ಕಲಬುರಗಿ: ನಾಥೂರಾಮ ಗೋಡ್ಸೆ ಹಿಂದೂ ಭಯೋತ್ಪಾದಕ ಎಂಬ ನಟ ಕಮಲ್ ಹಾಸನ್ ಹೇಳಿಕೆ ಬೇರೆ-ಬೇರೆ ರೀತಿಯಲ್ಲಿ ವಾಖ್ಯಾನ ಮಾಡಿರಬಹುದು. ಆ ಕಾಲದಲ್ಲಿ ಗೋಡ್ಸೆ ಮಾಡಿರುವುದು ಭಯೋತ್ಪಾದಕ ಕೆಲಸ ಅಲ್ಲದೇ ಮತ್ತೇನು ಎಂದು ಉಪಮುಖ್ಯಮಂತ್ರಿ ಡಾ| ಜಿ.ಪರಮೇಶ್ವರ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಕೊಂದಿರುವ ನಾಥೂರಾಮ ಗೋಡ್ಸೆಯನ್ನು ಬಿಜೆಪಿ ನಾಯಕರು ವೈಭವಿಕರಿಸುವುದು ಅತ್ಯಂತ ಖಂಡನೀಯ. ಗೋಡ್ಸೆ ಪರ ಹೇಳಿಕೆ ನೀಡುವ ಅನಂತಕುಮಾರ ಹೆಗಡೆ, ನಳೀನ್ ಕುಮಾರ ಕಟೀಲ್ ಮತ್ತು ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ತಮ್ಮ ನಡೆಯನ್ನು ಅವರೇ ಪರಾಮರ್ಶೆ ಮಾಡಿಕೊಳ್ಳಬೇಕು.
ರಾಜೀವ್ ಗಾಂಧಿ ಅವರ ಕುರಿತು ಪ್ರಧಾನಿ ಮೋದಿಯಿಂದ ಸೇರಿದಂತೆ ಬಿಜೆಪಿ ಮುಖಂಡರು ಮಾತನಾಡುತ್ತಿರುವುದು ಕೀಳು ಅಭಿರುಚಿಯಾಗಿದೆ. ಗಾಂಧಿ ಕೊಂದ ನಾಥೂರಾಮ ಜತೆ ರಾಜೀವ್ ಗಾಂಧಿ ಅವರನ್ನು ಹೋಲಿಕೆ ಮಾಡಿ ಕ್ಷಮೆಯಾಚಿಸುವ ಮುನ್ನ ಯೋಚಿಸಬೇಕಿತ್ತು ಎಂದರು.
ಸಂಘ ಪರಿವಾರದ ಸಿದ್ಧಾಂತಗಳಿಂದ ಗೋಡ್ಸೆ ಸ್ಪೂರ್ತಿ ಪಡೆದಿದ್ದ. ಅದೇ ರೀತಿ ಪ್ರಜ್ಞಾ ಸಿಂಗ್. ಗೋಡ್ಸೆಯನ್ನು ದೇಶಭಕ್ತ ಎನ್ನುವ ಪ್ರಜ್ಞಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯ ಸಮ್ಮತಿ ಇದೆ. ಇದು ಆರ್‌ಎಸ್‌ಎಸ್‌ನ ದ್ವೇಷ ಬಿತ್ತುವ ಪ್ರವೃತ್ತಿಯನ್ನು ವಿಸ್ತರಿಸುವ ಸಂಕೇತವೆ?
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ಅನಂತಕುಮಾರ್ ಹೆಗಡೆ ಹಾಗೂ ನಳೀನ್ ಕುಮಾರ್ ಕಟೀಲ್ ಅವರ ಟ್ವೀಟ್ ನೊಡಿದರೆ, ಮುಂದಿನ ಐದು ವರ್ಷ ಮೋದಿ ಪ್ರಧಾನಿಯಾಗಿ ದೇಶ ಆಳಿದರೆ, ಮಹಾತ್ಮಾ ಗಾಂಧಿ ದೇಶವಿರೋಧಿಯಾಗಿದ್ದ ಎಂಬ ಚರ್ಚೆಗಳು ಹಾಗೂ ದೇಶಾದ್ಯಂತ ಗೋಡ್ಸೆ ಸ್ಮಾರಕಗಳ ನಿರ್ಮಾಣ ಮಾಡಲಾಗುತ್ತದೆ. ಇದು ಆರ್‌ಎಸ್‌ಎಸ್‌ನವರ ಅಂತಿಮ ಅಜೆಂಡಾ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ.
ಅನಂತಕುಮಾರ್ ಹೆಗಡೆಯವರೆ, ಹೇಡಿಯಂತೆ ಸುಳ್ಳು ಹೇಳಿ ಓಡಿ ಹೋಗಬೇಡಿ. ಹಲವು ದಿನಗಳಿಂದ ಟ್ವೀಟ್ ಖಾತೆ ಹ್ಯಾಕ್ ಆಗಿದ್ದರೆ ಸೈಬರ್ ಕ್ರೈಂಗೆ ದೂರು ನೀಡಬೇಕಿತ್ತಲ್ಲವೇ? ನೀವು ಕೇಂದ್ರದ ಸಚಿವರು ನೆನಪಿರಲಿ. ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿ. ನಿಮ್ಮ ಮನೋ ವಿಕೃತಿಯನ್ನು ತಿದ್ದಿಕೊಳ್ಳಿ, ಕರುಣಾಮಯಿ ಬಾಪು ನಿಮ್ಮನ್ನು ಕ್ಷಮಿಸಬಹುದು.
-ಕರ್ನಾಟಕ ಕಾಂಗ್ರೆಸ್ ಟ್ವೀಟ್