ಚಿಕ್ಕಮಗಳೂರು: ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮನ್ನು ಸೇವೆಯಿಂದ ಕೈ ಬಿಡದೆ ಸೇವಾ ಭದ್ರತೆ ನೀಡಬೇಕೆಂದು ಒತ್ತಾಯಿಸಿ ಅತಿಥಿ ಉಪನ್ಯಾಸಕರು ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ಗಾಂಧಿ ಪ್ರತಿಮೆ ಮುಂದೆ ತರಕಾರಿ- ಹಣ್ಣಿನ ಗಾಡಿಗಳೊಂದಿಗೆ ಆಗಮಿಸಿದ ಅತಿಥಿ ಉಪನ್ಯಾಸಕರು ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೇಗೌಡಬೆಂಬಲ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಪಪೂ ಕಾಲೇಜುಗಳಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ ಎಂದರೆ ಅದಕ್ಕೆ ಅತಿಥಿ ಉಪನ್ಯಾಸಕರ ಪರಿಶ್ರಮವೇ ಕಾರಣ. ಶಿಕ್ಷಣ ಕ್ಷೇತ್ರಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ನ್ಯಾಯಯುತವಾಗಿದೆ. ಸರ್ಕಾರ ಅವರ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅನುದಾನ ರಹಿತ ಶಾಲಾ ಶಿಕ್ಷಕರು ಮತ್ತು ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವಂತೆ ಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರ ಬಳಿ ಚರ್ಚಿಸಿದ್ದೇವೆ. ಆದರೆ ಅತಿಥಿ ಶಿಕ್ಷಕರ ಸಮಸ್ಯೆ ಬಗೆಹರಿದಿಲ್ಲವೆಂದ ಅವರು, ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ 35 ಸಾವಿರ ರೂ. ವೇತನ ನೀಡಿ ಅವರಿಗೆ ಸೇವಾ ಭದ್ರತೆ ನೀಡಬೇಕೆಂದು ಮನವಿ ಮಾಡಿದ್ದೇವೆ. ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಅಧ್ಯಕ್ಷ ಪರ್ವತೇಗೌಡ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಯಾವ ಸರ್ಕಾರ ಕೂಡ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ರಾಜ್ಯದ ಎಂಎಲ್‌ಸಿಗಳು ಸದನದಲ್ಲಿ ಅತಿಥಿ ಉಪನ್ಯಾಸಕರ ಪರ ಗಟ್ಟಿಧ್ವನಿ ಎತ್ತಬೇಕು ಎಂದರು.
ಮಾ. 23ರಿಂದ ಇಲ್ಲಿಯವರೆಗೂ ವೇತನ ಬಿಡುಗಡೆಯಾಗಿಲ್ಲ, ಕೋವಿಡ್ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಸರ್ಕಾರ ನಿಂತಿದೆ. ಆದರೆ, ಅತಿಥಿ ಉಪನ್ಯಾಸಕರಿಗೆ ಕೋವಿಡ್ ಪರಿಹಾರ ನೀಡದೆ ಕಡೆಗಣಿಸಲಾಗಿದೆ ಎಂದರು. ಸಮಯಕ್ಕೆ ಸರಿಯಾಗಿ ವೇತನ ಸಿಗದೇರಾಜ್ಯದಲ್ಲಿ ಇದುವರೆಗೂ 14 ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉತ್ತರ ಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡಿದರು. ನಮ್ಮ ರಾಜ್ಯದಲ್ಲಿ ಯಾಕೆ ಸಾಧ್ಯವಾಗಿಲ್ಲವೆಂದು ಪ್ರಶ್ನಿಸಿದರು.
ಸಮಿತಿ ಕಾರ್ಯದರ್ಶಿ ಪೂರ್ಣೇಶ್ ಮಾತನಾಡಿ, ರಾಜ್ಯದಲ್ಲಿ 14,564 ಅತಿಥಿ ಉಪನ್ಯಾಸಕರಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಸರ್ಕಾರ ಮಾಸಿಕ 11 ಸಾವಿರ ರೂ. ವೇತನ ಮಾತ್ರ ನೀಡುತ್ತಿದೆ. ಸರ್ಕಾರ ಕೋವಿಡ್ ಅವ ಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಬೇಕು. ಬಾಕಿ ವೇತನವನ್ನು ಶೀಘ್ರವೇ ನೀಡಬೇಕು. ಇತರೆ
ಇಲಾಖೆಯಲ್ಲಿ ಸಣ್ಣ ಹುದ್ದೆಯನ್ನಾದರೂ ತೋರಿಸಿ ನಮಗೆ ಸೇವಾ ಭದ್ರತೆ ನೀಡಬೇಕು. ಯಾವುದೇ ಕಾರಣಕ್ಕೂ ನಮ್ಮನ್ನು ಕೆಲಸದಿಂದ ತೆಗೆಯಬಾರದು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರಾಜ್ಯ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಮುಖಂಡರಾದ ಆರ್. ಗೋಪಿನಾಥ್, ಮಂಜುನಾಥ್, ವೀರಪ್ಪ ಶೆಟ್ಟಿ, ಮಧುಕುಮಾರ್, ಮೋಹನ್ ಕುಮಾರ್ ಮತ್ತಿತರರು ಇದ್ದರು.