ ಶಿಕ್ಷಕರ ಹುದ್ದೆ ತಾತ್ಕಾಲಿಕ. ಗೌರವಧನವೂ ಕಡಿಮೆ. ಅದೂ ಆರು ತಿಂಗಳಿಂದ ಕೈಗೆ ಸಿಗದೆ ಈ ಕುಟುಂಬಗಳೀಗ ಅತಂತ್ರ ಸ್ಥಿತಿ ಎದುರಿಸುತ್ತಿವೆ. ಸರಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗೆ ಅತಿಥಿ ಶಿಕ್ಷಕರನ್ನು ಜೂನ್ ತಿಂಗಳಿಂದಲೂ ನೇಮಕ ಮಾಡಿಕೊಳ್ಳಲಾಗಿದೆ. ಡಿಸೆಂಬರ್ ತಿಂಗಳಾದರೂ ಅವರ ಸ್ಥಿತಿಗತಿ ಬಗ್ಗೆ ಯಾರೂ ಕೇಳಿಲ್ಲ. ಹೀಗಾಗಿ, ಕುಟುಂಬ ನಿರ್ವಹಣೆ ಕಷ್ಟವಾಗಿದೆ.
ಕೆಲವು ಸರಕಾರಿ ಶಾಲೆಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಬೇರೆ ಜಿಲ್ಲೆ ಹಾಗೂ ಪ್ರದೇಶಗಳಿಂದ ವರ್ಗಾವಣೆ ಮತ್ತು ಭಡ್ತಿ ಹೊಂದಿ ಬಂದಿರುವ ಶಿಕ್ಷಕರು ಹಾಜರಾದ ಕಡೆಗಳಲ್ಲಿ ಅತಿಥಿ ಶಿಕ್ಷಕರ ಹುದ್ದೆಗಳನ್ನು ಸರಕಾರ ರದ್ದು ಮಾಡುತ್ತಿರುವುದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಇತ್ತ ಖಾಸಗಿ ಶಾಲೆಯೂ ಇಲ್ಲ, ಅತ್ತ ಸರಕಾರಿ ಅತಿಥಿ ಶಿಕ್ಷಕರಾಗಿಯೂ ಕೆಲಸವಿಲ್ಲದೆ ಪುತ್ತೂರು ತಾಲೂಕೊಂದರಲ್ಲೇ 24 ಜನರನ್ನು ನಡುನೀರಿನಲ್ಲಿ ಕೈಬಿಟ್ಟಂತಾಗಿದೆ. ಅರಿಯಡ್ಕ, ಪಳ್ಳತ್ತಾರು, ಬಿಳಿನೆಲೆ ಕೈಕಂಬ, ಚೇರು, ಇಡ್ಯಡ್ಕ, ನಾರ್ಯಬೈಲು, ಕಟ್ಟತ್ತಾರು, ಕಣಿಯಾರುಬೈಲು, ವಳಕಡಮ, ಕೊರ್ಬಂಡ್ಕ, ಮಾಲೆತ್ತೋಡಿ, ಮೊಗೇರಡ್ಕ, ಕೊಣಾಜೆ, ಇಡೊಟ್ಟು, ವಾಳ್ಯ, ಮುಕ್ವೆ, ಸಜಂಕಾಡಿ, ಒಟ್ಯ, ಕುಮಾರಮಂಗಲ, ಕುಂಡಾಜೆ, ನೂಜಿ ರೆಂಜಲಾಡಿ, ಆರೇಲ್ತಡಿ ಶಾಲೆಗಳ ತಲಾ 1 ಅತಿಥಿ ಶಿಕ್ಷಕರು, ಕಳ್ಳಪ್ಪಾರು ಶಾಲೆಯ 2 ಹುದ್ದೆ ರದ್ದ ಪಡಿಸಲಾಗಿದೆ. ಅತಿಥಿ ಶಿಕ್ಷಕರ ಜಿಲ್ಲಾ ಮಟ್ಟದ ಸಭೆ ಮಂಗಳೂರು ಪುರಭವನದಲ್ಲಿ ಡಿ. 15ರಂದು ಜಿಲ್ಲಾ ಸಮಿತಿ ಅಧ್ಯಕ್ಷೆ ರೂಪಾ ಅಧ್ಯಕ್ಷತೆಯಲ್ಲಿ ನಡೆದಿದೆ. ವೇತನಕ್ಕಾಗಿ ಡಿ. 31ರವರೆಗೆ ಕಾಯುವುದು, ಈ ಅವಧಿ ಯಲ್ಲಿ ವೇತನ ಬಿಡುಗಡೆ ಮಾಡದಿದ್ದರೆ ಜನವರಿ ಮೊದಲ ವಾರದಲ್ಲಿ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್ ಆದೇಶದಂತೆ 2019ರ ಜೂನ್‌ನಿಂದಲೇ ಈ ವೇತನ ನೀಡುವುದು, ಈ ಶೆಕ್ಷಣಿಕ ವರ್ಷದಲ್ಲಿ ಅತಿಥಿ ಶಿಕ್ಷಕರನ್ನೇ ಮುಂದವರಿಸಿ ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಜೂನ್‌ನಿಂದಲೇ ಕಾರ್ಯ ನಿರ್ವಹಿಸುವಂತೆ ಮೊದಲ ಆದ್ಯತೆ ನೀಡು ವುದು ಎಂದು ನಿರ್ಣಯಿಸಲಾಯಿತು.
Related Articles
ಅತಿಥಿ ಶಿಕ್ಷಕರಿಗೆ ವೇತನ ರಾಜ್ಯ ಸರಕಾರದಿಂದ ಇನ್ನೂ ಬಿಡುಗಡೆಯಾಗಿಲ್ಲ. ಬಿಡುಗಡೆಯಾದ ಕೂಡಲೇ ಅತಿಥಿ ಶಿಕ್ಷಕರ ಖಾತೆಗೆ ಜಮೆ ಮಾಡಲಾಗುವುದು.
– ವಾಲ್ಟರ್ ಡಿ’ಮೆಲ್ಲೊ
ಉಪನಿರ್ದೇಶಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು
Advertisement
ಪ್ರವೀಣ್ ಚೆನ್ನಾವರ