Advertisement

Gudibande; ಕೆರೆ ನೀರು ಬಳಕೆಗೆ ಮುಂದಾದರೆ ಲೋಕಸಭೆ ಚುನಾವಣೆ ಬಹಿಷ್ಕಾರ?

06:55 PM Apr 01, 2024 | Team Udayavani |

ಗುಡಿಬಂಡೆ: ಜೆ.ಎಂ.ಎಫ್.ಸಿ ನ್ಯಾಯಾಲಯದ ವ್ಯಾಪ್ತಿಯ ವಾಟದಹೊಸಹಳ್ಳಿ ಕೆರೆ ನೀರನ್ನು ಗೌರಿಬಿದನೂರು ಪಟ್ಟಣದ ಕುಡಿಯುವ ನೀರಿಗೆ ಬಳಸಿಕೊಳ್ಳಲು ಶಾಸಕ ಪುಟ್ಟಸ್ವಾಮಿಗೌಡ ಮುಂದಾಗುತ್ತಿರುವುದರಿಂದ ವಾಟದಹೊಸಹಳ್ಳಿ ಕೆರೆ ನೀರು ಬಳಕೆದಾರರ ಸಂಘದ ವತಿಯಿಂದ ಲೋಕ ಸಭಾ ಚುನಾವಣೆ ಸಾಮೂಹಿಕ ಬಹಿಷ್ಕಾರ ಹಾಕಲು ಮುಂದಾಗುತ್ತಿರುವುದು ತಿಳಿದು ಬಂದಿದೆ.

Advertisement

ವಾಟದಹೊಸಹಳ್ಳಿ ಗ್ರಾಮದ ಅಮಾನಿಕೆರೆಯು ಸರಿ ಸುಮಾರು 200ಕ್ಕೂ ಹೆಚ್ಚು ವರ್ಷಗಳ ಇತಿಹಾಸವುಳ್ಳ ಕೆರೆಯಾಗಿದ್ದು, ಈ ಕೆರೆಯ ನೀರಿನಿಂದ ಸುತ್ತಮುತ್ತಲ ಸುಮಾರು 20 ಕ್ಕೂ ಹೆಚ್ಚು ಹಳ್ಳಿಗಳ ಕುಡಿಯುವ ನೀರಿಗೆ ಮತ್ತು ಸಣ್ಣ ಮತ್ತು ಅತಿಸಣ್ಣ ರೈತರು ಜೀವನ ನಡೆಸಲು ಜೀವನಾಧಾರವಾಗಿದ್ದು, ಈ ಕೆರೆಯ ನೀರು ಬಿಟ್ಟರೆ ಆ ಭಾಗದ ರೈತರಿಗೆ ನೀರಿನ ಆಸರೆ ಬೇರೆ ಇರುವುದಿಲ್ಲ.

1932ನೇ ಇಸವಿಯಲ್ಲಿ ಗುಡಿಬಂಡೆ ಪಟ್ಟಣದ ಅಮಾನಿಬೈರಸಾಗರ ಕೆರೆಯ ಕಟ್ಟೆ ಉನ್ನತೀಕರಣ ಮಾಡುವ ಸಮಯದಲ್ಲಿ ಈ ವಾಟದಹೊಸಹಳ್ಳಿಗೆ ಕೆರೆಗೆ ಬರುವ ಪೋಷಕ ಕಾಲುವೆಗೆ ಸಹ ಅಡ್ಡಲಾಗಿ ನೀರು ಬರುವುದಿಲ್ಲ ಎಂಬ ಕಾರಣಕ್ಕೆ ಮಹಾರಾಜರ ನೇತೃತ್ವದಲ್ಲಿ ಸಚಿವಾಲಯದಿಂದ ಗುಡಿಬಂಡೆ ಕೆರೆ ತುಂಬಿದಾಗ ಇಂತಷ್ಟು ನೀರು ಬಿಡಬೇಕು ಎಂಬ ಷರತ್ತನ್ನು ವಿಧಿಸಿ ಕೆರೆಯ ಕಟ್ಟೆ ಅಭಿವೃದ್ದಿ ಪಡಿಸಲಾಗಿತ್ತು.

ಅದರಂತೆ ಗುಡಿಬಂಡೆ ಅಮಾನಿಬೈರಸಾಗರ ಕೆರೆ ತುಂಬಿದ ಸಮಯದಲ್ಲಿ ವಾಟದಹೊಸಹಳ್ಳಿ ಗ್ರಾಮದ ಅಮಾನಿ ಕೆರೆಗೆ ನೀರನ್ನು ಬಿಡಿಸಿಕೊಂಡು, ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದು ವಾಡಿಕೆಯಾಗಿದೆ.

20215ರಲ್ಲಿ ಕುಡಿಯುವ ನೀರಿನ ಆಭಾವ ಆದಾಗ ಆಗಿನ ಜಿಲ್ಲಾದಿಕಾರಿಗಳು ಕೆರೆಯ ನೀರನ್ನು ಗೌರೀಬಿದನೂರು ಪಟ್ಟಣಕ್ಕೆ ಕುಡಿಯುವ ನೀರಿಗೆ ಬಳಸಿಕೊಳ್ಳಲು ಆದೇಶ ಮಾಡಿ, ಕೆರೆಯ ತೂಬನ್ನು ಮುಚ್ಚಿದ್ದರು, ಇದನ್ನು ಮನಗೊಂಡ ಆಗಿನ ಶಾಸಕ ಎನ್.ಹೆಚ್.ಶಿವಶಂಕರರೆಡ್ಡಿ ಕುಡಿಯುವ ನೀರಿಗೆ ಬಳಸಿಕೊಳ್ಳುವ ಪ್ರಸ್ಥಾಪನೆ ಮಾಡಿದಾಗ ಆ ಸಂದರ್ಭದಲ್ಲಿ ರೈತರು, ಗ್ರಾಮಸ್ಥರು ಹಿರಿಯರು ಸಭೆ ಸೇರಿ ಪ್ರತಿಭಟನೆಗೆ ಮುಂದಾದಾಗ, ಕೆರೆಯ ನೀರಿನ ಪ್ರಸ್ಥಾವನೆ ತಡೆ ಹಿಡಿದು, ಈಗಿನ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ಕೆರೆಯ ನೀರನ್ನು ತರುವಲ್ಲಿ ಅನುಮೋದನೆ ಪಡೆದಿದ್ದರು.

Advertisement

ಶಾಸಕ ಕೆ.ಹೆಚ್.ಪುಟ್ಟಸ್ವಾಮಿ ಗೌಡರು ಕಳೆದ ಎರಡು ತಿಂಗಳ ಹಿಂದೆ ಗೌರೀಬಿದನೂರು ನಗರ ಸಭೆಯಲ್ಲಿ ನಡೆದ ಸಭೆಯಲ್ಲಿ ಪಟ್ಟಣದ ನೀರಿನ ಭವಣೆಯನ್ನು ನೀಗಿಸಲು ವಾಟದಹೊಸಹಳ್ಳಿ ಕೆರೆಯ ನೀರನ್ನು ತರುತ್ತೇನೆ ಎಂದು ಹೇಳಿರುವುದು ಈ ಭಾಗದ ರೈತರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕುಡಿಯಲು ಮತ್ತು ರೈತರಿಗೆ ಉಪಯೋಗ: ವಾಟದಹೊಸಹಳ್ಳಿ ಕೆರೆಯಲ್ಲಿ ನೀರು ನಿಲ್ಲುವುದರಿಂದ ಸುತ್ತಮುತ್ತಲ ರೈತರ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹಣೆ ಹೆಚ್ಚಾಗಿ ಕುಡಿಯುವ ನೀರಿಗೆ ಮತ್ತು ರೈತರು ಬೆಳೆ ಬೆಳೆಯಲು ಸಹಾಯವಾಗುತ್ತಿದ್ದು, ಈಗ ಈ ಕೆರೆಯ ನೀರನ್ನು ಬೇರೆಡೆಗೆ ಬಳಸಿಕೊಂಡರೆ ಈ ಭಾಗದ ಸಾರ್ವಜನಿಕರು, ರೈತರು ಸಂಕಷ್ಟಕ್ಕೆ ಒಳಗಾಗಬೇಕಾಗಿದೆ.

ಬಹಿಷ್ಕಾರದ ಹೆಚ್ಚರಿಕೆ: ವಾಟದಹೊಸಹಳ್ಳಿ ಕೆರೆ ನೀರು ಗೌರೀಬಿದನೂರು ಪಟ್ಟಣಕ್ಕೆ ಕುಡಿಯುವ ನೀರಿನ ಬಳಸಿಕೊಳ್ಳು ಶಾಸಕ ಪುಟ್ಟಸ್ವಾಮಿ ಗೌಡ ಮುಂದಾಗುತ್ತಿರುವುದರಿಂದ, ಈ ಭಾರಿ ನಡೆಯುವ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ಸರ್ಕಾರಕ್ಕೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

ಜಿಲ್ಲಾಧಿಕಾರಿ, ಅಧಿಕಾರಿಗಳಿಗೆ ಮನವಿ: ವಾಟದಹೊಸಹಳ್ಳಿ ಕೆರೆಯ ನೀರನ್ನು ಗೌರೀಬಿದನೂರು ಪಟ್ಟಣಕ್ಕೆ ಬಳಸಿಕೊಳ್ಳದಂತೆ ತಡೆಹಿಡಿಯಲು ವಾಟದಹೊಸಹಳ್ಳಿ ಕೆರೆ ನೀರು ಬಳಕೆದಾರರ ಸಂಘದ ವತಿಯಿಂದ ರೈತ ಸಂಘದ ಅಧ್ಯಕ್ಷ ಮಾಳಪ್ಪ, ರೈತ ಮುಖಂಡ ಕೆಂಪುರಂಗಪ್ಪ, ವಿ.ಎಂ.ಮಂಜುನಾಥ್, ಲಕ್ಷ್ಮಣರೆಡ್ಡಿ, ವೆಂಕಟರೋಣಪ್ಪ ಮತ್ತು ಇತರರರು ಸೇರಿ ಜಿಲ್ಲಾಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಗೌರೀಬಿದನೂರು ತಹಶೀಲ್ದಾರ್ ರವರುಗಳಿಗೆ ಸಹ ಮನವಿಯನ್ನು ಸಹ ನೀಡಿದ್ದಾರೆ.

ಮಾಳಪ್ಪ, ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ, ವಾಟದಹೊಸಹಳ್ಳಿ ಹೇಳಿಕೆ: ವಾಟದಹೊಸಹಳ್ಳಿ ಕೆರೆಯ ನೀರು ಸುತ್ತಮುತ್ತಲಹಳ್ಳಿಗಳ ಜೀವನಾಡಿಯಾಗಿದ್ದು, ಈಗಾಗಲೇ ಮಳೆ ಕೈಕೊಟ್ಟಿರುವುದರಿಂದ ಈ ನೀರನ್ನು ಬೇರೆಡೆಗೆ ಬಳಸಿಕೊಂಡರೇ ರೈತರು ಸಂಕಷ್ಟಕ್ಕೆ ಸಿಲುಕಬೇಕಾದ ಕಾರಣ ಕೆರೆ ನೀರನ್ನು ಯಾವುದೇ ಕಾರಣಕ್ಕೆ ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಾರದು.

ವರದಿ: ಎನ್.ನವೀನ ಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next