Advertisement

ಚಿನ್ನಾಭರಣ ಮಳಿಗೆ ದೋಚಿದ್ದವ ಪೊಲೀಸರ ಅತಿಥಿ

11:20 AM Jul 11, 2017 | |

ಬೆಂಗಳೂರು: ಕಾಟನ್‌ಪೇಟೆ ಮುಖ್ಯ ರಸ್ತೆಯಲ್ಲಿರುವ ಕಾಂಚನಾ ಜ್ಯುವೆಲ್ಲರಿ ಮಳಿಗೆಯ ಚಾವಣಿ ಕೊರೆದು ಒಂದು ಕೆ.ಜಿ. ಚಿನ್ನಾಭರಣ ಕದ್ದು ಗುಜರಾತ್‌ಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಪಶ್ಚಿಮ ವಿಭಾಗದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Advertisement

ಗುಜರಾತ್‌ನ ಅಹಮದಾಬಾದ್‌ ಮೂಲದ ಮೊಹಮ್ಮದ್‌ ಹುಸೇನ್‌(32) ಬಂಧಿತ. ಆರೋಪಿಯು ಜುಲೈ 9ರಂದು ಕಾಟನ್‌ಪೇಟೆಯಲ್ಲಿ ಚಿನ್ನಾಭರಣ ಮಳಿಗೆಯ ಮೊದಲ ಮಹಡಿಯಲ್ಲಿದ್ದ ಪ್ಲಾಟಿನಂ ಡಿಲಕ್ಸ್‌ ಲಾಡ್ಜ್ನಲ್ಲಿ ತಂಗಿದ್ದು, ಕೊಠಡಿ ಮೂಲಕವೇ ಕನ್ನ ಕೊರೆದು ಜ್ಯುವೆಲ್ಲರಿ ಮಳಿಗೆ ಒಳಗೆ ಇಳಿದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಿದ್ದ.

ಕಳವು ಮಾಡಿದ ನಂತರ ಆರೋಪಿಯು ಖಾಸಗಿ ಬಸ್‌ ಮೂಲಕ ಗುಜರಾತ್‌ಗೆ ಪರಾರಿಯಾಗಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು, ಆತ ಪ್ರಯಾಣಿಸುತ್ತಿದ್ದ ಬಸ್‌ ಅಡ್ಡಗಟ್ಟಿ ಬೆಳಗಾವಿಯ ಕಿತ್ತೂರು ಬಳಿ ಬಂಧಿಸಿದ್ದಾರೆ. ಈತನಿಂದ 1.ಕೆ.ಜಿ. 300 ಗ್ರಾಂ ಚಿನ್ನ, 10 ಕೆ.ಜಿ. ಬೆಳ್ಳಿ ವಸ್ತುಗಳು ಹಾಗೂ 2,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬಸ್‌ನಲ್ಲಿ ಪ್ರಯಾಣ
ಆರೋಪಿಯ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ತಂಡ ಆರಂಭದಲ್ಲಿ ರೈಲ್ವೆ ಮತ್ತು ಬಸ್‌ ಟಿಕೆಟ್‌ ಬುಕಿಂಗ್‌ ಮಾಡುವವರ ಹೆಸರು ಹಾಗೂ ವಿಳಾಸವನ್ನು ಕಲೆ ಹಾಕಿದೆ. ಈ ವೇಳೆ ಖಾಸಗಿ ಕಂಪನಿಯ ಸಿಬ್ಬಂದಿಯೊಬ್ಬರು ಮೊಹಮ್ಮದ್‌ ಹುಸೇನ್‌ ಎಂಬಾತ ಹುಬ್ಬಳ್ಳಿಯಿಂದ ಗುಜರಾತ್‌ನ ಅಹಮದಾಬಾದ್‌ಗೆ ಆಸನ ಕಾಯ್ದಿರಿಸಿದ್ದ ಎಂಬ ಮಾಹಿತಿ ನೀಡಿದ್ದಾರೆ.

ಕೂಡಲೇ ಆತನ ವಿಳಾಸ ಪತ್ತೆ ಮಾಡಿದ ತಂಡ ಖಾಸಗಿ ಬಸ್‌ನ ಮಾರ್ಗಗಳ ಪಟ್ಟಿಯನ್ನು ಪಡೆದುಕೊಂಡಿದೆ. ಹುಬ್ಬಳ್ಳಿಗೆ ಹೋಗುವಷ್ಟರಲ್ಲಿ ಬಸ್‌ ಹೋಗಿತ್ತು. ನಂತರ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ಹುಡುಕುತ್ತ ಹೋದಾಗ, ಕಿತ್ತೂರು ಬಳಿಯ ಸೆವೆನ್‌ ಲವ್ಸ್‌ ಹೋಟೆಲ್‌ ಬಳಿಯೇ ರಸ್ತೆಯಲ್ಲಿ ಬಸ್‌ ಅನ್ನು ಅಡ್ಡಗಟ್ಟಿ ಆಭರಣ ಸಮೇತ ಆರೋಪಿಯನ್ನು ಬಂಧಿಸಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನುಚೇತ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಕದ್ದ ಹಣದಲ್ಲೇ ತಂಗಿಯರ ಮದುವೆ
ಆರೋಪಿಯು ಆರ್ಥಿಕವಾಗಿ ದುರ್ಬಲನಾಗಿದ್ದು, ಅವಿವಾಹಿತನಾಗಿದ್ದಾನೆ. ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಈತ, ಈ ಮೊದಲು ಬೆಳಗಾವಿಯ ಸಹಕಾರಿ ಸಂಘದ ಕಚೇರಿಗೆ ನುಗ್ಗಿ 15 ಲಕ್ಷ ನಗದು ಹಾಗೂ 300 ಗ್ರಾಂ ಚಿನ್ನದ ಆಭರಣ ಕದ್ದಿದ್ದ. ಕಳವು ಮಾಡಿದ ನಂತರ ಊರಿಗೆ ತೆರಳಿದ ಆರೋಪಿ ಕದ್ದ ಹಣದಲ್ಲೇ ಇಬ್ಬರು ಸಹೋದರಿಯರ ಮದುವೆ ಮಾಡಿದ್ದ. ಮೇ 19ರಂದೇ ಬೆಂಗಳೂರಿಗೆ ಬಂದಿದ್ದ ಹುಸೇನ್‌, ಇಲ್ಲಿಂದ ಮಂಗಳೂರಿಗೆ ಹೋಗಿ, ಫೈನಾನ್ಸ್‌ ಕಚೇರಿಯೊಂದಕ್ಕೆ ಕನ್ನ ಹಾಕಿದ್ದ. ಈ ವೇಳೆ ಕೇವಲ 1,500 ರೂ. ಸಿಕ್ಕಿದ್ದರಿಂದ ನಿರಾಸೆಗೊಂಡು ಬೆಂಗಳೂರಿಗೆ ಬಂದು ಲಾಡ್ಜ್ನಲ್ಲಿ ತಂಗಿ, ಚಿನ್ನಾಭರಣ ಮಳಿಗೆ ಲೂಟಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ಹೊತ್ತು ಚಾವಣಿ ಕೊರೆದ!
ಜ್ಯುವೆಲ್ಲರಿ ಮಳೆಗೆಯಲ್ಲಿ ಕಳವು ಮಾಡಲು ಸಂಚು ರೂಪಿಸಿದ್ದ ಆರೋಪಿ, ಜೂನ್‌ 19ರಂದು 10 ಸಾವಿರ ಮುಂಗಡ ಹಣ ಕೊಟ್ಟು ಲಾಡ್ಜ್ನಲ್ಲಿ 102 ಸಂಖ್ಯೆಯ ಕೊಠಡಿ ಪಡೆದಿದ್ದಾನೆ. ನಿತ್ಯ ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಲಸಕ್ಕೆಂದು ಹೊರಗೆ ಹೋಗುತ್ತಿದ್ದು, ಸಂಜೆ 6 ಗಂಟೆ ಸುಮಾರಿಗೆ ವಾಪಸ್‌ ಬಂದು ಕೊಠಡಿಯ ಬಾಗಿಲು ಹಾಕಿಕೊಳ್ಳುತ್ತಿದ್ದ. ಕೃತ್ಯಕ್ಕಾಗಿಯೇ ಶಬ್ದರಹಿತ ಸಲಕರಣೆಗಳನ್ನುಬಳಸುತ್ತಿದ್ದ. ಹೀಗಾಗಿ ರಂಧ್ರ ಕೊರೆಯುತ್ತಿದ್ದ ಸಂಗತಿ ಯಾರಿಗೂ ಗೊತ್ತಾಗುತ್ತಿರಲಿಲ್ಲ.

ರಾತ್ರಿ 11 ಗಂಟೆ ನಂತರವೇ ರಂಧ್ರ ಕೊರೆಯುತ್ತಿದ್ದ. ಲಾಡ್ಜ್ಗೆ ಬಂದಾಗಿನಿಂದಲೂ ಆರೋಪಿಯು ಅಕ್ಕ-ಪಕ್ಕದ ಅಂಗಡಿಗಳಿಗೆ ಕನ್ನ ಹಾಕಲು ಪ್ರಯತ್ನಿಸುತ್ತಿದ್ದ. ಆದರೆ ಸಾಧ್ಯವಾಗಿರಲಿಲ್ಲ. ಲಾಡ್ಜ್ನ ನೆಲಮಹಡಿಯಲ್ಲೇ ಕಾಂಚನಾ ಆಭರಣ ಮಳಿಗೆ ಇರುವುದನ್ನು ಗಮನಿಸಿದ್ದ ಆರೋಪಿ, ಸುಮಾರು ಎರಡು ವಾರಗಳ ಕಾಲ ತಾನು ತಂಗಿದ್ದ ಕೊಠಡಿಯ ಮೋಲ್ಡ್‌ ಕೊರೆದು ಕನ್ನ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next