ಗುಂಡ್ಲುಪೇಟೆ(ಚಾಮರಾಜನಗರ): ವ್ಯಕ್ತಿಯೊಬ್ಬರ ಭೂ ಪರಿವರ್ತನೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಗುಂಡ್ಲುಪೇಟೆ ತಾಲೂಕು ಕಚೇರಿ ಆವರಣದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಕಸಬಾ ಹೋಬಳಿ ಆರ್ ಐ ಶ್ರೀನಿವಾಸಮೂರ್ತಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಪಟ್ಟಣದ ಮುರುಳಿ ಜಮೀನಿನ ಅನ್ಯಕ್ರಾಂತ ಸಂಬಂಧ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಅಧಿಕಾರಿಗಳು ಬಲೆ ಬೀಸಿದ್ದಾರೆ. ಶ್ರೀನಿವಾಸಮೂರ್ತಿ ಲಂಚಗುಳಿತನದ ವಿರುದ್ಧ ಬೇಸತ್ತಿದ್ದ ಮುರುಳಿ ಎಸಿಬಿ ಮೊರೆ ಹೋಗಿದ್ದರು. ಬಲೆಗೆ ಬಿದ್ದ ಶ್ರೀನಿವಾಸಮೂರ್ತಿ ಲಂಚ ಪಡೆದ ಸ್ಥಳವನ್ನು ಎಸಿಬಿ ಪೊಲೀಸರು ಮಹಜರು ನಡೆಸಿದ್ದಾರೆ.
ಲಂಚದ ಹಣದೊಟ್ಟಿಗೆ ಶ್ರೀನಿವಾಸಮೂರ್ತಿಯನ್ನು ಎಸಿಬಿ ಡಿವೈಎಸ್ಪಿ ಸದಾನಂದ ತಿಪ್ಪಣ್ಣನವರ್ ತಂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಎಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಎಸಿಬಿ ಬಲೆಗೆ ಬಿದ್ದ ಶ್ರೀನಿವಾಸಮೂರ್ತಿ ನಿವೃತ್ತಿಗೆ ಇನ್ನೂ ಎರಡು ವರ್ಷ ಇತ್ತು ಎನ್ನಲಾಗಿದೆ. ತಾಲೂಕು ಕಚೇರಿಯಲ್ಲಿ ಲಂಚವಿಲ್ಲದೆ ಯಾವ ಕೆಲಸ ನಡೆಯುತ್ತಿಲ್ಲ ಎಂಬ ಸಾರ್ವಜನಿಕರ ಆರೋಪಕ್ಕೆ ಇಂದು ಆರ್‍ಐ ಎಸಿಬಿ ಬಲೆಗೆ ಬಿದ್ದದ್ದು ಪುಷ್ಠಿ ಬಂದಂತಾಗಿದೆ.
ಕಳೆದ ವರ್ಷ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ.ಶಿವಲಿಂಗಪ್ಪ ಎಸಿಬಿ ಬಲೆಗೆ ರೈತಸಂಘದ ಮುಖಂಡ ಕಡಬೂರು ಮಂಜು ಬೀಳಿಸುವಲ್ಲಿ ಸಫಲರಾಗಿದ್ದರು.
ಇದನ್ನೂ ಓದಿ : ತುಮಕೂರು: ಸಲಿಂಗ ಮದುವೆಗಾಗಿ ಪೊಲೀಸರ ಮೊರೆ ಹೋದ ಯುವತಿಯರು